Asianet Suvarna News Asianet Suvarna News

Indian Army day: ಮೊದಲ ಬಾರಿಗೆ ನಗರದಲ್ಲಿ ಭೂಸೇನಾ ದಿನ

ದೆಹಲಿಯಿಂದ ಹೊರಗೆ ಮೊದಲ ಬಾರಿಗೆ ಭೂಸೇನಾ ದಿನಾಚರಣೆ ಪಥಸಂಚಲನ ಬೆಂಗಳೂರಿನಲ್ಲಿ ನಡೆಯಲಿದೆ. ಬರುವ ಜನವರಿ 15ಕ್ಕೆ ಪಥ ಸಂಚಲನ ನಡೆಯಲಿದ್ದು, ಈ ಬಾರಿ ಬೆಂಗಳೂರಿನಲ್ಲಿ ಸೇನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

For the first time, Army Day in the bengaluru city rav
Author
First Published Dec 19, 2022, 11:24 AM IST

ಬೆಂಗಳೂರು (ಡಿ.19) : ದೆಹಲಿಯಿಂದ ಹೊರಗೆ ಮೊದಲ ಬಾರಿಗೆ ಭೂಸೇನಾ ದಿನಾಚರಣೆ ಪಥಸಂಚಲನ ಬೆಂಗಳೂರಿನಲ್ಲಿ ನಡೆಯಲಿದೆ. ಬರುವ ಜನವರಿ 15ಕ್ಕೆ ಪಥ ಸಂಚಲನ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಹಲವು ಚಟುವಟಿಕೆಗಳನ್ನು ಸೇನೆ ಆಯೋಜಿಸಿದೆ. 1949ರ ಜನವರಿ 15ರಂದು ಭಾರತೀಯ ಸೇನೆಯ ಜವಾಬ್ದಾರಿಯನ್ನು ಕೊನೆಯ ಬ್ರಿಟಿಷ್‌ ಸೇನಾಧಿಕಾರಿ ಎಫ್‌.ಆರ್‌.ಆರ್‌.ಬುಚೆರ್‌ರಿಂದ ಮೊತ್ತ ಮೊದಲ ಭಾರತೀಯ ಕಮಾಂಡರ್‌ ಇನ್‌ ಚೀಫ್‌, ಫೀಲ್ಡ್‌ ಮಾರ್ಷಲ್‌, ಕನ್ನಡಿಗೆ ಕೆ.ಎಂ.ಕಾರ್ಯಪ್ಪ ವಹಿಸಿಕೊಂಡಿದ್ದರು. ಇದರ ನೆನಪಿಗಾಗಿ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ಹಾಗೆಯೇ ಭಾರತೀಯ ಸೇನಾ ಪಡೆಗಳ ಚಟುವಟಿಕೆಗಳಲ್ಲಿ ಹೆಚ್ಚು ಜನರು ಭಾಗವಹಿಸಬೇಕು, ಜನರಲ್ಲಿ ಅರಿವು ಮೂಡಬೇಕು ಎಂಬ ಉದ್ದೇಶದಿಂದ ದೆಹಲಿಯ ಹೊರಗೆ ಸೇನಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂಬ ಆಶಯದಿಂದ ಬೆಂಗಳೂರಿನಲ್ಲಿ ಸೇನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಜನವರಿ 15ರಂದು ಹುತಾತ್ಮ ಯೋಧರ ಸ್ಮಾರಕಕ್ಕೆ ನಮನ ಸಲ್ಲಿಸಿ, ಸೈನ್ಯದ ಪಥ ಸಂಚಲದ ಗೌರವ ರಕ್ಷೆ ಸ್ವೀಕರಿಸಲಿದ್ದಾರೆ. ಪಥ ಸಂಚಲನದದಲ್ಲಿ ಭಾರತೀಯ ಸೈನ್ಯದ ಶೌರ್ಯ ಪ್ರದರ್ಶನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಮಿಲಿಟರಿ ಬ್ಯಾಂಡ್‌ಗಳು, ಯುದ್ಧ ಸನ್ನದ್ಧತೆಗಳ ಕವಾಯತ್ತು ಇರಲಿದೆ. ಭಾರತೀಯ ಸೇನೆಯತ್ತ ಯುವ ಜನರನ್ನು ಆಕರ್ಷಿಸುವುದು, ದೇಶ ರಕ್ಷಣೆಯ ಸ್ಪೂರ್ತಿಯನ್ನು ಅವರಲ್ಲಿ ಮೂಡಿಸುವ ಪ್ರಯತ್ನವನ್ನು ಪಥಸಂಚಲನ ನಡೆಸಲಿದೆ.

Bengaluru: ಮಿಲಿಟರಿ ಕ್ಯಾಂಪ್ ಮೇಲೆ ಆತಂಕ ಸೃಷ್ಟಿಸಿದ ಡ್ರೋಣ್ ಹಾರಾಟ

ಶೌರ್ಯ ಪ್ರದರ್ಶಿಸಿದ ಸೈನಿಕರಿಗೆ ಶೌರ್ಯ ಪದಕಗಳ ಪ್ರದಾನ, ಸೈನಿಕ ದಳ ಮತ್ತು ಸೈನಿಕರ ಸಾಹಸಕ್ಕೆ ಮೆಚ್ಚುಗೆ ಸೂಚಿಸಿ ಶ್ಲಾಘನೀಯ ಪದಕಗಳ ಪ್ರದಾನ ಈ ಕಾರ್ಯಕ್ರಮದಲ್ಲಿ ನಡೆಯಲಿದೆ. ಜನವರಿ 13ರಂದು ದಕ್ಷಿಣ ಕಮಾಂಡ್‌ನ ಸೇನಾ ಕಮಾಂಡರ್‌ ಎ.ಕೆ.ಸಿಂಗ್‌ ದಕ್ಷಿಣ ಕಮಾಂಡ್‌ನ ಸೈನಿಕರಿಗೆ ಪದಕ ಪ್ರದಾನ ಮಾಡಲಿದ್ದಾರೆ.

ಗ್ರಾಮೀಣ ಭಾಗದಲ್ಲಿ ಸೇನೆ ಕಾರ‍್ಯಕ್ರಮ

ಸೇನಾ ದಿನದ ಪೂರ್ವದಲ್ಲಿ ಸೇನೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ತಿಂಗಳ 24ರಂದು ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು 7,500 ಯುನಿಟ್‌ ರಕ್ತ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಡಿಸೆಂಬರ್‌ 30ರಂದು ಗ್ರಾಮೀಣ ಭಾಗಗಳನ್ನು ತಲುಪುವ ಉದ್ದೇಶದಿಂದ ಗ್ರಾಮ ಸೇವಾ - ರಾಷ್ಟ್ರ ಸೇವಾ ಎಂಬ ವಿಶಿಷ್ಟಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಅಂಗವಾಗಿ 75 ಅಭಿವೃದ್ಧಿ ವಂಚಿತ ಹಳ್ಳಿಗಳಲ್ಲಿ ಆರೋಗ್ಯ ಶಿಬಿರ, ಅಗ್ನಿವೀರ ಯೋಜನೆ ಬಗ್ಗೆ ಜಾಗೃತಿ, ವೀರ ನಾರಿಯರ ಸನ್ಮಾನ, ಸ್ವಚ್ಛತೆ ಅಭಿಯಾನ, ಕ್ರೀಡಾ ಸೌಲಭ್ಯಗಳ ನಿರ್ಮಾಣ ಮತ್ತು ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ.

ಜ.7ರಂದು ವಿದ್ಯಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆರ್ಮಿ ಪಬ್ಲಿಕ್‌ ಸ್ಕೂಲ್‌ಗಳು ಸುಮಾರು 75 ಸರ್ಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿ ಕ್ರೀಡಾ ಸೌಕರ್ಯಗಳ ಹಂಚಿಕೆ, ಕ್ರೀಡಾ ಕೂಟ ಆಯೋಜನೆ, ಯೋಗ ಮತ್ತಿತ್ತರ ಮೃದು ಕೌಶಲಗಳ ತರಬೇತಿ ಸೇರಿದಂತೆ ಪರಸ್ಪರ ಉಪಯೋಗವಾಗುವ ಚಟುವಟಿಕೆಗಳನ್ನು ಆಯೋಜಿಸಲಿವೆ. 10ರಂದು ಜಲ-ಜೀವನ ಸುರಕ್ಷೆ ಎಂಬ ಕಾರ್ಯಕ್ರಮದ ಮೂಲಕ ಕೆರೆ, ಸರೋವರಗಳ ಸಂರಕ್ಷಣೆ ಚಟುವಟಿಕೆ ನಡೆಸಲಿದೆ. 2023ರ ಜನವರಿ 14 ರಂದು ವೃಕ್ಷೋಪರಣ ಕಾರ್ಯಕ್ರಮವಿದ್ದು ಹಸಿರು ಭಾರತಕ್ಕಾಗಿ 75 ಸಾವಿರ ಸಸಿಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಗುಜರಾತ್‌ನಲ್ಲಿ ಮಿಲಿಟರಿ ವಿಮಾನ ಘಟಕಕ್ಕೆ PM Narendra Modi ಅಡಿಗಲ್ಲು

ಈ ಮಧ್ಯೆ ಜನವರಿ 9ರಿಂದ 15ರವರೆಗೆ ಶಸ್ತ್ರಾಸ್ತ್ರಗಳ ಪ್ರದರ್ಶನ, ಬ್ಯಾಂಡ್‌ ಸಂಗೀತ ಪ್ರದರ್ಶನ, ರಸಪ್ರಶ್ನೆ ಪ್ರದರ್ಶನ, ಚಿತ್ರಕಲೆ ಮತ್ತು ರಸಪ್ರಶ್ನೆ ಸ್ಪರ್ಧೆ, ಸೈಕ್ಲಾಥನ್‌, ಶೌರ್ಯ ಪ್ರಶಸ್ತಿ ಪುರಸ್ಕೃತರಿಂದ ಸ್ಪೂರ್ತಿತುಂಬುವ ಮಾತುಗಳು, ಪ್ರಸಿದ್ಧ ಯುದ್ಧಗಳ ಬಗ್ಗೆ ಪ್ರಸ್ತುತಿ, ಯುದ್ಧ ಸ್ಮಾರಕ, ಯುದ್ಧ ಮ್ಯೂಸಿಯಂಗಳಿಗೆ ಭೇಟಿ, ‘ಏಕ ಭಾರತ-ಸರ್ವಶ್ರೇಷ್ಠ ಭಾರತ’ ಪರಿಕಲ್ಪನೆಯ ಸಂಗೀತ ಕಾರ್ಯಕ್ರಮಗಳನ್ನು ಭಾರತೀಯ ಸೇನೆ ಹಮ್ಮಿಕೊಂಡಿದೆ.

Follow Us:
Download App:
  • android
  • ios