ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಪಾಠ ಕಲಿಸಿ: ಎಚ್.ಡಿ.ಕುಮಾರಸ್ವಾಮಿ
ಶಾಸಕ ಕೆ.ಎಂ.ಶಿವಲಿಂಗೇಗೌಡರು ಶಾಸಕಾಂಗ ಸಭೆಗಳಿಗೆ ಕರೆದರೂ ಬರಲಿಲ್ಲ. ವಿಧಾನಸೌಧದಲ್ಲಿ ನಾನು ಕುಳಿತಿದ್ದಾಗಲೂ ಬಂದು ಮಾತನಾಡಿಸಲಿಲ್ಲ. ಕಳೆದ ಎರಡು ವರ್ಷದಿಂದ ಕಳ್ಳಾಟ ಆಡಿಕೊಂಡು ಬಂದ್ರು.
ಅರಸೀಕೆರೆ (ಫೆ.13): ಶಾಸಕ ಕೆ.ಎಂ.ಶಿವಲಿಂಗೇಗೌಡರು ಶಾಸಕಾಂಗ ಸಭೆಗಳಿಗೆ ಕರೆದರೂ ಬರಲಿಲ್ಲ. ವಿಧಾನಸೌಧದಲ್ಲಿ ನಾನು ಕುಳಿತಿದ್ದಾಗಲೂ ಬಂದು ಮಾತನಾಡಿಸಲಿಲ್ಲ. ಕಳೆದ ಎರಡು ವರ್ಷದಿಂದ ಕಳ್ಳಾಟ ಆಡಿಕೊಂಡು ಬಂದ್ರು. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಅನ್ನೋ ತರಹ ನಡೆದುಕೊಂಡರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಭಾನುವಾರ ನಡೆದ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿ, ಈಗಾಗಲೇ ಜೆಡಿಎಸ್‌ನಿಂದ ಕಾಲ್ತೆಗೆದು ಕಾಂಗ್ರೆಸ್‌ನೊಂದಿಗೆ ಸಖ್ಯ ಬೆಳೆಸಲು ಮುಂದಾಗಿರುವ ಶಿವಲಿಂಗೇಗೌಡರ ವಿರುದ್ಧ ಟೀಕಾಪ್ರಹಾರ ನಡೆಸಿದರು. ಪಕ್ಷಕ್ಕೆ ದ್ರೋಹ ಮಾಡಿ ಬೆನ್ನು ತೋರುತ್ತಿರುವವರಿಗೆ ತಕ್ಕ ಪಾಠ ಕಲಿಸಿ ಎಂದು ಜನರಿಗೆ ಮನವಿ ಮಾಡಿದರು.
2004ರಲ್ಲಿ ಗಂಡಸಿ ಕ್ಷೇತ್ರದಲ್ಲಿ ಇವರು 18 ಮತಗಳಿಂದ ಸೋತಿದ್ದರು. ಬಳಿಕ, ರೇವಣ್ಣ ಹಾಗೂ ದೇವೇಗೌಡರು, ಶಿವಲಿಂಗೇಗೌಡರನ್ನು ಅರಸೀಕೆರೆಯಲ್ಲಿ ನಿಲ್ಲಿಸಿ, ಗೆಲ್ಲಿಸಿದರು. ಈಗ ದೇವೇಗೌಡ, ಕುಮಾರಸ್ವಾಮಿ ನೋಡಿ ಯಾರು ಓಟು ಹಾಕುತ್ತಾರೆ ಎಂದು ಹೇಳುವ ಮೂಲಕ ಪಕ್ಷಕ್ಕೆ, ತಮಗೆ ಸಹಾಯ ಮಾಡಿದವರಿಗೆ ಮೋಸ ಮಾಡಲು ಹೊರಟಿದ್ದಾರೆ. ಈಗ ಸಿದ್ದರಾಮಯ್ಯನವರ ಜಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕೋಡಿ ಮಠದ ಶ್ರೀಗಳು, ಅರಸೀಕೆರೆಯಲ್ಲಿ ಕುರುಬರು ಅಭ್ಯರ್ಥಿಯಾದರೆ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದ್ದಿದ್ದಾರೆ ಎಂದು ಹೇಳುವ ಮೂಲಕ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಣಾವಾರ ಅಶೋಕ್ ಅಭ್ಯರ್ಥಿ ಎಂದು ಪರೋಕ್ಷವಾಗಿ ನುಡಿದರು.
ಯಶ್, ರಿಷಬ್ ಸೇರಿ ಗಣ್ಯರಿಂದ ಮೋದಿ ಭೇಟಿ: ರಾಜಭವನದಲ್ಲಿ ಅನೌಪಚಾರಿಕ ಮಾತುಕತೆ
ಕೆ.ಆರ್.ಪೇಟೆಯಲ್ಲಿ ರೇವಣ್ಣ ಚುನಾವಣೆಗೆ ನಿಲ್ಲುತಾರೆ ಎಂಬ ಪ್ರಶ್ನೆಗೆ ಅಲ್ಲಿಯ ಮಹಾನುಭಾವನೊಬ್ಬ ರೇವಣ್ಣನೇ ಏನೂ, ಅವರಪ್ಪನೇ ಬಂದು ನಿಲ್ಲಲ್ಲಿ ಎಂದು ದುರಹಂಕಾರದಿಂದ ಹೇಳುತ್ತಾನಂತೆ. ಇಲ್ಲಿ ಬೆಳೆದವನು ಅಲ್ಲಿ ಹಣ ಲೂಟಿ ಹೊಡೆದು ದುಡ್ಡಿನ ಮದದಿಂದ ಆ ರೀತಿ ಮಾತಾಡುತ್ತಾನೆ. ಅವನು ನಾವು ನಿಲ್ಲಿಸುವ ವ್ಯಕ್ತಿಗಿಂತ 20ರಿಂದ 30 ಸಾವಿರ ಮತ ಕಡಿಮೆ ಪಡೆಯುತ್ತಾನೆ ಎಂದು ಏಕವಚನದಲ್ಲಿ ಸಚಿವ ನಾರಾಯಣಗೌಡರ ಹೆಸರೇಳದೇ ಕಟುವಾಗಿ ಟೀಕಿಸಿದರು. ಇದಕ್ಕೂ ಮೊದಲು, ಕುಮಾರಸ್ವಾಮಿ, ಇಬ್ರಾಹಿಂ, ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಹಾಗೂ ಇತರ ನಾಯಕರನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.
ಹಾಸನ ಜಿಲ್ಲೆ ಟಿಕೆಟ್ ಘೋಷಿಸದ ಎಚ್‌ಡಿಕೆ: ಅರಸೀಕೆರೆಯಲ್ಲಿ ಭಾನುವಾರ ನಡೆದ ಜೆಡಿಎಸ್‌ನ ಪಂಚರತ್ನ ಯಾತ್ರೆ ವೇಳೆ ಹಾಸನ ಮತ್ತು ಅರಸೀಕೆರೆ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ, ಯಾವುದೇ ಕ್ಷೇತ್ರದ ಅಭ್ಯರ್ಥಿಗಳ ಘೋಷಣೆ ಮಾಡಲಿಲ್ಲ. ಈಗಲೇ ಅಭ್ಯರ್ಥಿ ಘೋಷಣೆ ಮಾಡಿದರೆ ಪಕ್ಷದೊಳಗೆ ಬಣ ರಾಜಕೀಯ ಶುರುವಾಗಬಹುದು ಎಂಬ ಕಾರಣಕ್ಕೆ ಈ ಕುರಿತು ಅವರು ಯಾವುದೇ ಪ್ರಸ್ತಾಪ ಮಾಡಲಿಲ್ಲ ಎನ್ನಲಾಗಿದೆ.
ಹಾಸನದಲ್ಲಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಗೂ ಮಾಜಿ ಶಾಸಕ ದಿವಂಗತ ಎಚ್.ಎಸ್.ಪ್ರಕಾಶ್ ಪುತ್ರ ಸ್ವರೂಪ್ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಇನ್ನು, ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡರು ಜೆಡಿಎಸ್‌ನಿಂದ ಕಾಲ್ತೆಗೆದಿದ್ದು, ಇಂದಿನ ಯಾತ್ರೆಯಲ್ಲಿನ ಘೋಷಣೆ ಬಳಿಕ, ತಮ್ಮ ನಿಲುವು ತಿಳಿಸುವುದಾಗಿ ಹೇಳಿದ್ದರು. ಆದರೆ, ಇದ್ಯಾವುದಕ್ಕೂ ಎಚ್‌ಡಿಕೆ ಅವಕಾಶವನ್ನೇ ಕೊಟ್ಟಿಲ್ಲ.
2008ರಲ್ಲಿ ಬಿಎಸ್‌ವೈಯನ್ನು ಸಿಎಂ ಮಾಡಿದ್ದು ನಾನೇ: ಜನಾರ್ದನ ರೆಡ್ಡಿ
ನಮಗೆ ಅಬ್ಬಕ್ಕನೂ ಬೇಕು, ಟಿಪ್ಪೂನೂ ಬೇಕು: ಬಳಿಕ, ತಾಲೂಕಿನ ಹಳ್ಳಿಮೈಸೂರು ಹೋಬಳಿಯ ನಗರ್ತಿ ಗ್ರಾಮದಲ್ಲಿ ಶ್ರೀಭೈರವೇಶ್ವರ ಹಾಗೂ ಈಶ್ವರ ದೇವಾಲಯಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ‘ಟಿಪ್ಪುವನ್ನು ಆರಾಧಿಸುವ ಜೆಡಿಎಸ್, ಕಾಂಗ್ರೆಸ್ ಬೇಕೋ, ವೀರ ಅಬ್ಬಕ್ಕನ ಗೌರವಿಸುವ ಬಿಜೆಪಿ ಬೇಕೋ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿ, ರಾಣಿ ಅಬ್ಬಕ್ಕನವರ ಜತೆಗೆ ಅಂದಿನ ದಿನಗಳಲ್ಲಿ ಶೃಂಗೇರಿಯ ದೇವಾಲಯ ಹಾಗೂ ಹಿಂದು ದೇವಾಲಯಗಳನ್ನು ಉಳಿಸಿದ ಟಿಪ್ಪೂನೂ ಬೇಕು. ನಮಗೆ ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಬೇಕಿದೆ ಎಂದರು. ಈ ವೇಳೆ, ಎಚ್‌ಡಿಕೆ, ರೇವಣ್ಣ, ಭವಾನಿ, ಪ್ರಜ್ವಲ್, ಸೂರಜ್ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.