Asianet Suvarna News Asianet Suvarna News

ವಿಷನ್‌ ಬೆಂಗಳೂರಿಗೆ ಸಮಿತಿ ರಚನೆ: ಕುಡಿಯುವ ನೀರು, ಚರಂಡಿ ವ್ಯವಸ್ಥೆ ಬಗ್ಗೆ ಸಭೆಯಲ್ಲಿ ಡಿಕೆಶಿ ಚರ್ಚೆ

ಗ್ಲೋಬಲ್‌ ಬೆಂಗಳೂರನ್ನು ಅನ್ನು ವಿಷನ್‌ ಬೆಂಗಳೂರನ್ನಾಗಿ ಮಾಡಲು ಒಂದು ಸಲಹಾ ಸಮಿತಿ ರಚಿಸಲು ತೀರ್ಮಾನಿಸಿರುವುದರ ಜತೆಗೆ ಬ್ರಾಂಡ್‌ ಬೆಂಗಳೂರು ಬೆಟರ್‌ ಬೆಂಗಳೂರು ಆಗಬೇಕು ಎನ್ನುವ ಉದ್ದೇಶದಿಂದ ಸಲಹೆ, ಸಮಸ್ಯೆಗಳನ್ನು ಪಡೆದುಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Formation of committee for Vision Bangalore says dk shivakumar at bengaluru rav
Author
First Published Jun 6, 2023, 6:06 AM IST

ಬೆಂಗಳೂರು (ಜೂ.6) ಗ್ಲೋಬಲ್‌ ಬೆಂಗಳೂರನ್ನು ಅನ್ನು ವಿಷನ್‌ ಬೆಂಗಳೂರನ್ನಾಗಿ ಮಾಡಲು ಒಂದು ಸಲಹಾ ಸಮಿತಿ ರಚಿಸಲು ತೀರ್ಮಾನಿಸಿರುವುದರ ಜತೆಗೆ ಬ್ರಾಂಡ್‌ ಬೆಂಗಳೂರು ಬೆಟರ್‌ ಬೆಂಗಳೂರು ಆಗಬೇಕು ಎನ್ನುವ ಉದ್ದೇಶದಿಂದ ಸಲಹೆ, ಸಮಸ್ಯೆಗಳನ್ನು ಪಡೆದುಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸೋಮವಾರ ವಿಧಾನಸೌಧ(Vidhanasoudha)ದಲ್ಲಿ ನಡೆದ ಬೆಂಗಳೂರು ಸಮಗ್ರ ಅಭಿವೃದ್ಧಿ ಸಂಬಂಧ ಸಲಹೆ-ಸಮಸ್ಯೆಗಳನ್ನು ಆಲಿಸಲು ಬೆಂಗಳೂರಿನ ಸರ್ವಪಕ್ಷದ ಸಭೆ ನಡೆಸಿದರು. ಸುಧೀರ್ಘ ಸಭೆ ನಡೆಸಿ ಕ್ಷೇತ್ರವಾರು ಸಮಸ್ಯೆ, ಸಲಹೆಗಳನ್ನು ಪಡೆದ ಬಳಿಕ ಅವರು ಮಾತನಾಡಿದರು.

ಕರ್ನಾಟಕವನ್ನು ಕಾಂಗ್ರೆಸ್‌ ಭಿಕ್ಷಾ ರಾಜ್ಯವನ್ನಾಗಿ ಮಾಡುತ್ತಿದೆ: ಸಂಸದ ಪ್ರತಾಪ್‌ ಸಿಂಹ

ಬೆಂಗಳೂರಿನ ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಪಕ್ಷಗಳ ಶಾಸಕರ ಮತ್ತು ಲೋಕಸಭಾ ಸದಸ್ಯರನ್ನೊಳಗೊಂಡ ಸಭೆಯನ್ನು ನಡೆಸಿ, ಹಲವು ಸಲಹೆ ಮತ್ತು ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ. ಚುನಾವಣೆಯ ಮುಗಿದ ಜತೆಯಲ್ಲಿಯೇ ರಾಜಕಾರಣ ಸಹ ಮುಗಿದಿದ್ದು, ಬೆಂಗಳೂರು ಅಭಿವೃದ್ಧಿ ನಮ್ಮೆಲ್ಲರ ಗುರಿಯಾಗಿದೆ. ನಮ್ಮ ನಗರದ ಅಂತಾರಾಷ್ಟ್ರೀಯ ಮಾನ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದರು.

ಗ್ಲೋಬಲ್‌ ಬೆಂಗಳೂರನ್ನು ವಿಷನ್‌ ಬೆಂಗಳೂರ(Vision Bangalore)ನ್ನಾಗಿ ಮಾಡುವ ನಿಟ್ಟಿನಲ್ಲಿ ಸಲಹಾ ಸಮಿತಿ ರಚನೆಯ ಜತೆಗೆ ಬ್ರಾಂಡ್‌ ಬೆಂಗಳೂರು ಬೆಟರ್‌ ಬೆಂಗಳೂರು ಆಗಬೇಕು. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕಾಲದ ರೀತಿಯಲ್ಲಿ ಬೆಂಗಳೂರಿನ ಸ್ಟೇಕ್‌ ಹೋಲ್ಡರ್‌ಗಳನ್ನು ಭೇಟಿ ಮಾಡಿ ವಿಷನ್‌ ಬೆಂಗಳೂರು ಸಮಿತಿ ರಚಿಸಲು ಯೋಜಿಸಲಾಗಿದೆ. ಕುಡಿಯುವ ನೀರು, ಕಸ ನಿರ್ವಹಣೆ, ಸಂಚಾರ ದಟ್ಟಣೆಯ ಸಮಗ್ರ ಯೋಜನೆ ಕುರಿತು ಚರ್ಚಿಸಲಾಗಿದೆ. ಇದೇ ಮಳೆಗಾಲದ ವೇಳೆ ತಲೆದೋರುವ ಮುಖ್ಯ ಸಮಸ್ಯೆಗಳಿಗೆ ಕಾರಣವಾಗಿರುವ ಒತ್ತುವರಿ, ರಾಜಕಾಲುವೆ ನಿರ್ವಹಣೆ ಕುರಿತು ಸಹ ಸಮಾಲೋಚನೆ ನಡೆಸಲಾಗಿದೆ. ಬೆಂಗಳೂರು ಅಭಿವೃದ್ಧಿಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಾಲುದಾರರಾಗಿರುವ ಎಲ್ಲರನ್ನೊಳಗೊಂಡ ಪ್ರತ್ಯೇಕ ವಿಷಯಗಳ ಮೇಲೆ ಪ್ರತ್ಯೇಕ ಸಮಿತಿಗಳನ್ನು ರಚನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ.ಜಾಜ್‌ರ್‍, ಕಂದಾಯ ಸಚಿವ ಕೃಷ್ಣ ಬೈರೇಗೌಡ, ವಸತಿ ಸಚಿವ ಜಮೀರ್‌ ಅಹ್ಮದ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ರವಿ ಸುಬ್ರಮಣ್ಯ, ಎಂ.ಕೃಷ್ಣಪ್ಪ, ಉದಯಗರುಡಾಚಾರ್‌, ಸಂಸದರಾದ ಪಿ.ಸಿ.ಮೋಹನ್‌. ತೇಜಸ್ವಿಸೂರ್ಯ, ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ ಸೇರಿದಂತೆ ಬೆಂಗಳೂರಿನ ಹಲವು ಶಾಸಕರು, ಅಧಿಕಾರಿಗಳು ಭಾಗಿಯಾಗಿದ್ದರು.

‘ವಾರ್ಡ್‌ಗೆ ಒಂದು ಪ್ರತ್ಯೇಕ ಕಡತ ಮಾಡಿ ಲೆಕ್ಕ ಇಡಬೇಕು’

ಇನ್ನು, ವಾರ್ಡ್‌ಗೊಂದು ಪ್ರತ್ಯೇಕ ಕಡತ ಮಾಡಿ ಲೆಕ್ಕಚಾರ ಇಡಬೇಕು. ವಾರ್ಡ್‌ವಾರು ಅಭಿವೃದ್ಧಿ ಕಾರ್ಯಗಳ ಆರಂಭ, ಮಧ್ಯಂತರ ಮತ್ತು ಪೂರ್ಣಗೊಂಡ ವಿಡಿಯೋ, ಛಾಯಾಚಿತ್ರಗಳನ್ನು ಕಡತದಲ್ಲಿ ಮಂಡಿಸಬೇಕು. ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಕಸ ನಿರ್ವಹಣೆಯ ಲೆಕ್ಕ ಪಕ್ಕಾ ಇರಬೇಕು. ಎಲ್ಲಿಂದ ಎಲ್ಲಿಗೆ ಸಾಗಿಸಲಾಯಿತು ಎನ್ನುವುದು ಲೆಕ್ಕವಿರಬೇಕು. ಬೆಂಗಳೂರಿನ ಸ್ವಚ್ಛತೆ ನಮ್ಮೆಲ್ಲರ ಹೊಣೆಯಾಗಿದೆ. ಬಿಡಿಎ ಕಾಂಪ್ಲೆಕ್ಸ್‌ಗಳ ರಿ-ಮಾಡೆಲಿಂಗ್‌ ಕುರಿತು ಸಹ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಕುಡಿಯುವ ನೀರಿನ ನಿರ್ವಹಣೆ ಸರಬರಾಜು ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಬೆಂಗಳೂರು: ವರ್ಷಾಂತ್ಯಕ್ಕೆ ಬಿಬಿಎಂಪಿಗೆ ಚುನಾವಣೆ?

ಒಂದೂವರೆ ಕೋಟಿ ಜನಸಂಖ್ಯೆ ಇರುವ ಬೆಂಗಳೂರು ಎಲ್ಲರಿಂದಲೂ ಬೆಳೆದಿದೆ. ಬೆಂಗಳೂರು ಇತಿಹಾಸವನ್ನು ಮರು ಸೃಷ್ಟಿಸುವ ಅಗತ್ಯವಿದೆ. ಮಳೆ ಬಂದರೆ ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಚರ್ಚಿಸಲಾಗಿದೆ. ಬಾಟಲ್‌ನೆಕ್‌ಗಳನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಮತ್ತು ವಿಡಿಯೋ ಕ್ಯಾಮೆರಾಗಳನ್ನು ಹಾಕಲು ಕ್ರಮ ಕೈಗೊಳ್ಳಲಾಗುವುದು. ಎಲ್ಲರೂ ಒಳ್ಳೊಳ್ಳೆ ಸಲಹೆಗಳನ್ನು ನೀಡಿದ್ದಾರೆ. ಸಂಸದರು ಭಾಗಿಯಾಗಿದ್ದು, ಕೆಲವರು ಮುನಿಸಿಕೊಂಡು ಹೋಗಿದ್ದಕ್ಕೆ ಕಾರಣ ಗೊತ್ತಿಲ್ಲ. ಬದಲಾವಣೆ ಒಂದೇ ದಿನ ಮಾಡಲು ಸಾಧ್ಯವಿಲ್ಲ. ಇದೇ ರೀತಿಯಲ್ಲಿ ಕಾಲ ಕಾಲಕ್ಕೆ ಸಂಬಂಧಿಸಿದವರ ಜತೆ ಸಭೆಯಲ್ಲಿ ಹಮ್ಮಿಕೊಳ್ಳುವ ಮೂಲಕ ನವ ಬೆಂಗಳೂರಿಗಾಗಿ ಶ್ರಮಿಸಲಾಗುವುದು ಎಂದು ಹೇಳಿದರು.

Follow Us:
Download App:
  • android
  • ios