ಅನ್ನಭಾಗ್ಯ ಯೋಜನೆಗೆ ಅಡ್ಡಗಾಲು ಹಾಕುತ್ತಲೇ ಇದ್ದ ಬಿಜೆಪಿ ನಾಯಕರು ಈ ಯೋಜನೆ ನಿಲ್ಲಿಸಲು ನೆಪಗಳನ್ನು ಹುಡುಕುತ್ತಿರುತ್ತಾರೆ: ಸಿದ್ದು 

ಬೆಂಗಳೂರು(ಆ.25): ಕೇಂದ್ರ ಒಪ್ಪಿದರೆ ಅನ್ನಭಾಗ್ಯ ಯೋಜನೆ ಸ್ಥಗಿತಗೊಳಿಸಲಾಗುವುದು ಎಂಬ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್‌ ಕತ್ತಿ ಹೇಳಿಕೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವ ಯೋಚನೆ ಮಾಡಿದರೂ ಬಡವರ ಹಸಿವಿನ ಬೆಂಕಿಯಲ್ಲಿ ಬೆಂದು ಹೋಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ಅನ್ನಭಾಗ್ಯ ಯೋಜನೆಗೆ ಅಡ್ಡಗಾಲು ಹಾಕುತ್ತಲೇ ಇದ್ದ ಬಿಜೆಪಿ ನಾಯಕರು ಈ ಯೋಜನೆ ನಿಲ್ಲಿಸಲು ನೆಪಗಳನ್ನು ಹುಡುಕುತ್ತಿರುತ್ತಾರೆ. ರಾಜ್ಯದ ಆಹಾರ ಸಚಿವ ಉಮೇಶ್‌ ಕತ್ತಿ ಅವರಿಗೆ ಅಂತಹದ್ದೊಂದು ನೆಪ ಸುಪ್ರೀಂಕೋರ್ಟ್‌ನ ಆದೇಶದಲ್ಲಿ ಸಿಕ್ಕಿದ್ದಕ್ಕೆ ಸಂತಸಪಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.

Mysuru: ಸಿದ್ದರಾಮಯ್ಯ ಜನಪರ ಕಾರ‍್ಯಕ್ರಮಗಳಿಗೆ ಮಲ್ಲಿಕಾರ್ಜುನ ಖರ್ಗೆ ಪರಾಕ್‌

2.65 ಲಕ್ಷ ಕೋಟಿ ರು. ಗಾತ್ರದ ಬಜೆಟ್‌ನಲ್ಲಿ 2022-23ರ ಸಾಲಿನ ಅನ್ನಭಾಗ್ಯ ಯೋಜನೆಗೆ ಮೀಸಲಿಟ್ಟಿರುವ ಹಣ 2,800 ಕೋಟಿ ರು. ಮಾತ್ರ. ಇಷ್ಟುಹಣವನ್ನು ಉಳಿತಾಯ ಮಾಡಲು ನೆಪಗಳನ್ನು ಹುಡುಕುತ್ತಿರುವ ಸರ್ಕಾರ ಮತ್ತು ಸಚಿವರ ಮನಸ್ಸಿನಲ್ಲಿ ಬಡವರ ಬಗ್ಗೆ ಎಷ್ಟೊಂದು ದ್ವೇಷ-ಅಸಹನೆ ಇರಬಹುದು ಎಂದು ಪ್ರಶ್ನಿಸಿದ್ದಾರೆ.

ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡು, ಕಲ್ಯಾಣ ಕಾರ್ಯಕ್ರಮಗಳು ದುಡ್ಡಿಲ್ಲದೆ ನೆನೆಗುದಿಗೆ ಬೀಳಲು ಕಾರಣ ಈ ಸರ್ಕಾರದ ಕಮಿಷನ್‌ ದಾಹ. 40 ಪರ್ಸೆಂಟ್‌ ಕಮಿಷನ್‌ ಈಗ ಶೇ.50ಕ್ಕೆ ಏರಿಕೆಯಾಗಿದೆಯಂತೆ. ಈಗ ಉಮೇಶ್‌ ಕತ್ತಿಯಂತಹ ಬೇಜವಾಬ್ದಾರಿ ಸಚಿವರು ಅನ್ನಭಾಗ್ಯ ಯೋಜನೆ ನಿಲ್ಲಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಉಮೇಶ್‌ ಕತ್ತಿಯವರೇ, ಬಡವರ ಹೊಟ್ಟೆಗೆ ಹೊಡೆಯುವ ನಿಮ್ಮ ದುಷ್ಟತನದ ಕತ್ತಿಯನ್ನು ಒರೆಯಲ್ಲಿಟ್ಟುಬಿಡಿ. ಅನ್ನಭಾಗ್ಯ ಯೋಜನೆಯನ್ನು ನಿಲ್ಲಿಸುವ ಯೋಚನೆ ಮಾಡಿದರೂ ಬಡವರ ಹಸಿವಿನ ಬೆಂಕಿಯಲ್ಲಿ ಬೆಂದು ಹೋಗುತ್ತೀರಿ, ಎಚ್ಚರ ಇರಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.