ಬೆಂಗಳೂರಿನ ಐಷಾರಾಮಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಿಢೀರ್ ದಾಳಿ ನಡೆಸಿದೆ. ಇದು ಬೀದಿ ಬದಿಯಿಂದ ಫೈವ್ ಸ್ಟಾರ್‌ವರೆಗೂ ಸ್ವಚ್ಛತೆ ಕಾಪಾಡುವ ಉದ್ದೇಶದ ಕ್ರಮವಾಗಿದ್ದು, ಅನುಮಾನಾಸ್ಪದ ಮಟನ್ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು (ಆ.10): ಬೆಂಗಳೂರಿನ ಐಷಾರಾಮಿ ಫೈವ್ ಸ್ಟಾರ್ (5-Star) ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ (Food Safety Department) ನಡೆಸಿರುವ ದಿಢೀರ್ ದಾಳಿ ರಾಜ್ಯಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು 'ಏಷ್ಯಾನೆಟ್ ಸುವರ್ಣ ನ್ಯೂಸ್' ಜೊತೆಗೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್, 'ನಾವು ಯಾವುದೇ ನಿರ್ದಿಷ್ಟ ಐಷಾರಾಮಿ ಹೋಟೆಲ್‌ಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿಲ್ಲ. ತಳಮಟ್ಟದಿಂದ ಪ್ರತಿಯೊಂದು ಕಡೆಯೂ ಸ್ವಚ್ಛತೆ ಕಾಪಾಡಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.
ಬೀದಿ ಬದಿಯಿಂದ ಫೈವ್ ಸ್ಟಾರ್‌ವರೆಗೂ ಸ್ವಚ್ಛತೆ ಕಡ್ಡಾಯ:
ಆಹಾರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದ ಸಚಿವರು, 'ಬೀದಿ ಬದಿ ಹೋಟೆಲ್ ಇರಲಿ ಅಥವಾ ಪಂಚತಾರಾ ಹೋಟೆಲ್ ಇರಲಿ, ಗ್ರಾಹಕರಿಗೆ ನೀಡುವ ಆಹಾರದಲ್ಲಿ ಸ್ವಚ್ಛತೆ ಇರುವುದು ಕಡ್ಡಾಯ. ಫೈವ್ ಸ್ಟಾರ್ ಹೋಟೆಲ್‌ಗಳ ಸ್ವಚ್ಛತೆ ಬಗ್ಗೆ ನಿರ್ದಿಷ್ಟ ದೂರುಗಳೇನೂ ಬಂದಿರಲಿಲ್ಲ. ಆದರೆ ಸಾರ್ವಜನಿಕರ ಆರೋಗ್ಯ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಈ ಹಠಾತ್ ದಾಳಿಗಳನ್ನು ನಡೆಸಲಾಗಿದೆ' ಎಂದು ತಿಳಿಸಿದರು.
ಖಾಸಗಿ ಹೋಟೆಲ್‌ಗಳ ಮಟನ್ ಸ್ಯಾಂಪಲ್ ಲ್ಯಾಬ್‌ಗೆ ರವಾನೆ:
ದಾಳಿಯ ವೇಳೆ ವಿದೇಶ ಹಾಗೂ ಹೊರರಾಜ್ಯಗಳಿಂದ ಬರುವ ಮಟನ್ (ಆಡಿನ ಮಾಂಸ) ಬಳಕೆ ಕುರಿತು ಅನುಮಾನಗಳು ವ್ಯಕ್ತವಾಗಿವೆ. ಈ ಕುರಿತು ಪ್ರತಿಕ್ರಿಯಿಸಿದ ಖಾದರ್, 'ಹೊರದೇಶದಿಂದ ಪೂರೈಕೆಯಾಗುತ್ತಿರುವ ಮಟನ್ ಗುಣಮಟ್ಟದ ಬಗ್ಗೆ ಅನುಮಾನಗಳಿದ್ದು, ಈಗಾಗಲೇ ಆಹಾರದ ಮಾದರಿಗಳನ್ನು (Food Samples) ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸದ್ಯದಲ್ಲೇ ಲ್ಯಾಬ್ ವರದಿ ಬರಲಿದ್ದು, ವರದಿ ಕೈಸೇರಿದ ತಕ್ಷಣ ತಪ್ಪಿತಸ್ಥ ಹೋಟೆಲ್‌ಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು' ಎಂದು ಎಚ್ಚರಿಸಿದರು.
ಸೆಲೆಬ್ರಿಟಿ ಸಂಸ್ಕೃತಿ ಮತ್ತು ಪೋಷಕರಿಗೆ ಕಿವಿಮಾತು:
ಇದೇ ವೇಳೆ ಪೋಷಕರಿಗೆ ಮುಖ್ಯ ಸಲಹೆ ನೀಡಿದ ಸಚಿವರು, 'ಸೆಲೆಬ್ರಿಟಿಗಳು ಜ್ಯೂಸ್ ಕುಡಿಯುತ್ತಾರೆ ಎಂಬ ಕಾರಣಕ್ಕೆ ನಿಮ್ಮ ಮಕ್ಕಳನ್ನು ಫೈವ್ ಸ್ಟಾರ್ ಹೋಟೆಲ್‌ಗೆ ಕರೆದೊಯ್ದು ಅದೇ ಜ್ಯೂಸ್ ಕುಡಿಸಬೇಡಿ. ಸೆಲೆಬ್ರಿಟಿಗಳು ನಿಜವಾಗಿಯೂ ಜ್ಯೂಸ್ ಕುಡಿಯುವುದಿಲ್ಲ, ಅವರು ಕೇವಲ ಜಾಹೀರಾತಿಗಾಗಿ ಹಾಗೆ ನಟಿಸುತ್ತಾರೆ. ನಿಮ್ಮ ಮತ್ತು ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ನೀವೇ ಕಾಳಜಿ ವಹಿಸಿ' ಎಂದು ಮನವಿ ಮಾಡಿದರು.
ಈ ದಾಳಿಯ ಮೂಲಕ ಎಲ್ಲ ಹೋಟೆಲ್‌ಗಳಿಗೂ ಎಚ್ಚರಿಕೆ ಸಂದೇಶ ರವಾನಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.


