ಬೆಂಗಳೂರು[ಮಾ.18]: ಕೊರೋನಾ ವೈರಸ್‌ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಇಟಲಿಯ ರೋಮ್‌ ವಿಮಾನನಿಲ್ದಾಣದಲ್ಲಿ ನನ್ನ ಮಗಳೂ ಸೇರಿದಂತೆ 60-70 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ನಾವು ಅಸಹಾಯಕ ಸ್ಥಿತಿಯಲ್ಲಿದ್ದೇವೆ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಅಥವಾ ನಾಳೆ ಸರಿ ಹೋಗಬಹುದು ಎಂಬ ವಿಶ್ವಾಸವಿದೆ. ಅವರು ವಿಮಾನ ನಿಲ್ದಾಣದಲ್ಲೇ ಬಂದಿಯಾಗಿ ಈಗಾಗಲೇ ಒಂದು ವಾರವಾಯ್ತು. ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಎಲ್ಲ ಸರಿಯಾಗಬಹುದು. ಕಾದು ನೋಡಬೇಕು ಎಂದರು.

ಮಗಳು ಉನ್ನತ ವ್ಯಾಸಂಗಕ್ಕಾಗಿ ಅಲ್ಲಿಗೆ ತೆರಳಿದ್ದಾಳೆ. ವಿಮಾನದಲ್ಲಿ ಕುಳಿತವರನ್ನು ಹೊರಗೆ ಕರೆದುಕೊಂಡು ಬಂದಿದ್ದಾರೆ. ಒಂದು ವಾರದಿಂದ ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ. ಅಲ್ಲಿ ಊಟ ಮತ್ತು ವಸತಿಗೆ ಸಮಸ್ಯೆಯಾಗಿದೆ. ಕೆಲವು ವಿದ್ಯಾರ್ಥಿಗಳು ಹಣವಿಲ್ಲದೇ ಪರದಾಡುವಂತಾಗಿದೆ. ಭಾರತ ಸರ್ಕಾರದ ಪ್ರಮಾಣಪತ್ರ ತೆಗೆದುಕೊಂಡು ಬನ್ನಿ ಎಂದು ಹೇಳಿರುವ ಕಾರಣ ಅಲ್ಲೇ ಉಳಿಯಬೇಕಾಗಿದೆ. ಅಲ್ಲಿ ಸಿಬ್ಬಂದಿ ಕೊರತೆ ಕಾರಣ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ನಿಮ್ಮ ರಾಯಭಾರಿ ಕಚೇರಿ ಬಳಿ ಮಾತನಾಡಿ ಎಂದೂ ಹೇಳುತ್ತಿದ್ದಾರೆ ಎಂದು ವಿವರಿಸಿದರು.

ಹಣದ ಕೊರತೆ ಉಂಟಾಗಿರುವುದರಿಂದ ಅಲ್ಲಿರುವ ಕೆಲವು ಭಾರತೀಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಮುಂದೆ ನೀವೆ ವ್ಯವಸ್ಥೆ ಮಾಡಿಕೊಳ್ಳಿ ಎಂಬ ಮಾತನ್ನು ಆ ದೇಶದ ಅಧಿಕಾರಿಗಳು ಹೇಳಿದ್ದಾರಂತೆ. ನನಗೆ ಬೇರೆ ದೇಶದ ಬಗ್ಗೆ ಅಷ್ಟುಮಾಹಿತಿ ಗೊತ್ತಾಗುವುದಿಲ್ಲ. ಹೀಗಾಗಿ, ನಾನು ಈಗಾಗಲೇ ಈ ಸಂಬಂಧ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ಬಿ.ಶ್ರೀರಾಮುಲು ಹಾಗೂ ಡಾ.ಕೆ.ಸುಧಾಕರ್‌ ಬಳಿ ಹೇಳಿಕೊಂಡಿದ್ದೇನೆ. ಅವರು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ರಾಯಭಾರಿ ಕಚೇರಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಸೋಮವಾರ ರಾತ್ರಿ ಮಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಆರೋಗ್ಯವಾಗಿದ್ದೇನೆ ಎಂದಿದ್ದಾಳೆ. ಆದರೆ, ದೇಶಕ್ಕೆ ವಾಪಸಾಗಬೇಕು ಎನ್ನುತ್ತಿದ್ದಾಳೆ. ಅಲ್ಲಿರುವ ಇತರ ಭಾರತೀಯ ನಿವಾಸಿಗಳು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.