ಬೆಂಗಳೂರು(ಅ.30): ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ನೆರೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸೂಕ್ತ ಪರಿಹಾರಕ್ಕಾಗಿ ಕೇಂದ್ರವನ್ನು ಒತ್ತಾಯಿಸಬೇಕು. ನಿಮಗೆ (ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ) ಧೈರ್ಯವಿಲ್ಲದಿದ್ದರೆ ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಿ ಹಣ ಬಿಡುಗಡೆಗೆ ನಾವು ಒತ್ತಾಯಿಸುತ್ತೇವೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

"

ಗುರುವಾರ ನೆರೆ ಹಾನಿ ಬಗ್ಗೆ ಬಿ.ಎಸ್‌.ಯಡಿಯೂರಪ್ಪ ಅವರಿಗೆ ವಿವರವಾದ ಪತ್ರ ಬರೆದಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದಾಗಿರುವ ಹಾನಿ ಬಗ್ಗೆ ಚರ್ಚಿಸಲು ತಕ್ಷಣ ವಿಧಾನ ಮಂಡಲದ ಅಧಿವೇಶನ ಕರೆಯಬೇಕು. ಶಾಸಕರಿಗೆ ತಮ್ಮ ಕ್ಷೇತ್ರದಲ್ಲಿ ಉಂಟಾಗಿರುವ ಹಾನಿ ಬಗ್ಗೆ ಹೇಳಿಕೊಳ್ಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಬೀದರ್‌, ಕಲಬುರಗಿ, ಯಾದಗಿರಿ ಜಿಲ್ಲೆಗಳ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕಣ್ಣಾರೆ ಅಲ್ಲಿನ ಸಂತ್ರಸ್ತರ ಕಷ್ಟನೋಡಿದ್ದೇನೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.30ಕ್ಕಿಂತ ಅಧಿಕ ಬಿತ್ತನೆಯಾಗಿದ್ದು, ಹೆಚ್ಚು ಬೆಳೆ ನಾಶವಾಗಿದೆ. ಕಳೆದ ವರ್ಷ ಬಿದ್ದಿದ್ದ ಒಂದು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಈವರೆಗೂ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರಕ್ಕೆ 2.47 ಲಕ್ಷ ಮನೆಗಳಿಗೆ ಹಾನಿಯಾಗಿದೆ ಎಂದು ಮನವಿ ಸಲ್ಲಿಸಲಾಗಿದೆ. ಆದರೆ, 1.24 ಲಕ್ಷ ಮನೆಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ. ಪೂರ್ಣ ಹಾನಿಯಾದ ಮನೆಗಳಿಗೆ 5 ಲಕ್ಷ ರು. ಬದಲು ಕೇವಲ ಒಂದು ಲಕ್ಷ ರು. ನೀಡಲಾಗಿದೆ ಎಂದು ದೂರಿದ್ದಾರೆ.

ನಿದ್ದೆಗಣ್ಣಿನಲ್ಲಿರುವ ರೈತ ವಿರೋಧಿ ಸರ್ಕಾರದ ಕಣ್ಣು ತೆರೆಸಬೇಕಾಗಿದೆ: ಸಿದ್ದರಾಮಯ್ಯ

ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಬೆಳೆದ ಬಹುಪಾಲು ಬೆಳೆಗಳು ಹಾನಿಗೊಳಗಾಗಿವೆ. ಹೀಗಿದ್ದರೂ ಜಿಲ್ಲಾಡಳಿತ ಸಂಪೂರ್ಣವಾಗಿ ಸಮೀಕ್ಷೆಯನ್ನೇ ಮಾಡಿಲ್ಲ. ಸರ್ಕಾರದ ಸಚಿವರುಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಂಪೂರ್ಣ ನಿರ್ಲಕ್ಷಿಸಿದ ಮೇಲೆ ತಹಶೀಲ್ದಾರ್‌, ಡಿ.ಸಿ.ಗಳು ಎಷ್ಟರ ಮಟ್ಟಿಗೆ ಜನರ ಜೊತೆ ನಿಲ್ಲಲು ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸೆಪ್ಟೆಂಬರ್‌ ಅಂತ್ಯದವರೆಗೆ 11 ಲಕ್ಷ ಹೆಕ್ಟೇರ್‌ಗಳಲ್ಲಿ ಬೆಳೆದ ಕೃಷಿ ಹಾಗೂ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಈಗ ಅಕ್ಟೋಬರ್‌ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಮುಕ್ಕಾಲು ರಾಜ್ಯವೇ ಕಂಗೆಟ್ಟು ಕೂತಿದೆ. ಬೀದರ್‌ನಲ್ಲಿ ಬಿತ್ತನೆಯಾಗಿದ್ದ 3,70,982 ಹೆಕ್ಟೇರ್‌ಗಳಲ್ಲಿ 2,47,209 ಹೆಕ್ಟೇರ್‌, ಕಲ್ಬುರ್ಗಿಯಲ್ಲಿ 3,44,085 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ವಿಜಯಪುರದಲ್ಲಿ ಒಟ್ಟು 1,72,668 ಹೆಕ್ಟೇರ್‌ ನಾಶವಾಗಿದೆ ಎಂದು ಪ್ರಾಥಮಿಕ ಸಮೀಕ್ಷೆಗಳು ಹೇಳುತ್ತಿವೆ. ಇನ್ನು ಕಲಬುರಗಿ ಜಿಲ್ಲಾಧಿಕಾರಿ ಸಮೀಕ್ಷೆ ಪ್ರಕಾರ ಅಲ್ಲಿ 20 ಸಾವಿರ ಮನೆಗಳಿಗೆ ಹಾನಿಯಾಗಿದೆ. ರಾಯಚೂರಿನಲ್ಲಿ 3 ದಿನಗಳ ಮಳೆಗೆ ಸುಮಾರು 80,000 ಹೆಕ್ಟೇರ್‌, ಯಾದಗಿರಿಯಲ್ಲಿ 50,000 ಹೆಕ್ಟೇರ್‌, ಕೊಪ್ಪಳ 8,000 ಹೆಕ್ಟೇರ್‌, ಬಳ್ಳಾರಿಯಲ್ಲೂ ಸಾವಿರಾರು ಹೆಕ್ಟೇರ್‌ ಬೆಳೆ ನಾಶವಾಗಿದೆ.