ಹುಬ್ಬಳ್ಳಿ :  ಕಾರ್ಯಕ್ರಮವೊಂದರ ನಂತರ ಉಪ್ಪಿಟ್ಟು ಸೇವಿಸಿದ್ದ ಪೌರಾಡಳಿತ ಸಚಿವ ಸಿ.ಎಸ್‌. ಶಿವಳ್ಳಿ ಸೇರಿದಂತೆ ನಾಲ್ವರು ಅಸ್ವಸ್ಥಗೊಂಡು ಇಲ್ಲಿನ ಕಿಮ್ಸ್‌ಗೆ ದಾಖಲಾದ ಘಟನೆ ಭಾನುವಾರ ರಾತ್ರಿ ನಡೆದಿದೆ. ಚಿಕಿತ್ಸೆ ಬಳಿಕ ಸಚಿವರು ಚೇತರಿಸಿಕೊಂಡಿದ್ದು, ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಸಚಿವರ ರಕ್ತದ ಮಾದರಿ, ಹೊಟ್ಟೆಯಲ್ಲಿನ ಅಂಶವನ್ನು ಪುಣೆ ಹಾಗೂ ಬೆಳಗಾವಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಉಪ್ಪಿಟ್ಟಿನ ಮಾದರಿಯನ್ನು ಆರೋಗ್ಯ ಇಲಾಖೆ ಪರೀಕ್ಷೆಗೊಳಪಡಿಸಿದೆ. ವರದಿ ಬಂದ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದ್ದು, ಪ್ರಸ್ತುತ ಸಚಿವರು ಚೇತರಿಸಿಕೊಂಡಿದ್ದಾರೆ ಎಂದು ಕಿಮ್ಸ್‌ ಪ್ರಭಾರಿ ನಿರ್ದೇಶಕ ಡಾ. ರಾಮಲಿಂಗಪ್ಪ ಹೇಳಿದ್ದಾರೆ.

ಇನ್ನು ಸಚಿವರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವುದು ಸಾಕಷ್ಟುಊಹಾಪೋಹಕ್ಕೆ ಕಾರಣವಾಗಿದ್ದು, ಪೊಲೀಸರು ಕಾರ್ಯಕ್ರಮ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಗಿದ್ದೇನು?:

ಭಾನುವಾರ ರಾತ್ರಿ ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದಲ್ಲಿ ಅಂಬೇಡ್ಕರ್‌ ಭವನ ಉದ್ಘಾಟನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಶಿವಳ್ಳಿ ಚಾಲನೆ ನೀಡಿದ್ದರು. ಬಳಿಕ ಅಲ್ಲಿಯೇ ಸಿದ್ಧಪಡಿಸಿದ್ದ ಉಪ್ಪಿಟ್ಟನ್ನು ಸೇವಿಸಿದ್ದರು. ಸಚಿವರೊಂದಿಗೆ ಅವರ ಆಪ್ತ ಸಹಾಯಕ, ಗನ್‌ಮ್ಯಾನ್‌, ಕಾರ್ಯಕರ್ತರೊಬ್ಬರು ಸೇರಿದಂತೆ 200 ಜನರು ಉಪ್ಪಿಟ್ಟು ಸೇವಿಸಿದ್ದರು.

ಒಂದು ತುತ್ತು ಉಪ್ಪಿಟ್ಟು ತಿನ್ನುತ್ತಿದ್ದಂತೆ ಯಾಕೋ ಸರಿಯಿಲ್ಲ ಎಂದು ಸಚಿವರು ಅಷ್ಟಕ್ಕೇ ಬಿಟ್ಟಿದ್ದಾರೆ. ಆದರೆ ಸಚಿವರ ಜೊತೆಗಿದ್ದ ಆಪ್ತ ಸಹಾಯಕ ಮುತ್ತು ಗೋರೂರು, ಗನ್‌ ಮ್ಯಾನ್‌ ಚನ್ನಪ್ಪ ಮುದ್ದಣ್ಣವರ ಹಾಗೂ ಕಾರ್ಯಕರ್ತ ಶ್ರೀಕಾಂತ ನಾಗರಳ್ಳಿ ಸಹ ಉಪ್ಪಿಟ್ಟು ತಿಂದಿದ್ದಾರೆ. ಕೆಲಹೊತ್ತಿನ ಬಳಿಕ ಸಚಿವರು ಸೇರಿ ಅವರ ಜತೆ ಉಪ್ಪಿಟ್ಟು ತಿಂದಿದ್ದ ಮೂವರಿಗೂ ವಾಂತಿಯಾಗಿದೆ. ನಾಲ್ವರನ್ನು ಕಿಮ್ಸ್‌ಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಸೇರಿದ್ದ ಸುಮಾರು 200 ಜನರು ಉಪ್ಪಿಟ್ಟು ಸೇವಿಸಿದ್ದಾರೆ. ಅವರಾರ‍ಯರಿಗೂ ಆರೋಗ್ಯದಲ್ಲಿ ವ್ಯತ್ಯಯವಾಗಿಲ್ಲ. ಸಚಿವರು ಸೇರಿದಂತೆ ನಾಲ್ವರಿಗೆæ ಮಾತ್ರ ವಾಂತಿಯಾಗಿರುವುದೇಕೆ? ಇವರು ನಾಲ್ಕು ಜನರಿಗೆ ಮಾತ್ರ ಬೇರೆ ಉಪ್ಪಿಟ್ಟು ಸರಬರಾಜು ಮಾಡಲಾಗಿತ್ತೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ.