Asianet Suvarna News Asianet Suvarna News

Free Hindu Temples: ಬೊಮ್ಮಾಯಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

*  ಧಾರ್ಮಿಕ ಗುಲಾಮಗಿರಿಗೆ ತಳ್ಳಲು ದೇಗುಲಗಳಿಗೆ ಸ್ವಾಯತ್ತೆ: ಸಿದ್ದು
*  5.5 ಕೋಟಿ ಕನ್ನಡಿಗರಿಗೆ ಇರುವ ಅಧಿಕಾರ 2% ಮಂದಿಗೆ
*  ಮನುವಾದಿಗಳ ಅಜೆಂಡಾ 
 

Former CM Siddaramaiah Slams on Basavaraj Bommai Government grg
Author
Bengaluru, First Published Jan 3, 2022, 6:00 AM IST

ಬೆಂಗಳೂರು(ಡಿ.03): ‘ದೇವಸ್ಥಾನಗಳನ್ನು ಸ್ವತಂತ್ರಗೊಳಿಸುವುದು ಪುರೋಹಿತಶಾಹಿ ಶಕ್ತಿಗಳು ಹಿಂದೂ ಕನ್ನಡಿಗರನ್ನು ಮತ್ತೆ ಧಾರ್ಮಿಕ ಗುಲಾಮಗಿರಿಗೆ ತಳ್ಳಲು ಹಾಗೂ 1 ಲಕ್ಷ ಕೋಟಿಗೂ ಅಧಿಕ ಆಸ್ತಿಯನ್ನು ಧಾರ್ಮಿಕ ಮಾಫಿಯಾದ ಒಂದು ವರ್ಗಕ್ಕೆ ಹಸ್ತಾಂತರಿಸಲು ನಡೆಸುತ್ತಿರುವ ಹುನ್ನಾರ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಸವಣ್ಣನವರ(Basavanna) ನೇತೃತ್ವದ ಶರಣ ಚಳವಳಿಯನ್ನು ದಮನ ಮಾಡಿದ ಪುರೋಹಿತಶಾಹಿ ಶಕ್ತಿಗಳೇ ಇಂದು ಬಿಜೆಪಿಯನ್ನು(BJP) ಬಳಸಿಕೊಂಡು ಐದೂವರೆ ಕೋಟಿ ಕನ್ನಡಿಗ ಹಿಂದೂಗಳನ್ನು ಧಾರ್ಮಿಕ ಗುಲಾಮಗಿರಿಯ ಕಡೆಗೆ ತಳ್ಳಲು ಪ್ರಯತ್ನಿಸುತ್ತಿವೆ. ದೇವಸ್ಥಾನಗಳನ್ನು(Temples) ಸರ್ಕಾರ ನಡೆಸುತ್ತಿದೆ ಎಂದರೆ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ದೇವಸ್ಥಾನಗಳ ಮೇಲೆ ಹಕ್ಕಿದೆ ಎಂದರ್ಥ. ಸರ್ಕಾರದ ಹಕ್ಕು ತಪ್ಪಿದರೆ ಐದೂವರೆ ಕೋಟಿ ಕನ್ನಡಿಗ ಹಿಂದೂಗಳ ಅಧಿಕಾರವನ್ನು ಕೇವಲ ಶೇ.2 ರಷ್ಟು ಮಂದಿಗೆ ಒಪ್ಪಿಸಿದಂತಾಗಲಿದೆ. ಈ ಮೂಲಕ ಶೇ.80 ರಷ್ಟು ಜನ ಮತ್ತೆ ಊಳಿಗಮಾನ್ಯ ಸಮಾಜದ ಕ್ರೌರ್ಯವನ್ನು ಅನುಭವಿಸುವಂತೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಕಿಡಿಕಾರಿದ್ದಾರೆ.

Free Hindu Temples: ಸರ್ಕಾರ ದೇವಾಲಯಗಳನ್ನು ಸಂಘ ಪರಿವಾರದ ಕಾರ‍್ಯಕರ್ತರಿಗೆ ಹಂಚಲು ಹೊರಟಿದೆ: ಡಿಕೆಶಿ!

ದೇವಸ್ಥಾನಗಳು ಈಗಲೂ ಸ್ವತಂತ್ರವಾಗಿಯೇ ಇವೆ. ಈ ಪುರೋಹಿತ ಶಾಹಿ ವರ್ಗ ಸ್ವಾಯತ್ತೆಯ ಹೆಸರಲ್ಲಿ ಎಲ್ಲ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವುದಿಲ್ಲ. ಲಕ್ಷಾಂತರ, ಕೋಟ್ಯಾಂತರ ಆದಾಯವಿರುವ ದೇವಸ್ಥಾನಗಳನ್ನು ಮಾತ್ರ ತಾವು ತೆಗೆದುಕೊಂಡು ಆದಾಯವಿಲ್ಲದ ಕೆಲವು ದೇವಸ್ಥಾನಗಳನ್ನು ಉಳಿದವರಿಗೆ ಬಿಟ್ಟುಕೊಡಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಆಸ್ತಿ ಕಬಳಿಕೆ ಹುನ್ನಾರ:

ರಾಜ್ಯದಲ್ಲಿ(Karnataka) ಮುಜರಾಯಿ ಇಲಾಖೆಯ ಅಧೀನದಲ್ಲಿ ಒಟ್ಟಾರೆ 34,558 ದೇವಾಲಯಗಳಿವೆ. ಆದಾಯದ ಆಧಾರದಂತೆ ‘ಎ’ ಗುಂಪಿನಲ್ಲಿ 205, ಬಿ ಗುಂಪಿನಲ್ಲಿ 139 ಮತ್ತು ಸಿ ಗುಂಪಿನಲ್ಲಿ 34214 ದೇವಸ್ಥಾನಗಳಿವೆ. ‘ಎ’ ಗುಂಪಿನ ದೇವಾಲಯಗಳ ಬಳಿ ಉಳಿತಾಯ ಠೇವಣಿ ಮತ್ತು ನಿಶ್ಚಿತ ಠೇವಣಿ ಹಣ ಎರಡೂ ಸೇರಿ ಸುಮಾರು 1580 ಕೋಟಿ ರು.ಗಳಿಷ್ಟಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಖಾತೆಯಲ್ಲಿಯೇ ಸುಮಾರು 400 ಕೋಟಿ ರು. ಹಣವಿದೆ. ಬಿ ಗುಂಪಿನ ದೇವಾಲಯಗಳ ಬಳಿ 98.67 ಕೋಟಿ ರು. ಹಣವಿದೆ.

Free Hindu Temple: ಮುಸ್ಲಿಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಡಿಕೆಶಿ ಮತಾಂತರ ಆಗ್ಲಿ!

ಇದನ್ನು ಹೊರತುಪಡಿಸಿ ಈ ದೇವಾಲಯಗಳ ಬಳಿ ಇರುವ ಆಸ್ತಿ ಮೌಲ್ಯ ಸುಮಾರು ಒಂದು ಲಕ್ಷ ಕೋಟಿಗೂ ಅಧಿಕ. ಸಾವಿರಾರು ಎಕರೆ ಭೂಮಿ, ಸಾವಿರಾರು ಕಟ್ಟಡಗಳು ಈ ದೇವಾಲಯಗಳ ಸುಪರ್ದಿಯಲ್ಲಿವೆ. ಒಡವೆಗಳು, ವಸ್ತು, ವಾಹನಗಳು ಇದರಡಿ ಸೇರುತ್ತವೆ. ಒಂದು ವರ್ಗದ ದುಷ್ಟ ಕಣ್ಣು ಇದರ ಮೇಲೆ ಬಿದ್ದಿದೆ. ದೇವರ ಹೆಸರಿನಲ್ಲಿ ದಂಧೆ ನಡೆಸುವ ಧಾರ್ಮಿಕ ಮಾಫಿಯಾ ಇಂದು ಶೇ. 80 ರಷ್ಟು ಜನರಿರುವ ಹಿಂದೂಗಳ ಆಸ್ತಿಯನ್ನು ಕಬಳಿಸಿ ಎರಡು- ಮೂರು ಪರ್ಸೆಂಟ್‌ ಜನರ ಅಧೀನಕ್ಕೆ ತೆಗೆದುಕೊಳ್ಳುವ ಭೀಕರ ಹುನ್ನಾರವಿದು. ಹೀಗಾಗಿ ಜನರು ಎಚ್ಚೆತ್ತುಕೊಂಡು ಬಿಜೆಪಿಯೆಂಬ ಧಾರ್ಮಿಕ ಬಂಡವಾಳವಾದಿ ಹಾಗೂ ಕಾರ್ಪೊರೇಟ್‌ ಬಂಡವಾಳಿಗರ ಪಕ್ಷವನ್ನು ತಿರಸ್ಕರಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಮನುವಾದಿಗಳ ಅಜೆಂಡಾ:

ದೇವಸ್ಥಾನಗಳ ಮೇಲೆ ಸರ್ಕಾರದ(Government of Karnataka) ಹಿಡಿತ ತಪ್ಪಿದ ಕೂಡಲೇ ಮನುವಾದಿ ನಿಯಮಗಳನ್ನು ಸಮಾಜದ ಮೇಲೆ ಹೇರುತ್ತಾರೆ. ಮನುವಾದಿ ಸಿದ್ಧಾಂತ ಮತ್ತೆ ಜೀವ ಪಡೆದದ್ದೆ ಆದರೆ ಅದು ರಾಕ್ಷಸ ರೂಪಿಯಾಗುತ್ತದೆ. ಈ ವಿಚಾರಗಳ ಬಗ್ಗೆ ಧ್ವನಿ ಎತ್ತಿದರೆ ಆರ್‌ಎಸ್‌ಎಸ್‌ನವರು(RSS) ತಮ್ಮ ಪಕ್ಷದಲ್ಲಿರುವ ಶೂದ್ರಾದಿ ದಲಿತ ನಾಯಕರನ್ನು ಛೂ ಬಿಡುತ್ತಾರೆ. ಇದು ಮನುವಾದಿಗಳ ಪುರಾತನ ಅಜೆಂಡಾ. ಹಾಗಾಗಿ ಜನರು ಇವರ ದುಷ್ಟ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಯು ಧಾರ್ಮಿಕ ರಾಜಕೀಯ(Politics) ಮಾಡಿಕೊಂಡು ದೇಶವನ್ನು ಅದಾನಿ, ಅಂಬಾನಿ ಮುಂತಾದ ಬಂಡವಾಳಿಗರಿಗೆ ಒತ್ತೆ ಇಡುತ್ತಿದೆ ಎಂದು ಅವರು ದೂರಿದ್ದಾರೆ.
 

Follow Us:
Download App:
  • android
  • ios