ಸಂವಿಧಾನ ಬದಲಾದರೆ ನಾನು ಕುರಿ ಕಾಯ್ಬೇಕಾಗುತ್ತೆ: ಇದರಿಂದ್ಲೇ ನಾನು ಸಿಎಂ, ಮೋದಿ ಪಿಎಂ ಆಗಿದ್ದು!

* ಸಂವಿಧಾನ ಬದಲಾಯಿಸುವ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕುಮ್ಮಕ್ಕು

* ಸಂವಿಧಾನ ಬದಲಾದರೆ ನಾನು ಕುರಿ ಕಾಯೋಕೆ ಹೋಗ್ಬೇಕಾಗುತ್ತೆ

* ಕುಷ್ಟಗಿಯಲ್ಲಿ ಸಂವಿಧಾನ ಸಂರಕ್ಷಣಾ ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿಕೆ

Former CM Siddaramaiah Explains The Importance Of Indian Constituion pod

ಕೊಪ್ಪಳ(ಏ.25): ಸಂವಿಧಾನ ಇರುವುದರಿಂದಲೇ ನಾನು ಸಿಎಂ ಆಗಿದ್ದು, ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿದ್ದು. ಒಂದು ವೇಳೆ ಸಂವಿಧಾನ ಬದಲಾಗಿ ಮನುಸ್ಮೃತಿ ಬಂದಿದ್ದೆ ಆದರೆ ನಾನು ಮತ್ತೆ ಕುರಿ ಕಾಯೋಕೆ ಹೋಗ್ಬೇಕಾಗುತ್ತೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕುಷ್ಟಗಿಯಲ್ಲಿ ‘ಸಂವಿಧಾನ ಸಂರಕ್ಷಣಾ ವೇದಿಕೆ’ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಸಂರಕ್ಷಣಾ ಸಮಾವೇಶ ಮತ್ತು ಬಾಬಾಸಾಹೇಬ್‌ ಡಾ. ಬಿ.ಆರ್‌. ಅಂಬೇಡ್ಕರ 131ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅನಂತಕುಮಾರ ಹೆಗಡೆ ಅವರು ಮಂತ್ರಿಯಾಗಿದ್ದಾಗ ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ನಾವು ಬಂದಿರುವುದು ಎಂದು ಹೇಳಿದ್ದರು. ಕೇಂದ್ರದ ಮಂತ್ರಿಯಾಗಿದ್ದವರೊಬ್ಬರು ಹೀಗೆ ಹೇಳಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಲಿಲ್ಲ. ಅವರನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸಲಿಲ್ಲ. ಅಂದರೆ ಏನರ್ಥ? ಸಂವಿಧಾನ ಬದಲಾಯಿಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕುಮ್ಮಕ್ಕು ಇದೆಯಂದಾಯಿತಲ್ಲವಾ? ಎಂದು ಪ್ರಶ್ನಿಸಿದರು.

ಸತ್ಯ ಹೇಳುವುದಕ್ಕೆ ಹಿಂದೆ- ಮುಂದೆ ನೋಡಬಾರದು. ವೇದಿಕೆಯಲ್ಲಿ ಯಾರೇ ಆಕ್ಷೇಪ ವ್ಯಕ್ತಪಡಿಸಿದರೂ ಅದನ್ನು ಹೇಳದೆ ಇರೋಕೆ ಆಗಲ್ಲ. ಅವತ್ತು ಅನಂತಕುಮಾರ ಹೆಗಡೆ ಅವರು ಹೇಳಿದ್ದು ಸುಳ್ಳಾ? ಸಚಿವರೊಬ್ಬರು ಹೀಗೆ ಹೇಳಿದ ಮೇಲೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ರಮ ಕೈಗೊಳ್ಳಬೇಕಾಗಿತ್ತಲ್ಲ ಎಂದು ಕಾರವಾಗಿ ಪ್ರಶ್ನಿಸಿದರು.

ಭಾರತ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ. ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಜಗತ್ತಿನ ಹಲವು ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತಕ್ಕೆ ಸೂಕ್ತವಾಗಿರುವ ರೀತಿಯಲ್ಲಿ ಬರೆದಿದ್ದಾರೆ. ಅವರಿಂದ ಮಾತ್ರ ಇಂಥ ಸಂವಿಧಾನವನ್ನು ನೀಡಲು ಸಾಧ್ಯವಾಗಿದೆ. ಸಂವಿಧಾನವನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದ್ದು, ದೇಶದ 130 ಕೋಟಿ ಜನರು ವಿರೋಧಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಇತಿಹಾಸ ರಚನೆಯಲ್ಲಿ ಸಾಕಷ್ಟುತಪ್ಪುಗಳಾಗಿವೆ, ತಿರುಚಲಾಗಿದೆ. ಸಿಪಾಯಿ ದಂಗೆಯನ್ನೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎನ್ನಲಾಗಿದೆ. ಆದರೆ, ಅದು ತಪ್ಪು. ಇದಕ್ಕಿಂತ ಮುಂಚೆಯೇ 16, 17ನೇ ಶತಮಾನದಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್‌ ಅಧಿಕಾರಿಯನ್ನು ಕೊಂದು ಹಾಕಿದ್ದು ಸ್ವಾತಂತ್ರ್ಯ ಹೋರಾಟವಲ್ಲವೇ? ಟಿಪ್ಪು ಸುಲ್ತಾನ್‌ ಮತ್ತು ಅವರ ತಂದೆ ಹೈದರಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಲಿಲ್ಲವೇ? ಇದು ಸಹ ಸ್ವಾತಂತ್ರ್ಯ ಹೋರಾಟವಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮ-ಧರ್ಮಗಳ ನಡುವೆ ವಿಷಬೀಜ ಬಿತ್ತಲಾಗುತ್ತಿದೆ. ಯಾವ ಧರ್ಮ ಮನುಷ್ಯರಿಗೆ ಗೌರವ ನೀಡುವುದಿಲ್ಲವೋ ಅದು ಧರ್ಮವೇ ಅಲ್ಲ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ. ಈ ಕಾರಣಕ್ಕಾಗಿಯೇ ಅಂಬೇಡ್ಕರ್‌ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು. ಅವರು ಬೇಗನೇ ಅಸುನೀಗಿದರು. ನೂರು ವರ್ಷ ಬದುಕಿದ್ದರೆ ಚೆನ್ನಾಗಿತ್ತು. ಆದರೂ ಸಂವಿಧಾನ ಒಳ್ಳೆಯವರ ಕೈಯಲ್ಲಿ ಇರಬೇಕು ಎಂದು ಹೇಳಿದ್ದರು. ಕೆಟ್ಟವರ ಕೈಗೆ ಸಿಕ್ಕರೆ ಅದು ಕೆಟ್ಟದಾರಿಯೇ ಕಾಣುತ್ತದೆ. ಮನುವಾದಿಗಳ ಕೈಯಲ್ಲಿ ಸಂವಿಧಾನ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಎಸ್‌ಇಪಿ ಮತ್ತು ಟಿಎಸ್‌ಪಿಯಲ್ಲಿ ಕಾನೂನುಬದ್ಧವಾಗಿಯೇ ಕೊಡಬೇಕಾಗಿರುವ ಅನುದಾನವನ್ನು ಎಸ್ಸಿ, ಎಸ್ಟಿಜನಾಂಗಕ್ಕೆ ಕೊಟ್ಟಿಲ್ಲ. ಕೇಳಿದರೆ ಬಿಜೆಪಿಗರು ಸಿಟ್ಟಿಗೇಳುತ್ತಾರೆ ಎಂದು ಕಿಡಿಕಾರಿದರು.

ಮೇಲ್ಜಾತಿಯವರಿಗೆ ಮೀಸಲು ಕಾನೂನುಬಾಹಿರ...

ಮೇಲ್ಜಾತಿಯವರಿಗೆ ಆರ್ಥಿಕ ಹಿಂದುಳಿಯುವಿಕೆಯ ಆಧಾರದ ಮೇಲೆ ಶೇ. 10ರಷ್ಟುಮೀಸಲಾತಿಯನ್ನು ನೀಡಿರುವುದು ಕಾನೂನುಬಾಹಿರ. ಇದಕ್ಕೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಆದರೂ ಕೇವಲ ಒಂದೇ ದಿನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡನೆ ಮಾಡಿ ಜಾರಿ ಮಾಡಿದ್ದಾರೆ. ಆದರೆ, ಕೇವಲ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆಯನ್ನು ಆಧರಿಸಿ ಮೀಸಲಾತಿ ನೀಡುವುದಕ್ಕೆ ಅವಕಾಶ ಇದ್ದರೂ ತಪ್ಪಾಗಿ ಅರ್ಥೈಸಿ ನೀಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸಿದ್ದಾರಾಮಯ್ಯ ಮಾತಿಗೆ ಆಕ್ಷೇಪ

ಸಂಸದ ಅನಂತಕುಮಾರ ಹೆಗಡೆ ಅವರು ಸಂವಿಧಾನವನ್ನು ಬದಲಾಯಿಸುವುದಕ್ಕಾಗಿಯೇ ಬಂದಿರುವುದು ಎಂದು ಹೇಳಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಕುಮ್ಮಕ್ಕಿನಿಂದಲೇ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ವೇದಿಕೆ ಮೇಲಿದ್ದ ಕುರಿ ಉಣ್ಣೆ ನಿಗಮದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಶರಣು ತಳ್ಳಿಕೇರಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಧಾನಿ ಕುಮ್ಮಕ್ಕು ಎನ್ನುವ ಮಾತು ವಾಪಸ್‌ ಪಡೆಯುವಂತೆ ಆಗ್ರಹಿಸಿದರು. ಇದು ವೇದಿಕೆಯಲ್ಲಿ ಕೆಲಕಾಲ ಗಲಿಬಿಲಿಗೆ ಕಾರಣವಾಯಿತು. ಆಗ ಸಿಟ್ಟಿಗೆದ್ದ ಸಿದ್ದರಾಮಯ್ಯ ಅವರು ಸತ್ಯವನ್ನು ಒಪ್ಪಿಕೊಳ್ಳದಿದ್ದರೆ ಇಲ್ಲಿಂದ ಹೋಗಿ ಎಂದು ಕಿಡಿಕಾರಿದರು.

ವೇದಿಕೆಯ ಮೇಲಿದ್ದವರು ಶರಣು ತಳ್ಳಿಕೇರಿ ಅವರ ಆಕ್ಷೇಪಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಆಗ ವೇದಿಕೆಯಿಂದ ಅವರು ನಿರ್ಗಮಿಸಿದರು. ಅಚ್ಚರಿ ಎಂದರೆ ಕೆಳಗೆ ಬರುತ್ತಿದ್ದಂತೆ ಬಿಜೆಪಿ ಬೆಂಬಲಿತರು ಶರಣು ತಳ್ಳಿಕೇರಿ ಅವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಯಕಾರ ಹಾಕಿದರು.

ಸಿಎಂ ಘೋಷಣೆ ಕೂಗು

ಸಂವಿಧಾನ ಸಂರಕ್ಷಣಾ ವೇದಿಕೆ ಕಾರ್ಯಕ್ರಮ ಮೇಲ್ನೋಟಕ್ಕೆ ಪಕ್ಷಾತೀತವಾಗಿ ಎಂದು ಹೇಳಿಕೊಂಡರೂ ಅದು ನಾನಾ ರೀತಿಯ ತಿರುವು ಪಡೆದುಕೊಂಡು, ಕೊನೆಗೆ ಕಾಂಗ್ರೆಸ್‌ಮಯವಾಯಿತು. ಕಾಯಕ್ರಮದ ಆಯೋಜಕ ಸುಖರಾಜ ತಳ್ಳಿಕೇರಿ ಅವರೇ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು. ಇದಾದ ಮೇಲೆ ಸಿದ್ದರಾಮಯ್ಯ ಅವರು ವೇದಿಕೆ ಬಂದಾಗ ಹಾಗೂ ಅವರ ಮಾತನಾಡುವ ವೇಳೆಯಲ್ಲಿ ಆಗಾಗ ಮುಂದಿನ ಸಿಎಂ ಸಿದ್ದರಾಮಯ್ಯನವರೇ ಎಂದು ಕೂಗುತ್ತಿರುವುದು ಕೇಳಿಬಂದಿತು.

ದಲಿತ ಸಿಎಂ ಕೂಗು

ಈ ನಡುವೆ ದಲಿತ ಸಿಎಂ ಕೂಗು ಸಹ ವೇದಿಕೆಯಲ್ಲಿ ಶುರುವಾಯಿತು. ಬಿಎಸ್‌ಪಿ ಕರ್ನಾಟಕ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಅವರು ದಲಿತ ಸಿಎಂ ಆಗಬೇಕು ಎನ್ನುವ ಅಗತ್ಯವನ್ನು ಹಾಗೂ ಪದೇ ಪದೇ ಕೈತಪ್ಪುತ್ತಿರುವ ಕುರಿತು ವಿವರಿಸುತ್ತಲೆ ದಲಿತ ಸಿಎಂ ಕೂಗನ್ನು ಎತ್ತಿದರು. ಇದಕ್ಕೂ ಮೊದಲು ಮಾತನಾಡಿದ ಕೆಲ ಶ್ರೀಗಳು ದಲಿತ ಸಿಎಂ ಆಗಬೇಕು ಎಂದು ಪ್ರತಿಪಾದನೆ ಮಾಡಿದರು.

Latest Videos
Follow Us:
Download App:
  • android
  • ios