ಜಿಲ್ಲೆಯ ಬಿಡದಿ ಬಳಿಯ ಫಾಮ್‌ಹೌಸ್‌ನಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಮಧ್ಯರಾತ್ರಿ ನಡೆದಿದೆ. ಈ ದಾಳಿಯಲ್ಲಿ ರಿಕ್ಕಿ ರೈ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರೊಂದಿಗಿದ್ದ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ, ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಮನಗರ (ಏ.19): ಜಿಲ್ಲೆಯ ಬಿಡದಿ ಬಳಿಯ ಫಾಮ್‌ಹೌಸ್‌ನಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಮಧ್ಯರಾತ್ರಿ ನಡೆದಿದೆ. ಈ ದಾಳಿಯಲ್ಲಿ ರಿಕ್ಕಿ ರೈ ಅವರಿಗೆ ತೀವ್ರ ಗಾಯಗಳಾಗಿದ್ದು, ಅವರೊಂದಿಗಿದ್ದ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ, ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೊಲೀಸರು ಈ ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ಮಾಡಲು ಮುಂದಾಗಿದ್ದಾರೆ. ಮುತ್ತಪ್ಪ ರೈ ಅವರ ಭೂಗತ ಲೋಕದ ಹಿನ್ನೆಲೆಯಿಂದ ರಿಕ್ಕಿ ರೈ ಟಾರ್ಗೇಟ್ ಆಗಿದ್ದಾರಾ? ರಿಕ್ಕಿ ರೈ ಅವರ ಬ್ಯುಸಿನೆಸ್ ವಿಷಯಕ್ಕೆ ಸಂಬಂಧಿಸಿದಂತೆ ಫೈರಿಂಗ್ ನಡೆದಿದೆಯಾ? ಹಳೆಯ ವೈರತ್ವದಿಂದ ರಿಕ್ಕಿ ರೈ ವಿರುದ್ಧ ದಾಳಿ ನಡೆಸಲಾಗಿದೆಯಾ? ಹಣಕಾಸಿನ ಗಲಾಟೆಯಿಂದ ಕೊಲೆಗೆ ಸಂಚು ರೂಪಿಸಲಾಗಿದೆಯಾ? ವೈಯಕ್ತಿಕ ದ್ವೇಷದಿಂದ ಈ ದಾಳಿ ನಡೆದಿದೆಯಾ? ಅಥವಾ ರಿಯಲ್ ಎಸ್ಟೇಟ್ ವಿವಾದದಿಂದ ಗುಂಡಿನ ದಾಳಿ ಆಗಿರಬಹುದಾ? ಹೀಗೆ ಈ ಎಲ್ಲ ಕೋನಗಳಿಂದಲೂ ಪೊಲೀಸರು ತನಿಖೆಗೆ ಇಳಿದಿದ್ದಾರೆ.
ಮುತ್ತಪ್ಪ ರೈ ಅವರ ₹2000 ಕೋಟಿ ಆಸ್ತಿಗೆ ಸಂಬಂಧಿಸಿದ ವಿವಾದದಿಂದ ರಿಕ್ಕಿ ರೈ ಕೊಲೆಗೆ ಯತ್ನ ನಡೆದಿರಬಹುದು ಎಂಬ ಅನುಮಾನವೂ ಇದೆ. ಮುತ್ತಪ್ಪ ರೈ ಅವರು ಬೆಂಗಳೂರು, ಗೋವಾ, ಮೈಸೂರು, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ವ್ಯಾಪಕ ಬ್ಯುಸಿನೆಸ್ ಹೊಂದಿದ್ದರು. ಈಗ ಈ ಬ್ಯುಸಿನೆಸ್‌ನ್ನು ರಿಕ್ಕಿ ರೈ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿಯ ಕಾರಣಗಳನ್ನು ಪೊಲೀಸರು ಆಳವಾಗಿ ಪರಿಶೀಲಿಸುತ್ತಿದ್ದಾರೆ.
ಫೈರಿಂಗ್ ಸ್ಥಳದಿಂದ 2ಕಿಮೀ ದೂರ ಕರೆದೊಯ್ದ ಶ್ವಾನ!
ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿದ ಪೊಲೀಸ್ ಶ್ವಾನ ದಳವು ಫೈರಿಂಗ್ ಸ್ಥಳದಿಂದ ಸುಮಾರು 2 ಕಿ.ಮೀ ದೂರದ ಹೆಗ್ಗಡಗೆರೆವರೆಗೆ ಕರೆದೊಯ್ದಿದೆ. ಶ್ವಾನವು ಕಾಂಪೌಂಡ್‌ನಿಂದ ಹೊರಗೆ ಓಡಿ, ದೊಡ್ಡ ಮುದುವಾಡಿ ಕಡೆಗೆ ಸಾಗಿ, ಹೆಗ್ಗಡಗೆರೆಯಲ್ಲಿ ನಿಂತಿದೆ. ಇದರಿಂದ ಆಗಂತುಕರು ವಾಹನದಲ್ಲಿ ಬಂದು ದಾಳಿ ನಡೆಸಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿ ಸೋಕೋ ಟೀಂ ಪರಿಶೀಲನೆ ನಡೆಸಿದ್ದು, ಮೊಬೈಲ್, ಬ್ಯಾರೆಲ್ ಗನ್‌ನ ಬುಲೆಟ್ ಶೆಲ್ ಸೇರಿದಂತೆ ಮಹತ್ವದ ಸಾಕ್ಷಿಗಳು ಲಭ್ಯವಾಗಿವೆ.
ಇದನ್ನೂ ಓದಿ: ಶಾಪಿಂಗ್ ಬಂದ ಯುವತಿ ಜೊತೆ ಅಸಭ್ಯ ವರ್ತನೆ; ಯುವಕನಿಗೆ ನಡುರಸ್ತೇಲಿ ಧರ್ಮದೇಟು!
ರಾಮನಗರ ಎಸ್‌ಪಿ ಹೇಳೋದೇನು?
ಘಟನೆ ಸಂಬಂಧ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ಪ್ರತಿಕ್ರಿಯಿಸಿದ್ದು, 'ಮಧ್ಯರಾತ್ರಿ ರಿಕ್ಕಿ ರೈ ಮನೆಯಿಂದ ಹೊರಗೆ ಹೋಗುವ ವೇಳೆ ಘಟನೆ ನಡೆದಿದೆ. ಮೇಲ್ನೋಟಕ್ಕೆ ಒಂದು ಸುತ್ತು ಫೈರಿಂಗ್ ಆಗಿರುವ ಶಂಕೆಯಿದೆ. ರಿಕ್ಕಿ ರೈಗೆ ತೀವ್ರ ಗಾಯವಾಗಿದ್ದು, ಅವರೊಂದಿಗಿದ್ದ ಒಬ್ಬರಿಗೆ ಸಣ್ಣ ಗಾಯಗಳಾಗಿವೆ. FSL ವರದಿ ಬಂದ ಬಳಿಕ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ ಎಂದರು. ಸದ್ಯ ಆರೋಪಿಗಳಿಗಾಗಿ ತನಿಖೆ ಚುರುಕುಗೊಳಿಸಲಾಗಿದೆ. ರಾಮನಗರ ಜಿಲ್ಲಾ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಆರೋಪಿಗಳ ಪತ್ತೆಗೆ 5 ತಂಡಗಳು ರಚನೆ
ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ರಿಕ್ಕಿ ರೈ ಮೇಲಿನ ಫೈರಿಂಗ್ ಪ್ರಕರಣದ ಆರೋಪಿಗಳ ಪತ್ತೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ. ತಡರಾತ್ರಿ 1 ಗಂಟೆ ಸುಮಾರಿಗೆ ಬಿಡದಿಯ ಫಾಮ್‌ಹೌಸ್‌ನಿಂದ ಪಬ್‌ಗೆ ತೆರಳಲು ಹೊರಬಂದ ರಿಕ್ಕಿ ರೈ, ಅವರ ಗನ್‌ಮ್ಯಾನ್ ಮತ್ತು ಡ್ರೈವರ್ ಮೇಲೆ ಶಾರ್ಪ್ ಶೂಟರ್‌ಗಳು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಡ್ರೈವರ್ ಮತ್ತು ಗನ್‌ಮ್ಯಾನ್ ಬಳಿ ಹೇಳಿಕೆ ದಾಖಲಿಸಿ, ದಾಳಿಯ ಸಂಖ್ಯೆ, ಆಗಮನದ ವಿಧಾನ ಸೇರಿದಂತೆ ಮಾಹಿತಿ ಕಲೆಹಾಕಿದ್ದಾರೆ. ತಂಡ 1 ಶೂಟರ್‌ಗಳು ಬಂದ ರಸ್ತೆಯ ಸಿಸಿಟಿವಿ ಪರಿಶೀಲಿಸುತ್ತಿದ್ದರೆ, ತಂಡ 2 ಫಾಮ್‌ಹೌಸ್ ಬಳಿಯ ಸಿಡಿಆರ್ ಸಂಗ್ರಹಿಸುತ್ತಿದೆ. ತಂಡ 3 ರಿಕ್ಕಿ ರೈ ಮೇಲೆ ಹಳೇ ದ್ವೇಷ ಹೊಂದಿರುವವರನ್ನು ಪತ್ತೆ ಮಾಡುತ್ತಿದ್ದು, ತಂಡ 4 ಕುಟುಂಬಸ್ಥರ ಬಳಿ ಮಾಹಿತಿ ಕಲೆಹಾಕುತ್ತಿದೆ. ತಂಡ 5 ಸ್ಥಳದಲ್ಲಿ ಬೀಡುಬಿಟ್ಟು ಮಾನಿಟರಿಂಗ್ ನಡೆಸುತ್ತಿದೆ.
ಮುತ್ತಪ್ಪ ರೈ ಬಲಗೈ ಬಂಟನಾಗಿದ್ದ ಮಿಥುನ್ ರೈ ಮೇಲೆ ಅನುಮಾನ:
ಬಿಡದಿ ಫಾಮ್‌ಹೌಸ್‌ನಲ್ಲಿ ರಿಕ್ಕಿ ರೈ ಮೇಲೆ ನಡೆದ ಶೂಟೌಟ್ ಪ್ರಕರಣವು ರಾಮನಗರ ಪೊಲೀಸರ ತನಿಖೆಯ ಕೇಂದ್ರಬಿಂದುವಾಗಿದೆ. ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ರಾತ್ರಿ ವೇಳೆ ನಡೆದ ಗುಂಡಿನ ದಾಳಿಯ ಹಿಂದೆ ಶಾರ್ಪ್ ಶೂಟರ್‌ಗಳನ್ನು ಬಳಸಿಕೊಂಡು ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಘಟನೆಯಲ್ಲಿ ಮುತ್ತಪ್ಪ ರೈ ಅವರ ಆಪ್ತ ವಲಯದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಮಂಗಳೂರು ಮೂಲದ ಮಿಥುನ್ ರೈ ಅವರ ಪಾತ್ರದ ಬಗ್ಗೆ ರಾಮನಗರ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಹಲವು ವರ್ಷಗಳ ಕಾಲ ಮುತ್ತಪ್ಪ ರೈ ಅವರ ರೈಟ್ ಹ್ಯಾಂಡ್ ಆಗಿ ಕೆಲಸ ಮಾಡಿದ್ದ ಮಿಥುನ್ ರೈ, ಆಸ್ತಿ ವಿಚಾರದಲ್ಲಿ ಉಂಟಾದ ಕಿರಿಕ್‌ನಿಂದಾಗಿ ಅವರಿಂದ ದೂರವಾಗಿದ್ದರು. ಈ ಹಿನ್ನೆಲೆಯಲ್ಲಿ, ಮಿಥುನ್ ರೈ ಮೇಲೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಈ ದಾಳಿಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.
ಇದನ್ನೂ ಓದಿ: Breaking News: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರನ ಮೇಲೆ ಮಿಡ್ ನೈಟ್ ಫೈರಿಂಗ್!
ತಂದೆಯ ಮೇಲಿನ ದ್ವೇಷ, ಮಗನ ಮೇಲೆ ಸೇಡು?
ಆಸ್ತಿ ವಿವಾದವು ಮುತ್ತಪ್ಪ ರೈ ಮತ್ತು ಮಿಥುನ್ ರೈ ನಡುವಿನ ಜಗಳಕ್ಕೆ ಮೂಲ ಕಾರಣವಾಗಿತ್ತು, ಮತ್ತು ಈ ವೈಮನಸ್ಸು ಮುತ್ತಪ್ಪ ರೈ ಅವರ ಮರಣದ ನಂತರವೂ ಮುಂದುವರೆದಿತ್ತು. ಮಿಥುನ್ ರೈ ಅವರು ಮುತ್ತಪ್ಪ ರೈ ಅವರೊಂದಿಗಿನ ಹಳೆಯ ದ್ವೇಷವನ್ನು ರಿಕ್ಕಿ ರೈ ಮೇಲೆ ತೀರಿಸಿಕೊಳ್ಳಲು ಈ ದಾಳಿಯನ್ನು ಯೋಜಿಸಿರಬಹುದೆಂದು ಪೊಲೀಸರು ಶಂಕಿಸುತ್ತಿದ್ದಾರೆ. ಈ ಸಂಚಿನಲ್ಲಿ ಶಾರ್ಪ್ ಶೂಟರ್‌ಗಳನ್ನು ಬಳಸಿಕೊಂಡು ರಿಕ್ಕಿ ರೈ ಅವರನ್ನು ಗುರಿಯಾಗಿಸಲಾಗಿತ್ತು, ಇದರಲ್ಲಿ ಡ್ರೈವಿಂಗ್ ಸೀಟ್ ಅನ್ನು ನಿಖರವಾಗಿ ಟಾರ್ಗೆಟ್ ಮಾಡಲಾಗಿದೆ. ಮಿಥುನ್ ರೈ ಅವರ ಈ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಖಚಿತವಾದ ಪುರಾವೆಗಳನ್ನು ಕಲೆಹಾಕಲು ಪೊಲೀಸರು ವಿವಿಧ ಕೋನಗಳಿಂದ ತನಿಖೆಯನ್ನು ಮುಂದುವರೆಸಿದ್ದಾರೆ.
