ಮಲ್ಟಿ ಫ್ಲೆಕ್ಸ್ ಗಳಲ್ಲಿ ಜನರ ಜೇಬಿಗೆ ಭಾರೀ ಕತ್ತರಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 15, Jul 2018, 10:07 AM IST
Foods too expensive In multiplexes
Highlights

ಗರಿಷ್ಠ ಮಾರಾಟ ದರಕ್ಕಿಂತಲೂ (ಎಂಆರ್‌ಪಿ) 2 - 3 ಪಟ್ಟು ಅಧಿಕ ಬೆಲೆಗೆ ತಿಂಡಿ-ಪಾನೀಯ ಮಾರಾಟದ ಮೂಲಕ ಸಾರ್ವಜನಿಕರ ಲೂಟಿ ಹೊಡೆಯುತ್ತಿರುವ ರಾಜ್ಯದ ಮಲ್ಟಿಪ್ಲೆಕ್ಸ್‌ಗಳಿಗೆ ಮೂಗುದಾರ ಹಾಕುವ ಬಗ್ಗೆ ಮತ್ತೊಮ್ಮೆ ಗಟ್ಟಿ ಧ್ವನಿಯ ಆಗ್ರಹ ಹುಟ್ಟಿಕೊಂಡಿದೆ. 
 

ಮೋಹನ್ ಹಂಡ್ರಂಗಿ
ವಿಶ್ವನಾಥ್ ಮಲೆಬೆನ್ನೂರು

ಬೆಂಗಳೂರು :  ಗರಿಷ್ಠ ಮಾರಾಟ ದರಕ್ಕಿಂತಲೂ (ಎಂಆರ್‌ಪಿ) 2 - 3 ಪಟ್ಟು ಅಧಿಕ ಬೆಲೆಗೆ ತಿಂಡಿ-ಪಾನೀಯ ಮಾರಾಟದ ಮೂಲಕ ಸಾರ್ವಜನಿಕರ ಲೂಟಿ ಹೊಡೆಯುತ್ತಿರುವ ರಾಜ್ಯದ ಮಲ್ಟಿಪ್ಲೆಕ್ಸ್‌ಗಳಿಗೆ ಮೂಗುದಾರ ಹಾಕುವ ಬಗ್ಗೆ ಮತ್ತೊಮ್ಮೆ ಗಟ್ಟಿ ಧ್ವನಿಯ ಆಗ್ರಹ ಹುಟ್ಟಿಕೊಂಡಿದೆ. 

ಮಲ್ಟಿಪ್ಲೆಕ್ಸ್ ಗಳಲ್ಲಿ ಸಾರ್ವಜನಿಕರು ಹೊರಗಿನಿಂದ  ನೀರನ್ನೂ ಕೊಂಡೊ ಯ್ಯುವಂತಿಲ್ಲ. ಬದಲಿಗೆ 20  ರು. ನೀರಿನ ಬಾಟಲ್‌ಗೆ 50 ಬೆಲೆ ತೆತ್ತು ಖರೀದಿಸಬೇಕೆಂಬ ಲೂಟಿ ಬಗ್ಗೆ 2017ರಲ್ಲಿ ರಾಜ್ಯಾದ್ಯಂತ ತೀವ್ರ ಚರ್ಚೆ ಹುಟ್ಟಿಕೊಂಡಿತ್ತು. ಎಂಆರ್‌ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ  ಮಾಡುವುದಕ್ಕೆ ಕಡಿವಾಣ ಹೇರುವುದಾಗಿ ಆಹಾರ ಇಲಾಖೆಯು ರಾಜ್ಯಾದ್ಯಂತ 90 ದಾಳಿಗಳನ್ನು ನಡೆಸಿತ್ತು. ಆದರೆ, ಎಂಆರ್‌ಪಿಗಿಂತ ದುಪ್ಪಟ್ಟು ಸುಲಿಗೆ ಮಾಡುವ ಹಾಗೂ ಹೊರಗಿನ ತಿಂಡಿ ನಿಷೇಧ ರದ್ದು ಮಾಡುವ ಬಗ್ಗೆ ಆಕ್ರೋಶದ ಮಾತುಗಳನ್ನೂ ಆಡಿತ್ತು. 

ಆದರೆ, ಮಲ್ಟಿಫ್ಲೆಕ್ಸ್ ಮಾಫಿಯಾ ಮುಂದೆ ಸರ್ಕಾರದ ಆಕ್ರೋಶ ತಣ್ಣಗಾಗಿತ್ತು. ಇದಲ್ಲದೆ, ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಲನಚಿತ್ರಗಳ ಟಿಕೆಟ್ ದರ 200 ಕ್ಕೆ ಮಿತಿಗೊಳಿಸಿ ಸಹ ಸರ್ಕಾರ  ಆದೇಶ ಹೊರಡಿಸಿತ್ತು. ಆದರೆ ಟಿಕೆಟ್ ಬೆಲೆ ನಿಯಂತ್ರಿಸಿ ಸರ್ಕಾರ ಹೊರಡಿಸಿರುವ ಆದೇಶಕ್ಕೂ ಯಾವುದೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಕಿಮ್ಮತ್ತು ನೀಡಿಲ್ಲ. ರಾಜ್ಯ ಸರ್ಕಾರವಾಗಲಿ ಅಥವಾ ಈ ಬೇಡಿಕೆ ಇಟ್ಟಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಾಗಲಿ ಅನುಷ್ಠಾನದ ಮೇಲ್ವಿಚಾರಣೆ ಗೋಜಿಗೆ ಹೋಗಲಿಲ್ಲ. ಹೀಗಾಗಿ ಸರ್ಕಾರದ ಭರವಸೆ ಕಾಗದಕ್ಕೆ ಸೀಮಿತವಾಗಿತ್ತು. 

ಇದೀಗ ಮಹಾರಾಷ್ಟ್ರ ಸರ್ಕಾರವು ಮಲ್ಟಿಪ್ಲೆಕ್ಸ್ ಗಳಿಗೆ ಹೊರಗಿನ ತಿಂಡಿ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಿದೆ. ಮುಂಬೈ ಹೈಕೋರ್ಟ್ ನಿರ್ದೇಶನದ ಮೇರೆಗೆ ಮಹಾರಾಷ್ಟ್ರ ಕೈಗೊಂಡ ಕ್ರಮ ತೀವ್ರ ಚರ್ಚೆ ಹುಟ್ಟುಹಾಕಿದೆ. ಜತೆಗೆ, ರಾಜ್ಯ ಸರ್ಕಾರವೂ ಈ ನಿಯಮವನ್ನು ಜಾರಿಗೆ ತರುವ ಮೂಲಕ ನಾಗರೀಕರ ಹಿತ ಕಾಪಾಡುವಂತೆ ತೀವ್ರ ಆಗ್ರಹ ವ್ಯಕ್ತವಾಗಿದೆ.

ನೀರು ಹಾಗೂ ಆಹಾರ ಅಗತ್ಯ ವಸ್ತುಗಳ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಅವುಗಳನ್ನು ಕೊಂಡೊಯ್ಯುವುದು ಸಾರ್ವಜನಿಕರ ಮೂಲಭೂತ ಹಕ್ಕು. ಆದರೆ, ಮಲ್ಟಿಫ್ಲೆಕ್ಸ್ ಮಾಫಿಯಾ ತಮ್ಮ ಹಗಲು ದರೋಡೆಗೆ ಅಡ್ಡಿಯಾಗುತ್ತೆ ಎಂಬ ಕಾರಣಕ್ಕೆ ಶುಚಿತ್ವದ ನೆಪವೊಡ್ಡಿ ಹೊರಗಿನ ತಿಂಡಿ, ನೀರು ಕೊಂಡೊಯ್ಯಲು ಅವಕಾಶ ನೀಡುತ್ತಿಲ್ಲ. ಹೊರಗೆ ಸಿಗುವ ಆಹಾರ ಹಾಗೂ ಪಾನೀಯಗಳ ಮೇಲೆ ಎರಡು ಹಾಗೂ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. 

ಈ ಲೂಟಿಗೆ ರಾಜ್ಯದಲ್ಲೂ ನಿಷೇಧ ಹೇರಬೇಕು ಎಂಬ ಅಭಿಪ್ರಾಯ ದಟ್ಟವಾಗಿದೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ 120  ನ್‌ಗಳನ್ನುಒಳಗೊಂಡ 80 ಕ್ಕೂ ಹೆಚ್ಚು ಮಲ್ಪಿಪ್ಲೆಕ್ಸ್‌ಗಳಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ದರ ದುಬಾರಿಯಾದರೆ ಉಳಿದ ಚಿತ್ರಮಂದಿರಗಳಲ್ಲಿ ಮೂಲ ಸೌಕರ್ಯ ಕೊರತೆ ಇದೆ. ಹೀಗಾಗಿ ಪ್ರೇಕ್ಷಕರ ಅನಿವಾರ್ಯತೆಯನ್ನೇ ಮಲ್ಟಿಪ್ಲೆಕ್ಸ್‌ಗಳು ಬಂಡವಾಳ ಮಾಡಿಕೊಂಡಿವೆ.

ಮಾಲ್‌ಗಳಿಗೆ ಮುತ್ತಿಗೆ: ಮಹಾರಾಷ್ಟ್ರದ ಮಾದರಿಯಲ್ಲಿ ಮಲ್ಟಿಫ್ಲೆಕ್ಸ್‌ಗಳಿಗೆ ಗ್ರಾಹಕರು ಹೊರಗಿನ ಆಹಾರ ಕೊಂಡೊಯ್ಯಲು ಅವಕಾಶ ಕಲ್ಪಿಸಬೇಕು. ರಾಜ್ಯದಲ್ಲಿ ಮಾತರ ಮಾಲ್, ಮಲ್ಟಿಫ್ಲೆಕ್ಸ್‌ಗಳಲ್ಲಿ ಹಗಲು ದರೋಡೆ ನಡೆಯುತ್ತಿದ್ದರೂ ತಡೆಯುವವರು ಯಾರೂ ಇಲ್ಲ. ಈ ಬಗ್ಗೆ ಸದನದಲ್ಲಿ ಒಬ್ಬನೇ ಒಬ್ಬ ಜನಪ್ರತಿನಿಧಿ ದನಿ ಎತ್ತದಿರುವುದು ದುರದೃಷ್ಟಕರ. ಈ ಮಾಲ್‌ಗಳ ಅನ್ಯಾಯ, ಅಕ್ರಮಗಳ ವಿರುದ್ಧ ಕೆಲವೇ ದಿನಗಳಲ್ಲಿ ಚಳವಳಿ ಆರಂಭಿಸಲಾಗುವುದು. ನಗರದ ಮಾಲ್‌ಗಳಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.

ಏನಿದು ಮಹಾರಾಷ್ಟ್ರ ಮಾದರಿ?: ಮಲ್ಟಿಫ್ಲೆಕ್ಸ್‌ಗಳಿಗೆ ಗ್ರಾಹಕರು ಹೊರಗಿನ ಆಹಾರ ಒಯ್ಯಲು ದೇಶದ ಯಾವುದೇ ಮಲ್ಟಿಪ್ಲೆಕ್ಸ್‌ಗಳಲ್ಲಿ  ಅವಕಾಶವಿಲ್ಲ. ಈ ಬಗ್ಗೆ ಮುಂಬೈ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದು ಹೈಕೋರ್ಟ್ ಹೊರಗಿನ ತಿಂಡಿಗೆ ಅವಕಾಶ ನೀಡುವಂತೆ ಆದೇಶಿಸಿತ್ತು. ಈ ಸಂಬಂಧ ಮಹಾರಾಷ್ಟ್ರ ಸರ್ಕಾರವು ಶುಕ್ರವಾರ ಆದೇಶ ಹೊರಡಿಸಿದ್ದು,
ಯಾವುದೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ತಿಂಡಿ-ಪಾನೀಯ ಮಾರಾಟ ಮಾಡುವಂತಿಲ್ಲ. ಜತೆಗೆ, ಹೊರಗಿನ ತಿಂಡಿಗೆ ನಿಷೇಧ ಹೇರುವಂತಿಲ್ಲ. ಒಂದೊಮ್ಮೆ ನಿಷೇಧ ಹೇರಿದರೆ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. 

ಪ್ರೇಕ್ಷಕನ ಜೇಬಿಗೆ ವಿವಿಧ ರೂಪದಲ್ಲಿ ಕತ್ತರಿ: ಟಿಕೆಟ್ ದುಬಾರಿ ಬೆಲೆ, ಪಾರ್ಕಿಂಗ್ ಶುಲ್ಕ, ಆಹಾರ, ನೀರು ಹಾಗೂ ಕುರುಕುಲು ತಿಂಡಿಗೆ ಎಂಆರ್‌ಪಿಗಿಂತ ದುಪ್ಪಟ್ಟು ಹಣ ಹೀಗೆ ಎಲ್ಲವೂ ದರೋಡೆ. ಪ್ರತಿಯೊಬ್ಬ ವ್ಯಕ್ತಿಗೆ 1 ರಿಂದ 2 ಸಾವಿರ ರು. ಮಾತ್ರ ಮಲ್ಟಿಪ್ಲೆಕ್ಸ್ ಕಡೆ ನೋಡುವ ನೋಡುವ ಪರಿಸ್ಥಿತಿ ಇದೆ.

ಲೀಟರ್ ನೀರಿಗೆ 50, ಟೀ 80, ಕಾಫಿಗೆ 210, ಪಾಪ್‌ಕಾರ್ನ್‌ಗೆ 200ರಿಂದ 600, ಸಮೋಸ ಹಾಗೂ ಪಪ್ಸ್‌ಗೆ 60ರಿಂದ 80 ವಸೂಲಿ ಮಾಡಲಾಗುತ್ತಿದೆ. ಪೆಪ್ಸಿ, ಕೋಕೋಕೊಲಾ ಬೆಲೆ 180 . ಪಾರ್ಕಿಂಗ್ ಶುಲ್ಕ 4 ಗಂಟೆಗೆ 60ರಿಂದ 100, ಒಬ್ಬರ ಊಟಕ್ಕೆ ಕನಿಷ್ಠ 250ರಿಂದ 300 ವೆಚ್ಚವಾಗುತ್ತದೆ.  ಹೊರಗಿನ ದರಕ್ಕಿಂತ ಮೂರು- ನಾಲ್ಕು ಪಟ್ಟು ಬೆಲೆಗೆ ಮಲ್ಪಿಪ್ಲೆಕ್ಸ್‌ಗಳಲ್ಲಿ ದುಬಾರಿ ವ್ಯಾಪಾರ ಮಾಡುವ ಮೂಲಕ ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಡಬ್ಬಿಂಗ್, ಥಿಯೇಟರ್ ಸಮಸ್ಯೆ, ಟಿಕೆಟ್ ಬೆಲೆ, ಜಿಎಸ್‌ಟಿ, ಯುಎಫ್‌ಓ, ಕ್ಯೂಬ್ ವಿಚಾರಗಳಲ್ಲೇ ಮುಳುಗಿರುವ ಚಿತ್ರರಂಗ ಪ್ರೇಕ್ಷಕರ ಜೇಬು ಕತ್ತರಿ ತಪ್ಪಿಸುವ ಬಗ್ಗೆ ಗಮನ ನೀಡುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.

loader