ಬೆಂಗಳೂರು(ಜ.12): ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವಣ ಏರ್‌ ಇಂಡಿಯಾ ಕಂಪನಿಯ ಮೊದಲ ತಡೆರಹಿತ ನೇರ ವಿಮಾನ ಸೋಮವಾರ ಬೆಂಗಳೂರಿಗೆ ಆಗಮಿಸಿತು.

ಜ.9ರಂದು ರಾತ್ರಿ 8.30ಕ್ಕೆ (ಅಮೆರಿಕ ಕಾಲಮಾನ) ಸ್ಯಾನ್‌ ಫ್ರಾನ್ಸಿಸ್ಕೋದಿಂದ 238 ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ‘ಎಐ 176’ ವಿಮಾನ ಸೋಮವಾರ ಮುಂಜಾನೆ 3 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಲ್ಲಿ ಸುರಕ್ಷಿತವಾಗಿ ಬಂದಿಳಿಯಿತು.

ವಿಶೇಷವೆಂದರೆ, ನಾಲ್ವರು ಪೈಲಟ್‌ಗಳು ಹಾಗೂ 12 ಮಂದಿ ಗಗನಸಖಿಯರು ಸೇರಿದಂತೆ ವಿಮಾನದ ಎಲ್ಲಾ ಸಿಬ್ಬಂದಿ ಮಹಿಳೆಯರಾಗಿದ್ದರು. ಸತತ 16 ಗಂಟೆಗಳ ಕಾಲ ಸುಮಾರು 14 ಸಾವಿರ ಕಿ.ಮೀ. ದೂರ ವಿಮಾನ ಚಲಾಯಿಸುವ ಮೂಲಕ ಈ ತಂಡ ದಾಖಲೆ ಬರೆಯಿತು.

ಅತಿ ದೂರ ಮಾರ್ಗದ ವಿಮಾನ ಚಲಾಯಿಸಿ ಇತಿಹಾಸ ಬರೆದ ಏರ್‌ ಇಂಡಿಯಾ ಪೈಲಟ್‌ಗಳಾದ ಕ್ಯಾಪ್ಟನ್‌ ಜೋಯಾ ಅಗರ್ವಾಲ್‌, ಕ್ಯಾಪ್ಟನ್‌ ಶಿವಾನಿ ಮನ್ಹಾಸ್‌, ಕ್ಯಾಪ್ಟನ್‌ ಪಾಪಗಾರಿ ತನ್ಮಯಿ, ಕ್ಯಾಪ್ಟನ್‌ ಆಕಾಂಕ್ಷಾ ಅವರಿಗೆ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ಸಿಕ್ಕಿತು. ಪ್ರಯಾಣಿಕರು ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿ ಚಪ್ಪಾಳೆ ತಟ್ಟಿತಂಡವನ್ನು ವಿಮಾನ ನಿಲ್ದಾಣಕ್ಕೆ ಬರಮಾಡಿಕೊಂಡಿತು.

ಡಿ.ಜೆ. ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ: ಕ್ಷೇಮ್‌ ಕಮಿಷನ್‌ಗೆ ಸೌಲಭ್ಯ ಒದಗಿಸದ್ದಕ್ಕೆ ಕೋರ್ಟ್ ಬೇಸರ

ಸ್ಯಾನ್‌ ಫ್ರಾನ್ಸಿಸ್ಕೋ-ಬೆಂಗಳೂರು ಮಾರ್ಗವು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ವಿಮಾನ ಕಾರ್ಯಾಚರಣೆ ಮಾಡುವ ಮಾರ್ಗಗಳ ಪೈಕಿ ಅತಿ ಉದ್ದದ ಮಾರ್ಗವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಿಂದ ದಕ್ಷಿಣ ಭಾರತಕ್ಕೆ ತಡೆ ರಹಿತ ನೇರ ವಿಮಾನ ಸಂಪರ್ಕ ಪಡೆದ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.

ಪೈಲಟ್‌ ಖುಷಿ:

ಈ ವಿಮಾನದ ಮೂಲಕ ಬೆಂಗಳೂರು-ಸ್ಯಾನ್‌ಫ್ರಾನ್ಸಿಸ್ಕೋ ನಗರವನ್ನು ನೇರವಾಗಿ ಸಂಪರ್ಕಿಸುವ ಕೆಲಸವಾಗಿದೆ. ಇದೊಂದು ಐತಿಹಾಸಿಕ ಕ್ಷಣ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಇದು ಪ್ರಧಾನಿ ಮೋದಿ ಅವರ ಕನಸಾಗಿತ್ತು. 16 ತಾಸಿನಲ್ಲಿ ಈ ದೂರವನ್ನು ಕ್ರಮಿಸಿದ್ದೇವೆ. ತಡೆ ರಹಿತ ವಿಮಾನ ಎಂಬ ಕಾರಣಕ್ಕೆ ಎಲ್ಲ ಆಸನಗಳು ಭರ್ತಿಯಾಗಿದ್ದವು. ಈ ವಿಮಾನದಲ್ಲಿ ಬಂದ ಪ್ರಯಾಣಿಕರು ಸಂತಸಗೊಂಡಿದ್ದು, ತಮಗೆ ಆತ್ಮೀಯವಾಗಿ ಶುಭಾಶಯ ಕೋರಿದರು ಎಂದು ಮಹಿಳಾ ಪೈಲಟ್‌ ಜೋಯಾ ಅಗರ್ವಾಲ್‌ ಸಂತಸಪಟ್ಟರು.

ಬೆಂಗ್ಳೂರಲ್ಲಿ ಮತ್ತೆ ಜಾಹಿರಾತು ಪ್ರದರ್ಶನಕ್ಕೆ ಅವಕಾಶ?

ಜಗತ್ತಿನ ಎರಡು ಪ್ರಮುಖ ತಂತ್ರಜ್ಞಾನ ನಗರಗಳ ನಡುವೆ ನೇರ ವಿಮಾನ ಸೇವೆ ಆರಂಭವಾಗಿರುವುದು ಮೈಲುಗಲ್ಲಾಗಿದೆ. ಸದರಿ ಮಾರ್ಗ ಅತ್ಯಂತ ಬೇಡಿಕೆ ಇದ್ದು, ಜನ ಹಾಗೂ ಉದ್ಯಮ ಸಂಪರ್ಕಗಳು ಹೆಚ್ಚಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಜಗತ್ತಿನ ಇತರೆ ನಗರಗಳಿಗೆ ನೇರ ವಿಮಾನ ಸೇವೆ ವಿಸ್ತರಿಸಲಾಗುತ್ತದೆ ಎಂದು ಕೆಐಎಎಲ್‌ ಸಿಇಓ ಹರಿ ಮರಾರ್‌ ಹೇಳಿದ್ದಾರೆ.