ಬೆಂಗಳೂರು (ನ.10):  ರಾಜ್ಯದಲ್ಲಿ ಕಳೆದ ಆಗಸ್ಟ್‌ನಿಂದ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ಬರೋಬ್ಬರಿ 25 ಸಾವಿರ ಕೋಟಿ ರು. ನಷ್ಟಉಂಟಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ.

ಮೂರು ಹಂತಗಳಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಿರುವ ರಾಜ್ಯ ಸರ್ಕಾರವು 20.86 ಲಕ್ಷ ಹೆಕ್ಟೇರ್‌ ಬೆಳೆ ನಾಶ ಉಂಟಾಗಿದೆ. ಬೆಳೆ, ಮನೆಗಳ ಹಾನಿ, ಮೂಲಸೌಕರ್ಯಗಳಿಗೆ ಉಂಟಾದ ಹಾನಿ ಸೇರಿ 24,941.73 ಕೋಟಿ ರು. ನಷ್ಟಉಂಟಾಗಿದೆ ಎಂದು ವರದಿ ನೀಡಲಾಗಿದೆ. ಎಸ್‌ಡಿಆರ್‌ಎಫ್‌ ಮಾರ್ಗಸೂಚಿ (ರಾಜ್ಯ ವಿಪತ್ತು ಪರಿಹಾರ ನಿಧಿ) ಪ್ರಕಾರ 2,384.89 ಕೋಟಿ ರು. ಪರಿಹಾರ ಒದಗಿಸಬೇಕಾಗುತ್ತದೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

'ಬಿಎಸ್‌ವೈಗೆ ಧೈರ್ಯವಿದ್ದರೆ ಮೋದಿ ಬಳಿ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲಿ' ..

ರಾಜ್ಯ ಸರ್ಕಾರವು ಮೂರು ಹಂತಗಳಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಆಗಸ್ಟ್‌ 1 ರಿಂದ ಸೆಪ್ಟೆಂಬರ್‌ 15 ರವರೆಗೆ 9,440.85 ಕೋಟಿ ರು., ಸೆಪ್ಟೆಂಬರ್‌ 16ರಿಂದ ಸೆಪ್ಟೆಂಬರ್‌ 30ರವರೆಗೆ 5,667.84 ಕೋಟಿ ರು., ಅಕ್ಟೋಬರ್‌ನಲ್ಲಿ ಸಲ್ಲಿಸಿರುವ ಮನವಿಯಲ್ಲಿ 9,833.04 ಕೋಟಿ ರು. ನಷ್ಟಉಂಟಾಗಿರುವುದಾಗಿ ಮಾಹಿತಿ ನೀಡಲಾಗಿದೆ. ಮೂರು ವರದಿಗಳ ಕ್ರೂಢೀಕೃತ ಅಂತಿಮ ವರದಿಯನ್ನು ನವೆಂಬರ್‌ 3 ರಂದು ಸಲ್ಲಿಸಿದ್ದು 24,941.73 ಕೋಟಿ ರು. ನಷ್ಟಉಂಟಾಗಿದೆ ಎಂದು ತಿಳಿಸಲಾಗಿದೆ.

ಈ ಪೈಕಿ 18.05 ಲಕ್ಷ ಹೆಕ್ಟೇರ್‌ ಬೆಳೆ ನಾಶ (14,714 ಕೋಟಿ ರು. ಅಂದಾಜು ಮೌಲ್ಯ), 1.99 ಲಕ್ಷ ಹೆಕ್ಟೇರ್‌ ತೋಟಗಾರಿಕೆ ಬೆಳೆ (2,432 ಕೋಟಿ ರು.), 55,808 ಹೆಕ್ಟೇರ್‌ ಮರ ಆಧಾರಿತ ಬೆಳೆ (6,465 ಕೋಟಿ ರು.) ಹಾನಿಯಾಗಿದೆ. ಇನ್ನು 48,424 ಮನೆಗಳಿಗೆ ಹಾನಿಯಾಗಿದ್ದು ಅಂದಾಜು 466.2 ಕೋಟಿ ರು. ಆಸ್ತಿ ನಷ್ಟಉಂಟಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

37,806 ಕಿ.ಮೀ. ರಸ್ತೆ ಹಾನಿ:  ಇನ್ನು 4,549 ಕೋಟಿ ರು. ಅಂದಾಜಿನ 37,806 ಕಿ.ಮೀ. ರಸ್ತೆ, 4,084 ಸೇತುವೆಗಳು (760 ಕೋಟಿ ರು.,), ಸರ್ಕಾರಿ ಕಟ್ಟಡ, ನೀರಾವರಿ ಯೋಜನೆಗಳು ಸೇರಿದಂತೆ 6,182 ಕೋಟಿ ರು. ಅಂದಾಜು ಮೊತ್ತದಷ್ಟುಮೂಲಭೂತ ಸೌಕರ್ಯಗಳಿಗೆ ಹಾನಿ ಉಂಟಾಗಿದೆ ಎಂದು ಹೇಳಲಾಗಿದೆ.

ಕಳೆದ ಬಾರಿ 25,518 ಕೋಟಿ ರು. ನಷ್ಟಉಂಟಾಗಿದ್ದು ಎಸ್‌ಡಿಆರ್‌ಎಫ್‌ ಅಡಿ 3243.78 ಕೋಟಿ ರು. ನಷ್ಟಉಂಟಾಗಿದೆ ಎಂದು 2019ರಲ್ಲಿ ವರದಿ ನೀಡಿತ್ತು.