Asianet Suvarna News Asianet Suvarna News

ಸಂಬಳ ಸಿಗದೆ ಅರಣ್ಯ ರಕ್ಷಕರು ಸಂಕಷ್ಟದಲ್ಲಿ: ಇಂದಿನಿಂದ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಮೀಸಲು ಮತ್ತು ವನ್ಯಜೀವಿ ಅಭಯಾರಣ್ಯದ ಸಂರಕ್ಷಣೆಗಾಗಿ ಹಗಲಿರುಳು ದುಡಿವ ಕಾವಲುಗಾರರು ಕಳೆದ ಮೂರ್ನಾಲ್ಕು ತಿಂಗಳಿಂದ ಸಂಬಳವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದು, ವೇತನ ನೀಡುವುದಾಗಿ ಹೇಳಿದ್ದ ಭರವಸೆ ಈಡೇರದೇ ಫೆ.13ರಿಂದ ಹೋರಾಟದ ಮಾರ್ಗ ಹಿಡಿದಿದ್ದಾರೆ. 

Forest guards are in trouble without getting salary gvd
Author
First Published Feb 13, 2023, 4:21 AM IST

ಬೆಂಗಳೂರು (ಫೆ.13): ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ಮೀಸಲು ಮತ್ತು ವನ್ಯಜೀವಿ ಅಭಯಾರಣ್ಯದ ಸಂರಕ್ಷಣೆಗಾಗಿ ಹಗಲಿರುಳು ದುಡಿವ ಕಾವಲುಗಾರರು ಕಳೆದ ಮೂರ್ನಾಲ್ಕು ತಿಂಗಳಿಂದ ಸಂಬಳವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದು, ವೇತನ ನೀಡುವುದಾಗಿ ಹೇಳಿದ್ದ ಭರವಸೆ ಈಡೇರದೇ ಫೆ.13ರಿಂದ ಹೋರಾಟದ ಮಾರ್ಗ ಹಿಡಿದಿದ್ದಾರೆ. ಕಳ್ಳಬೇಟೆ, ಅಗ್ನಿ ದುರಂತ ತಡೆ ಸೇರಿದಂತೆ ಅರಣ್ಯ ಸಂರಕ್ಷಣೆಗೆ ದುಡಿಯುತ್ತಿರುವ ಹೊರಗುತ್ತಿಗೆ ನೌಕರರು ನಿಗದಿತ ವೇಳೆಗೆ ಸಮರ್ಪಕವಾಗಿ ಸಂಬಳವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ದಿನಗೂಲಿಯೇ ಸಿಕ್ಕಿಲ್ಲ. 

ಬೇಸಿಗೆ ಹೊಸ್ತಿಲಲ್ಲಿರುವ ಈ ವೇಳೆ ಕಾಡ್ಗಿಚ್ಚು ಹರಡದಂತೆ ಕ್ರಮ ವಹಿಸುವಲ್ಲಿ ಇವರ ಕೆಲಸವೇ ಪ್ರಧಾನ. ಹಾಗಾಗಿ ಅರಣ್ಯ ಇಲಾಖೆ ತಕ್ಷಣ ಎಚ್ಚೆತ್ತು ಬೇಡಿಕೆ ಈಡೇರಿಸಬೇಕು ಪರಿಸರ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಬಿಆರ್‌ಟಿ ಮೀಸಲು ಅಭಯಾರಣ್ಯದಲ್ಲಿ 165ಕ್ಕೂ ಹೆಚ್ಚಿರುವ ದಿನಗೂಲಿ ನೌಕರರಿಗೆ ಸರಾಸರಿ ಸುಮಾರು 11 ಸಾವಿರ ರು. ಸಂಬಳ ನೀಡಲಾಗುತ್ತದೆ. ಎಂಆರ್‌ ವಾಚರ್‌, ಫೈರ್‌ ವಾಚರ್‌, ಗಸ್ತು ತಿರುಗುವುದು, ಕಾವಲುಗಾರರು ಸೇರಿ ಹಲವು ವಿಭಾಗದಲ್ಲಿ ಇವರು ದುಡಿಯುತ್ತಾರೆ.

ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಪಾಠ ಕಲಿಸಿ: ಎಚ್‌.ಡಿ.ಕುಮಾರಸ್ವಾಮಿ

ಹೆಸರು ಹೇಳಲಿಚ್ಛಿಸದ ನೌಕರರೊಬ್ಬರು ಮಾತನಾಡಿ, ಕಳೆದ ಮೂರ್ನಾಲ್ಕು ತಿಂಗಳಿಂದ ದಿನಗೂಲಿ ನೀಡದ ಕಾರಣ ಜೀವನ ನಡೆಸುವುದು ಕಷ್ಟವಾಗಿದೆ. ಮೇಲಧಿಕಾರಿಗಳು ಒಂದಿಲ್ಲೊಂದು ಸಬೂಬು ಹೇಳುತ್ತ ದಿನ ದೂಡುತ್ತಿದ್ದಾರೆ. ಫೆ.10ರಂದು ಎಲ್ಲ ಸಂಬಳ ನೀಡುವುದಾಗಿ ತಿಳಿಸಿದ್ದರು. ಆದರೆ, ಈಗ ನಾಳೆ, ನಾಡಿದ್ದು ಸಂಬಳ ನೀಡುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ಮಾತಿನ ಮೇಲೆ ವಿಶ್ವಾಸ ಕಳೆದು ಹೋಗಿದೆ. ಸಂಬಳ ನೀಡಿದ ಬಳಿಕವೆ ಕೆಲಸಕ್ಕೆ ಹಾಜರಾಗುತ್ತೇವೆ ಎಂದರು.

ಅರಣ್ಯ ಸಂರಕ್ಷಣೆಯಲ್ಲಿ ಇವರದ್ದು ಮಹತ್ವದ ಪಾತ್ರ. ಅಧಿಕಾರಿಗಳು ಕೇವಲ ನಾಲ್ಕು ಗೋಡೆ ಮಧ್ಯೆ ಕುಳಿತಿರುತ್ತಾರೆ. ಆದರೆ ನೈಜವಾಗಿ ಅರಣ್ಯ ಕಾವಲು ಮಾಡುವವರ ಜೀವನ ಭದ್ರತೆ, ರಕ್ಷಣೆಗೆ ಕ್ರಮ ವಹಿಸದಿರುವುದು ದುರಂತ ಎಂದು ಪರಿಸರ ಸಂರಕ್ಷಣಾ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶೀಘ್ರ ಕ್ರಮ, ಆರ್‌.ಕೆ.ಸಿಂಗ್‌: ನೌಕರರು ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್‌.ಕೆ.ಸಿಂಗ್‌, ‘ಸಿಬ್ಬಂದಿಗೆ ಸಂಬಳವಾಗದೆ ಅವರು ಧರಣಿಗೆ ಮುಂದಾಗಿರುವುದು ಶುಕ್ರವಾರ ಗಮನಕ್ಕೆ ಬಂದಿದೆ. ಕೇಂದ್ರ ಸರ್ಕಾರದಿಂದ ಕೆಲ ಅನುದಾನಗಳು ಬಾರದ ಕಾರಣ ಸಿಬ್ಬಂದಿಗೆ ಸಂಬಳ ಆಗಿಲ್ಲವೆಂದು ತಿಳಿದು ಬಂದಿದೆ. ನೌಕರರಿಗೆæ ಈ ವಿಚಾರ ತಿಳಿಸಿ ಅವರ ಮನವೊಲಿಸಿ ಕೆಲಸಕ್ಕೆ ಬರುವಂತೆ ತಿಳಿಸಲಾಗುವುದು. ಸಂಬಳ ಬಿಡುಗಡೆ ಶೀಘ್ರ ಕ್ರಮ ವಹಿಸಲಾಗುವುದು. ಫೆ.13ರಂದು ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು.

ಯಶ್‌, ರಿಷಬ್‌ ಸೇರಿ ಗಣ್ಯರಿಂದ ಮೋದಿ ಭೇಟಿ: ರಾಜಭವನದಲ್ಲಿ ಅನೌಪಚಾರಿಕ ಮಾತುಕತೆ

ಬಿಆರ್‌ಟಿ ಮಾತ್ರವಲ್ಲದೆ ಇತರೆ ಸಂರಕ್ಷಿತ ಅರಣ್ಯ, ಅಭಯಾರಣ್ಯದಲ್ಲೂ ಗುತ್ತಿಗೆ ಆಧಾರದಲ್ಲಿರುವವರಿಗೂ ನಿಯಮಿತವಾಗಿ ಸಂಬಳ ಆಗುತ್ತಿಲ್ಲ. ಕಳೆದ 20 ವರ್ಷದಿಂದ ಹೀಗೆಯೇ ಆಗುತ್ತಿದೆ. ಅಧಿಕಾರಿಗಳಿಗೆ ಸರಿಯಾಗಿ ವೇತನ ಸಿಗುತ್ತದೆ, ಆದರೆ ಅರಣ್ಯ ರಕ್ಷಣೆಗೆ ಜೀವ ಪಣಕ್ಕಿಟ್ಟು ಶ್ರಮಿಸುವವರ ಸಂಬಳ ಮಾತ್ರ ಮೂರ್ನಾಲ್ಕು ತಿಂಗಳಿಗೊಮ್ಮೆ ನೀಡುತ್ತಿದೆ. ಇವರ ಬಗ್ಗೆ ಇಲಾಖೆ ನಿರ್ಲಕ್ಷ್ಯ ಸರಿಯಲ್ಲ.
-ಶರತ್‌ ಬಾಬು ವನ್ಯಜೀವಿ ಸಂರಕ್ಷಣಾ ಹೋರಾಟಗಾರ

Follow Us:
Download App:
  • android
  • ios