ನೆರೆ ಸಂತ್ರಸ್ತರ ನೆರವಿಗೆ ಸಮರೋಪಾದಿ ವ್ಯವಸ್ಥೆ: ಡಿಸಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ

ಪ್ರಕೃತಿ ವಿಕೋಪ ವೇಳೆ ರಕ್ಷಣಾ ಕಾರ್ಯಾಚರಣೆ ವ್ಯವಸ್ಥೆಯನ್ನು ಬಲಪಡಿಸಲು ಇನ್ನೂ ಎರಡು ಎಸ್‌ಡಿಆರ್‌ಎಫ್‌ ತಂಡಗಳನ್ನು ರಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಬಸವರಾಜ ಬೊಮ್ಮಾಯಿ 

Flood Victims Assistance System in Karnataka Says CM Basavaraj Bommai grg

ಬೆಂಗಳೂರು(ಆ.07):  ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಕೃತಿ ವಿಕೋಪ ವೇಳೆ ರಕ್ಷಣಾ ಕಾರ್ಯಾಚರಣೆ ವ್ಯವಸ್ಥೆಯನ್ನು ಬಲಪಡಿಸಲು ಇನ್ನೂ ಎರಡು ಎಸ್‌ಡಿಆರ್‌ಎಫ್‌ ತಂಡಗಳನ್ನು ರಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದೇ ವೇಳೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು 21 ಜಿಲ್ಲೆಗಳಿಗೆ 200 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಿದ್ದು, ಪರಿಹಾರ ಕಾರ್ಯಕ್ರಮಗಳನ್ನು ತ್ವರಿತವಾಗಿ ನಡೆಸುವಂತೆ ತಾಕೀತು ಮಾಡಿದ್ದಾರೆ.

ಕೋವಿಡ್‌ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ತಮ್ಮ ಆರ್‌.ಟಿ.ನಗರ ನಿವಾಸದಿಂದ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದರು. ರಾಜ್ಯದ ವಿವಿಧ ಜಿಲ್ಲೆಯಲ್ಲಿನ ಪ್ರವಾಹ ಪರಿಸ್ಥಿತಿ, ಭೂ ಕುಸಿತ, ಬೆಳೆಹಾನಿ ಸೇರಿದಂತೆ ಇತರೆ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಸಿಎಂ ಬಸವರಾಜ ಬೊಮ್ಮಾಯಿಗೆ ಕೋವಿಡ್ ದೃಢ, ದೆಹಲಿ ಪ್ರವಾಸ ರದ್ದು!

2 ಹೆಚ್ಚುವರಿ ತಂಡ:

ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡಗಳ ನಿಯೋಜಿಸಿದೆ. ಪ್ರವಾಹ ಪರಿಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಎರಡು ತಂಡಗಳನ್ನು ರಚಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ತಂಡಗಳ ಜತೆ ನಿಕಟ ಸಂಪರ್ಕವನ್ನು ಹೊಂದಿ, ತುರ್ತು ಸಂದರ್ಭದಲ್ಲಿ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸನ್ನದ್ಧರಾಗಿರಬೇಕು ಎಂದು ಸೂಚಿಸಿದರು.

200 ಕೋಟಿ ರು. ಬಿಡುಗಡೆ:

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. 21 ಜಿಲ್ಲೆಗಳಿಗೆ 200 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಜೀವಹಾನಿ, ಮನೆ ಹಾನಿ ಪ್ರಕರಣಗಳಲ್ಲಿ ತ್ವರಿತವಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು. ಅತಿವೃಷ್ಟಿಯಿಂದ ಹಾನಿಗೊಳಗಾಗಿ ಸಂಪರ್ಕ ಕಡಿತವಾಗುವ ರಸ್ತೆ, ಸೇತುವೆಗಳ ದುರಸ್ತಿಯನ್ನು ತಕ್ಷಣ ಕೈಗೊಂಡು, ಸಂಪರ್ಕ ಮರುಸ್ಥಾಪಿಸಬೇಕು. ಅಂತೆಯೇ ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾಮ್‌ರ್‍ಗಳ ಹಾನಿ ಕುರಿತು ಸಹ ಜಾಗೃತರಾಗಿ ವಿದ್ಯುತ್‌ ಸಂಪರ್ಕ ತ್ವರಿತವಾಗಿ ಮರುಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಎಸ್ಕಾಂಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚುವರಿ ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮರುಗಳ ದಾಸ್ತಾನು ಖಾತರಿಪಡಿಸಬೇಕು. ಬೆಳೆಹಾನಿ ಜಂಟಿ ಸಮೀಕ್ಷೆಯನ್ನು ತ್ವರಿತವಾಗಿ ನಡೆಸಿ, ಬೆಳೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಹಾನಿ ಸಮೀಕ್ಷೆ ವಾಸ್ತವಿಕವಾಗಿರಬೇಕು ಎಂದು ಸೂಚನೆ ನೀಡಿದ ಅವರು, ಗದಗ ಜಿಲ್ಲೆಯ ಬೆಣ್ಣಿಹಳ್ಳ, ಹಾವೇರಿ ಜಿಲ್ಲೆಯ ವರದಾ ನದಿ ಮತ್ತು ಇತರ ಕೆಲವು ಪ್ರದೇಶಗಳಲ್ಲಿ ದಿಢೀರ್‌ ಪ್ರವಾಹ ಉಂಟಾಗುವ ಸ್ಥಳಗಳಲ್ಲಿ ಸೂಕ್ತ ಮುನ್ನಚ್ಚರಿಕೆ ವಹಿಸಬೇಕು. ಅಣೆಕಟ್ಟುಗಳಿಂದ ನೀರು ಬಿಡುಗಡೆ ಮಾಡುವಾಗ ಅಣೆಕಟ್ಟುಗಳ ಕೆಳಭಾಗದ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಬೇಕು. ರಾಜ್ಯದ ಹಲವಾರು ಕೆರೆಗಳು ತುಂಬಿವೆ. ಅಪಾಯದ ಅಂಚಿನ ಕೆರೆಗಳು ಒಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಣ್ಣಿನ ಕುಸಿತ, ಭೂಕುಸಿತದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಜನರನ್ನು ಕಡ್ಡಾಯವಾಗಿ ಸ್ಥಳಾಂತರಿಸಬೇಕು. ರಸ್ತೆಗಳ ಮೇಲೆ ಭೂ ಕುಸಿತ ಉಂಟಾದರೆ ತೆರವುಗೊಳಿಸಲು ತಂಡಗಳನ್ನು ದಿನದ 24 ಗಂಟೆಯೂ ಸನ್ನದ್ಧವಾಗಿರಬೇಕು. ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಉತ್ತಮ ಆಹಾರ ಒದಗಿಸಬೇಕು. ಕಾಳಜಿ ಕೇಂದ್ರಕ್ಕೆ ಬರಲು ಸಾಧ್ಯವಾಗದ ನಿರಾಶ್ರಿತರಿಗೆ ಡ್ರೈ ರೇಷನ್‌ ಕಿಟ್‌ ಒದಗಿಸಬೇಕು ಎಂದು ತಿಳಿಸಿದರು.

ಕೊಡಗು- ಮಡಿಕೇರಿಯಲ್ಲಿ ಕಂಡು ಕೇಳರಿಯದ ಮೇಘಸ್ಪೋಟ, ಭೂಕುಸಿತ ಕಂಟಕ

ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸಪೂಜಾರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಕ್ರೀಡಾ ಸಚಿವ ನಾರಾಯಣಗೌಡ, ಅಬಕಾರಿ ಸಚಿವ ಗೋಪಾಲಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಇತರರು ಉಪಸ್ಥಿತರಿದ್ದರು.

ಭಾರಿ ಮಳೆ ಹಾನಿ
(ಜೂ.1ರಿಂದ ಆ.6ರವರೆಗೆ)

ಮಾನವ ಜೀವ ಹಾನಿ 70
ಜಾನುವಾರು ಜೀವಹಾನಿ 507
ಸಂಪೂರ್ಣ ಮನೆ ಹಾನಿ 3559
ಭಾಗಶಃ ಮನೆ ಹಾನಿ 17,212
ಕೃಷಿ ಬೆಳೆ ಹಾನಿ 129087 ಹೆಕ್ಟೇರ್‌
ತೋಟಗಾರಿಕಾ ಬೆಳೆ ಹಾನಿ 7942 ಹೆಕ್ಟೇರ್‌
ರಸ್ತೆ ಹಾನಿ 3162 ಕಿ.ಮೀ
ಗ್ರಾಮೀಣ ರಸ್ತೆ 8445 ಕಿ.ಮೀ.
ಸೇತುವೆ ಮತ್ತು ಕಲ್ವರ್ಚ್‌ 1068
ಶಾಲೆಗಳು 4531
ಅಂಗನವಾಡಿಗಳು 222
ಹಾಳಾಗಿರುವ ವಿದ್ಯುತ್‌ ಕಂಬಗಳ ಸಂಖ್ಯೆ 16760
ಟ್ರಾನ್ಸ್‌ಫಾರ್ಮರ್‌ಗಳು 1469
ಹಾನಿಯಾಗಿರುವ ವೈರ್‌ 409 ಕಿ.ಮೀ
ಸಣ್ಣ ನೀರಾವರಿ ಕೆರೆಗಳು 93

ಕಾಳಜಿ ಕೇಂದ್ರಕ್ಕೆ ಬರದವರಿಗೆ ಡ್ರೈ ರೇಷನ್‌ ಕಿಟ್‌ ವಿತರಣೆ

ಕೋವಿಡ್‌ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ಮನೆಯಿಂದಲೇ ಜಿಲ್ಲಾಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಸಿದರು.
 

Latest Videos
Follow Us:
Download App:
  • android
  • ios