ಗೋಡ್ಸೆಯನ್ನು ದೇಶಭಕ್ತ ಎನ್ನುವ ಪಕ್ಷದಿಂದ ಶಾಂತಿ ಉಳಿಯುತ್ತಾ?: ಸಿದ್ದರಾಮಯ್ಯ
* ಸುಳ್ಳು, ಹಿಂಸೆಯ ಹಾದಿಯಲ್ಲಿ ಬಿಜೆಪಿ
* ಮೋದಿಗೆ ಸತ್ಯ ಹೇಳಿ ಗೊತ್ತಿಲ್ಲ: ಸಿದ್ದರಾಮಯ್ಯ
* 6000 ಗ್ರಾಮ ಪಂಚಾಯ್ತಿಯಲ್ಲಿ ಗಾಂಧೀಜಿ ಗ್ರಾಮ ಸ್ವರಾಜ್ಯ
ಬೆಂಗಳೂರು(ಅ.03): ಮಹಾತ್ಮ ಗಾಂಧಿ(Mahatma Gandhi) ಅವರು ಸತ್ಯ ಮತ್ತು ಅಹಿಂಸೆಯ ಮಾರ್ಗ ತೋರಿದರೆ ಬಿಜೆಪಿ ಸುಳ್ಳು ಹಾಗೂ ಹಿಂಸೆ ಹಾದಿಯಲ್ಲಿ ಹೋಗುತ್ತಿದೆ. ಗಾಂಧಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು(Nathuram Godse) ದೇಶಭಕ್ತ ಎನ್ನುವ ಇಂತಹ ಪಕ್ಷ ಅಧಿಕಾರದಲ್ಲಿದ್ದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಉಳಿಯಲು ಸಾಧ್ಯವೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಹಾತ್ಮಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ(BJP) ಅಧಿಕಾರಕ್ಕೆ ಬಂದ ನಂತರ ಗಾಂಧಿ ಅವರ ಬಗ್ಗೆ ಲಘುವಾಗಿ ಮಾತನಾಡಿ ಅವರ ವಿಚಾರಧಾರೆಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಸತ್ಯ ಹಾಗೂ ಅಹಿಂಸೆ ಗಾಂಧಿ ಅವರ ತತ್ವ. ಆದರೆ ಬಿಜೆಪಿ ಅಸತ್ಯ ಹಾಗೂ ಹಿಂಸೆ ಮೇಲೆ ನಂಬಿಕೆ ಇಟ್ಟಿದೆ ಎಂದು ಹೇಳಿದರು.
ನರೇಂದ್ರ ಮೋದಿ(Narendra Modi) ಅವರಿಗೆ ಸತ್ಯ ಹೇಳಿ ಗೊತ್ತಿಲ್ಲ. ಮೋದಿ ಅವರು ಏನು ಹೇಳುತ್ತಾರೋ ಅದರ ವಿರುದ್ಧವಾಗಿ ನಾವು ಅರ್ಥಮಾಡಿಕೊಳ್ಳಬೇಕು. ಅವರು ರೈತರನ್ನು ಉದ್ಧಾರ ಮಾಡುತ್ತೇವೆ ಎಂದರೆ ನಾಶ ಮಾಡುತ್ತೇವೆ ಎಂದರ್ಥ. ಪ್ರಜಾಪ್ರಭುತ್ವ ಉಳಿಸುತ್ತೇವೆ ಎಂದರೆ, ಪ್ರಜಾಪ್ರಭುತ್ವ ನಾಶ ಮಾಡುತ್ತೇವೆ ಎಂದರ್ಥ. ಸಂವಿಧಾನ ರಕ್ಷಣೆ ಮಾಡುತ್ತೇವೆ ಎಂದರೆ, ಅದನ್ನು ನಾಶ ಮಾಡುತ್ತೇವೆ ಎಂದು ಅರ್ಥಮಾಡಿಕೊಳ್ಳಬೇಕು. ಅವರು ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ವಿರುದ್ಧ ಸೊಗುಡು ಶಿವಣ್ಣ ವಾಗ್ದಾಳಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಮಾತನಾಡಿ, ರೈತರ ಸಂಕಷ್ಟಕ್ಕೆ ಎಂದೂ ಸ್ಪಂದಿಸದ ಗುಜರಾತ್ ಮೂಲದ ಪ್ರಧಾನಿ ನರೇಂದ್ರ ಮೋದಿ ಅವರು ರೈತಪರ ಹೋರಾಟ ನಡೆಸಿದ್ದ ಮಹಾತ್ಮ ಗಾಂಧೀಜಿ ಅವರನ್ನು ತಮ್ಮವರು ಎಂದು ಬಿಂಬಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಸೇರಿ ಹಲವರು ಹಾಜರಿದ್ದರು.
ತಿಂಗಳ ಒಳಗಾಗಿ ಕೆಪಿಸಿಸಿ ಪುನರ್‌ರಚನೆ: ಡಿಕೆಶಿ
ರಾಜ್ಯದಲ್ಲಿ ತಿಂಗಳ ಒಳಗಾಗಿ ಕೆಪಿಸಿಸಿ ಸಮಿತಿ ಪುನರ್ ರಚನೆಯಾಗಲಿದೆ ಎಂದು ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು. ಅಲ್ಲದೆ, ಕೆಪಿಸಿಸಿ ಜತೆಗೆ ಮತ್ತೊಂದು ಸಮಿತಿ ರೂಪಿಸಲು ರಾಷ್ಟ್ರ ನಾಯಕರು ತೀರ್ಮಾನಿಸಿದ್ದಾರೆ. ಆ ಸಮಿತಿಯನ್ನು ಕಾಂಗ್ರೆಸ್ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ರೂಪಿಸಲಾಗುತ್ತಿದೆ ಎಂದು ಹೇಳಿದರು. ಇನ್ನು ಬೆಳಗಾವಿಯಲ್ಲಿ ಬೃಹತ್ ಕಾಂಗ್ರೆಸ್ ಕಚೇರಿ ನಿರ್ಮಿಸಲಾಗಿದ್ದು, ಡಿಸೆಂಬರ್ 28ರ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಇದಕ್ಕೆ ಗಾಂಧಿ ಭವನ ಎಂದು ಹೆಸರಿಡಲು ಚಿಂತನೆ ನಡೆದಿದೆ. ಈ ಬಗ್ಗೆ ಪಕ್ಷದ ಎಲ್ಲ ಹಿರಿಯ ನಾಯಕರೂ ಚರ್ಚಿಸುತ್ತೇವೆ ಎಂದರು.
6000 ಗ್ರಾಮ ಪಂಚಾಯ್ತಿಯಲ್ಲಿ ಗಾಂಧೀಜಿ ಗ್ರಾಮ ಸ್ವರಾಜ್ಯ
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಸ್ಮರಣಾರ್ಥ ಈ ತಿಂಗಳು ಗಾಂಧೀಜಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಮಾಡಲಾಗುತ್ತಿದೆ. ನಮ್ಮ ಎಲ್ಲ ನಾಯಕರು 6000 ಪಂಚಾಯ್ತಿ, 1800 ವಾರ್ಡ್‌ಗಳಲ್ಲಿ ಒಂದೊಂದು ಸಭೆ ಹಾಗೂ ಪ್ರತಿಭಟನೆ ನಡೆಸಲಿದ್ದಾರೆ. ಇದರಲ್ಲಿ ನಮ್ಮ ಪಕ್ಷದ ಇತಿಹಾಸ ಹಾಗೂ ಹೋರಾಟದ ಹಾದಿ ಸ್ಮರಿಸಲಾಗುತ್ತದೆ. ಗ್ರಾಮ ಸ್ವರಾಜ್ಯ ಗಾಂಧಿ ಅವರ ಕನಸು. ಅದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.