ಬೆಂಗಳೂರು(ಮೇ.16): ಪುತ್ತೂರಿನ ಬ್ಯಾಂಕ್‌ವೊಂದರ ಸಾಮಾನ್ಯ ನೌಕರ ಮುತ್ತಪ್ಪ ರೈ, ದಶಕಗಳು ರಾಜಧಾನಿ ಬೆಂಗಳೂರಿನ ಪಾತಕಲೋಕದಲ್ಲಿ ‘ಡಾನ್‌’ ಆಗಿ ಮೆರೆದು ಕೊನೆಗೆ ಅದರಲ್ಲಿ ವೈರಾಗ್ಯ ಪಡೆದವರಂತೆ ನಿವೃತ್ತಿ ಘೋಷಿಸಿ ನಾಡು-ನುಡಿ ರಕ್ಷಣೆಗೆ ಸಂಘಟನೆ ಕಟ್ಟಿಕನ್ನಡ ಕಟ್ಟಾಳು ಎನ್ನುತ್ತಲೇ ಬದುಕಿಗೆ ವಿದಾಯ ಹೇಳಿದ ಪರಿಯೇ ರೋಚಕವಾಗಿದೆ.

ಬ್ಯಾಂಕ್‌ನ ಆಡಳಿತ ಮಂಡಳಿ ವಿರುದ್ಧ ನೌಕರರ ಪರವಾಗಿ ದನಿ ಎತ್ತುವ ಮೂಲಕ ಸಂಘರ್ಷದ ಬದುಕಿಗೆ ಮುನ್ನುಡಿ ಬರೆದ ಮುತ್ತಪ್ಪ ರೈ, 80ರ ದಶಕದಲ್ಲೇ ಬೆಂಗಳೂರಿನ ಭೂಗತ ಜಗತ್ತನ್ನು ಅಳುತ್ತಿದ್ದ ರೌಡಿ ಜಯರಾಜ್‌ ಎದೆಗೆ ಗುಂಡು ಹಾರಿಸುವ ಮೂಲಕ ಪಾತಕಲೋಕದ ‘ದೊರೆ’ ಪಟ್ಟಅಲಂಕರಿಸಿದರು. ಇದರೊಂದಿಗೆ ಲಾಂಗು, ಮಚ್ಚುಗಳೇ ಸದ್ದು ಮಾಡುತ್ತಿದ್ದ ಬೆಂಗಳೂರಿನ ಅಪರಾಧ ಜಗತ್ತಿಗೆ ‘ಮುಂಬೈ ಅಂಡರ್‌ವಲ್ಡ್‌ರ್‍’ನಂತೆ ಬಂದೂಕು, ಗುಂಡುಗಳನ್ನು ಮುತ್ತಪ್ಪ ರೈ ಪರಿಚಯಿಸಿದರು.

ದುಬೈನಲ್ಲೇ ಕುಳಿತು ಬೆಂಗಳೂರು, ಮಂಗಳೂರು, ಮುಂಬೈ ಮಾಯಲೋಕದಲ್ಲಿ ತನ್ನ ಇಷಾರೆಗೆ ತಕ್ಕಂತೆ ಕುಣಿಸುತ್ತಿದ್ದ, ಅಂತಾರಾಷ್ಟ್ರೀಯ ಡಾನ್‌ಗಳ ಜೊತೆ ‘ಮುತ್ತಪ್ಪಣ್ಣ’ ಎಂದೂ ಕರೆಸಿಕೊಳ್ಳತ್ತಿದ್ದ ರೈ, ಜೀವತಾವಧಿ ಅಂತಿಮ ದಿನಗಳಲ್ಲಿ ರಾಮನಗರ ಜಿಲ್ಲೆಯ ಬಿಡದಿ ಎಂಬ ಪುಟ್ಟಪಟ್ಟಣದಲ್ಲಿ ಮಾಜಿ ಡಾನ್‌ ಆಗಿ ಲೈಫ್‌ಗೆ ಗುಡ್‌ ಬೈ ಹೇಳಿದರು.

ದಾವೂದ್‌ ಜತೆ ಸ್ನೇಹ:

80ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಜಯಾ ಬ್ಯಾಂಕ್‌ನಲ್ಲಿ ನೌಕರಿಯಲ್ಲಿದ್ದ ಮುತ್ತಪ್ಪ ರೈ, ಆಡಳಿತ ಮಂಡಳಿ ವಿರುದ್ಧ ಗಲಾಟೆಯಲ್ಲಿ ಮೊದಲ ಬಾರಿಗೆ ಜೈಲು ಸೇರಿದರು. ಬಳಿಕ ಬ್ಯಾಂಕ್‌ ಕೆಲಸ ತೊರೆದು ಮುಂಬೈಗೆ ಹಾರಿದರು. ಅಲ್ಲಿಂದ ಬೆಂಗಳೂರಿಗೆ ಬಂದು ಹೋಟೆಲ್‌ ಆರಂಭಿಸಿದರು. ಆದರೆ ಆ ವೇಳೆಗೆ ಬೆಂಗಳೂರಿನಲ್ಲಿ ರೌಡಿ ಎಂ.ಪಿ.ಜಯರಾಜ್‌ನ ಅಬ್ಬರ ದಿನಗಳು. ಅಂದು ಹಫ್ತಾ ವಸೂಲಿ ವಿಚಾರದಲ್ಲಿ ಜಯರಾಜ್‌ ಜತೆ ದ್ವೇಷ ಕಟ್ಟಿಕೊಂಡ ರೈ, ಕೊನೆಗೆ ಆ ಹಗೆತನವನ್ನು ಕೊಲೆಯೊಂದಿಗೆ ಮುಕ್ತಾಯಗೊಳಿಸಿದರು.

ದುಬೈನಿಂದಲೇ ರೌಡಿ ಬೂಟ್‌ಹೌಸ ಕುಮಾರ ಅಲಿಯಾಸ್‌ ಅಯಿಲ್‌ ಕುಮಾರನಿಂದ ಜಯರಾಜ್‌ ಹತ್ಯೆಗೆ ಸುಪಾರಿ ಪಡೆದ ರೈ, 1989ರ ಅಕ್ಟೋಬರ್‌ 21 ರಂದು ಬೆಂಗಳೂರಿನ ಸಿದ್ದಾಪುರ ಪೊಲೀಸ್‌ ಠಾಣೆಯಲ್ಲಿ ಸಹಿ ಮಾಡಿ ಹೊರ ಬರುತ್ತಿದ್ದ ಜಯರಾಜ್‌ ಮೇಲೆ ಗುಂಡಿನ ದಾಳಿ ನಡೆಸಿ ನಡು ರಸ್ತೆಯಲ್ಲೇ ಕೊಂದು ಹಾಕಿದ್ದರು. ಆನಂತರ ಪೊಲೀಸರ ಎನ್‌ಕೌಂಟರ್‌ಗೆ ಬೆದರಿದ ರೈ, ದುಬೈಗೆ ಪರಾರಿಯಾದರು. ವಿದೇಶದಲ್ಲೇ ಕುಳಿತು ಬೆಂಗಳೂರಿನ ಪಾತಕ ಜಗತ್ತಿನ ಮೇಲೆ ಅಧಿಪತ್ಯ ಸ್ಥಾಪಿಸಿದರು. ಭೂ ಮಾಫಿಯಾ ನಿಯಂತ್ರಿಸಿದರು.

ಜಯರಾಜ್‌ ಭೀಕರ ಹತ್ಯೆ ಬಳಿಕ ರೈ ವಿರುದ್ಧ ಮಡಿಕೇರಿಯ ಕಾಫಿ ವರ್ತಕ ರಾಬರ್ಟ್‌ ಡಿಸಿಲ್ವ, 2001ರಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಸುಬ್ಬರಾಜ್‌ ಸೇರಿದಂತೆ 8ಕ್ಕೂ ಹೆಚ್ಚು ಕೊಲೆ, ಹತ್ತಾರು ಜೀವ ಬೆದರಿಕೆ ಹಾಗೂ ಅಕ್ರಮ ಭೂ ಕಬಳಿಕೆ ಆರೋಪಗಳು ಕೇಳಿ ಬಂದಿತು. ಭಾರತದ ಮೋಸ್ಟ್‌ ವಾಟೆಂಡ್‌ ಉಗ್ರ ದಾವೂದ್‌ ಇಬ್ರಾಹಿಂನ ಡಿ ಕಂಪನಿ ಹಾಗೂ ರವಿ ಪೂಜಾರಿ ಜತೆ ರೈ ಸ್ನೇಹದ ಕಳಂಕ ಮೆತ್ತಿಕೊಂಡಿತ್ತು. ಇತ್ತೀಚಿಗೆ ರವಿ ಪೂಜಾರಿ ಬಂಧನ ಬಳಿಕ ರೈ ಅನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದು ಇದಕ್ಕೆ ಉದಾಹರಣೆ.

2002ರಲ್ಲಿ ದುಬೈನಲ್ಲಿ ರೈರನ್ನು ಸಿಬಿಐ ಬಂಧಿಸಿ ಕರೆತಂದಿತು. ಆನಂತರ ಕೆಲ ತಿಂಗಳುಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಳೆದ ರೈ, ಆನಂತರ ತಮ್ಮ ಮೇಲಿದ್ದ ಎಲ್ಲ ಅಪರಾಧ ಪ್ರಕರಣಗಳಲ್ಲೂ ದೋಷಮುಕ್ತರಾದರು. ಜೈಲಿನಿಂದ ಹೊರಬರುತ್ತಲೇ ಅಂಡರ್‌ ವಲ್ಡ್‌ರ್‍ ಲೈಫ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿ ರೈ, ರಾಮನಗರದ ಬಿಡದಿಯಲ್ಲಿ ಮನೆ ಕಟ್ಟಿಕೊಂಡರು ನೆಲೆಸಿದರು. ನಾಡು ರಕ್ಷಣೆಗೆ ಜಯ ಕರ್ನಾಟಕ ಹೆಸರಿನಲ್ಲಿ ಕನ್ನಡ ಪರ ಸಂಘಟನೆ ಕಟ್ಟಿಕನ್ನಡ ಸೇವಕನೆಂದು ಹೇಳುತ್ತಲೇ ಜೀವನ ಯಾನಕ್ಕೆ ‘ಶುಭಂ’ ಹೇಳಿದರು.