ಮೈಸೂರು, ಉಪ್ಪಿನಂಗಡಿ, ನಾಪೋಕ್ಲು, ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಕಾಡಿಗೆ ಬೆಂಕಿ

ಮೈಸೂರು/ಬೆಂಗಳೂರು(ಮಾ.05):  ಮೈಸೂರಿನ ಚಾಮುಂಡಿಬೆಟ್ಟ, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿ, ಕೊಡಗಿನ ನಾಪೋಕ್ಲು ಹಾಗೂ ಗದಗ ಸಮೀಪದ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಶನಿವಾರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 3 ಗಂಟೆ ಕಾರ್ಯಾಚರಣೆ ನಡೆಸಿದ ಬೆಂಕಿ ನಂದಿಸಿದರು. ಚಾಮುಂಡಿಬೆಟ್ಟಕ್ಕೆ ತಾವರೆಕಟ್ಟೆಯಿಂದ ನಂದಿಗೆ ತೆರಳುವ ಮಾರ್ಗದಲ್ಲಿರುವ ವ್ಯೂವ್‌ ಪಾಯಿಂಟ್‌ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡದಲ್ಲಿ ಹಲವಾರು ಗಿಡ ಮರಗಳು ಸುಟ್ಟು ಭಸ್ಮವಾಗಿವೆ.

ಸಸ್ಯಕಾಶಿ ಕಪ್ಪತ್ತಗುಡ್ಡಕ್ಕೆ ಮತ್ತೆ ಬೆಂಕಿ; 10 ಹೇಕ್ಟರ್ ಪ್ರದೇಶದ ಗಿಡಮೂಲಿಕೆ ಸುಟ್ಟು ಕರಕಲು!

ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಹತ್ಯಡ್ಕ ಗ್ರಾಮದ ಉದ್ಯಾರ ಹಾಗೂ ಶಿಬಾಜೆ ಗ್ರಾಮದ ಪೆರ್ಲ ಎಂಬಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, 20ಕ್ಕೂ ಹೆಚ್ಚು ಅರಣ್ಯ ಇಲಾಖಾ ಸಿಬ್ಬಂದಿ ಬೆಂಕಿ ನಂದಿಸಿದರು. ಇದೇ ವೇಳೆ, ಕೊಡಗಿನ ನಾಪೋಕ್ಲು ಸಮೀಪದ ಕಕ್ಕಬ್ಬೆ - ನೆಲಜಿ ವ್ಯಾಪ್ತಿಯ ಇಗ್ಗುತಪ್ಪ ಬೆಟ್ಟದಲ್ಲಿಯೂ ಬೆಂಕಿ ಕಾಣಿಸಿಕೊಂಡಿದ್ದು, ಮಲ್ಮಾ ಬೆಟ್ಟದಲ್ಲಿರುವ ದೇವನೆಲೆಯ ಸುತ್ತ ಕುರುಚಲು ಗಿಡಗಳು ಸಂಪೂರ್ಣ ಭಸ್ಮವಾಗಿ ಬರಡಾಗಿದೆ. 

ಚೀಯಕಪೂವಂಡ ಮುತ್ತಪ್ಪ ಎಂಬುವರ ಒಂದೂವರೆ ಎಕರೆ ಕಾಫಿ ತೋಟ ಅಗ್ನಿಗೆ ಆಹುತಿಯಾಗಿದೆ. ಅಲ್ಲದೆ, ಗದಗ ಸಮೀಪದ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಬೆಂಕಿ ತಗುಲಿದ ಪರಿಣಾಮ ಅಪಾರ ಪ್ರಮಾಣದ ಔಷಧ ಸಸ್ಯಗಳು ಹಾಗೂ ಭಾದೆ ಹುಲ್ಲು ಭಸ್ಮವಾಗಿದೆ. ಅಂದಾಜು 20 ಹೆಕ್ಟರ್‌ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ ಎಂದು ಅಂದಾಜಿಸಲಾಗಿದೆ.