ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಎದುರಿಸುತ್ತಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. 2012ರಲ್ಲಿ ದಾಖಲಿಸಿದ್ದ ಖಾಸಗಿ ದೂರಿನ ಅನ್ವಯ, ಈಶ್ವರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಬಿಜೆಪಿ ಹಿರಿಯ ನಾಯಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಇದೀಗ ಕಾನೂನು ಸಂಕಷ್ಟ ಎದುರಾಗಿದೆ. ಅವರ ಮೇಲಿನ ಪ್ರಕರಣವೊಂದನ್ನು ರದ್ದು ಪಡಿಸಲು ಕೋರಿದ್ದ ಅರ್ಜಿಯನ್ನು ಹೈ ಕೋರ್ಟ್ ವಜಾಗೊಳಿಸಿದೆ. ಈ ನಿಟ್ಟಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಮೇಲಿದ್ದ ಆ ಪ್ರಕರಣವಾದರೂ ಯಾವುದು? ಈಶ್ವರಪ್ಪ ವಿರುದ್ಧ ಕೇಸ್ ದಾಖಲಿಸಿದ ವ್ಯಕ್ತಿ ಯಾರು? ಹೀಗೆ ಪ್ರಕರಣದ ಪ್ರತಿ ಮಾಹಿತಿಯನ್ನು ಎಳೆ-ಎಳೆಯಾಗಿ ಇಲ್ಲಿ ಬಿಚ್ಚಿಡಲಾಗಿದೆ.
ಅಷ್ಟಕ್ಕೂ ಅದು ಯಾವ ಪ್ರಕರಣ?
ಹೌದು ಮಾಜಿ ಉಪಮುಖ್ಯಮಂತ್ರಿ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ಆರೋಪ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೆ.ಎಸ್.ಈಶ್ವರಪ್ಪ ಕೇಸ್ ರದ್ದು ಕೋರಿ ನೀಡಿದ ಅರ್ಜಿಯನ್ನು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈ ಕೋರ್ಟ್ ಪೀಠ ವಜಾಗೊಳಿಸಿದೆ. ಆದ್ದರಿಂದ ಈಗ ಅವರು ಹೆಚ್ಚಿನ ಕಾನೂನು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವಕೀಲರ ಮನವಿ ಏನು?
ಕೆ.ಎಸ್ ಈಶ್ವರಪ್ಪ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು, ಲೋಕಾಯುಕ್ತ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆಗೆ ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಎಸ್ ಪಿಪಿ ವೆಂಕಟೇಶ್ ಅರಬಟ್ಟಿ ತನಿಖೆಗೆ ಸಹಕರಿಸಿದರೆ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಕೋರ್ಟ್‌ಗೆ ತಿಳಿಸಿದ್ದಾರೆ. ಕೇಸ್ ಹಿನ್ನೆಲೆ ನೋಡಿದರೆ, ಕೆ.ಎಸ್. ಈಶ್ವರಪ್ಪ ವಿರುದ್ಧ ವಕೀಲ ಬಿ. ವಿನೋದ್ ಖಾಸಗಿ ದೂರು ದಾಖಲಿಸಿದ್ದಾರೆ. ಈಶ್ವರಪ್ಪ ಅವರು ಸಚಿವರಾಗಿದ್ದ ಅವಧಿಯಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ತಮ್ಮ ಹಾಗೂ ತಮ್ಮ ಕುಟುಂಬದವರ (ಮಗ ಕಾಂತೇಶ್ ಮತ್ತು ಸೊಸೆ ಶಾಲಿನಿ) ಹೆಸರಿನಲ್ಲಿ ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ವಕೀಲ ಬಿ. ವಿನೋದ್ ಅವರು 2012ರಲ್ಲೇ ಶಿವಮೊಗ್ಗದ ವಿಶೇಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಸುದೀರ್ಘ ಕಾನೂನು ಹೋರಾಟ!
ಆರಂಭದಲ್ಲಿ ತಾಂತ್ರಿಕ ಕಾರಣಗಳಿಂದಾಗಿ (ಪ್ರಾಸಿಕ್ಯೂಷನ್ ಅನುಮತಿ ಇಲ್ಲದ ಕಾರಣ) ಈ ದೂರನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ವಕೀಲ ಬಿ. ವಿನೋದ್ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ತದನಂತರ ಹೈಕೋರ್ಟ್ ಸೂಚನೆ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕರಣದ ಮರುಪರಿಶೀಲನೆ ನಡೆಸಿ ತನಿಖೆಗೆ ಆದೇಶಿಸಿತು.
ಎಫ್‌ಐಆರ್ ದಾಖಲು!
ಈ ಖಾಸಗಿ ದೂರಿನ ಆಧಾರದ ಮೇಲೆಯೇ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ನಿರ್ದೇಶನದಂತೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಕುಟುಂಬದವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್ (FIR) ದಾಖಲಾಯಿತು.ಮಾನನಷ್ಟ ಮೊಕದ್ದಮೆ: ಇದೇ ವಕೀಲ ಬಿ. ವಿನೋದ್ ಅವರ ವಿರುದ್ಧ ಕೆ.ಎಸ್. ಈಶ್ವರಪ್ಪ ಅವರು "ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ" ಎಂದು ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿ ವಿನೋದ್ ಅವರು ಈಶ್ವರಪ್ಪ ವಿರುದ್ಧ ಮತ್ತೊಂದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ (IPC 499, 500) ಕೂಡ ದಾಖಲಿಸಿದ್ದರು.


