ಬೆಂಗಳೂರು(ಆ.17): ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಎರಡು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ, ಮಲಪ್ರಭಾ ಸೇರಿ ಹಲವು ನದಿ ತೀರಗಳ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ. ಮಹಾರಾಷ್ಟ್ರದಿಂದಲೂ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಆಲಮಟ್ಟಿಮತ್ತು ನಾರಾಯಣಪುರ ಡ್ಯಾಂನಿಂದ 2 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ಮಲಪ್ರಭಾ ನದಿ ಅಪಾಯಮಟ್ಟಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ 50ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಈ ಮಧ್ಯೆ, ಗದಗ ಜಿಲ್ಲೆಯಲ್ಲೂ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ರೋಣ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳ ಜನರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ.

ಕೆಆರ್‌ಎಸ್‌ ಜಲಾಶಯ ಸಂಪೂರ್ಣ ಭರ್ತಿ

ಮಹಾರಾಷ್ಟ್ರ ಹಾಗೂ ಪಶ್ಚಿಮ ಘಟ್ಟಪ್ರದೇಶದಲ್ಲಿರುವ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಕೃಷ್ಣಾ ನದಿಗೆ 1 ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಆಲಮಟ್ಟಿಅಣೆಕಟ್ಟೆಯಿಂದ 2 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದ್ದು, ಇಷ್ಟೇ ಪ್ರಮಾಣದ ನೀರು ನಾರಾಯಣಪುರ ಡ್ಯಾಂನಿಂದಲೂ ಹೊರಬಿಡಲಾಗುತ್ತಿದೆ. ಇದರಿಂದ ಬೆಳಗಾವಿ, ರಾಯಚೂರು, ಯಾದಗಿರಿಯ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿ ತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.

ಬೆಳಗಾವಿ ಹಾಗೂ ಬಾಗಲಕೋಟೆಯಲ್ಲಿ ನದಿಗಳ ನೀರಿನ ಮಟ್ಟಹೆಚ್ಚಳದಿಂದಾಗಿ 20ಕ್ಕೂ ಅಧಿಕ ಸೇತುವೆಗಳು ಮುಳುಗಡೆಯಾಗಿದ್ದು, ನಾಲ್ಕಕ್ಕೂ ಅಧಿಕ ಮಂದಿರಗಳು ಮುಳುಗಡೆಯಾಗಿವೆ. ಸಾವಿರಾರು ಹೆಕ್ಟೇರ್‌ ಬೆಳೆ ನಾಶವಾಗಿದೆ. ಮಾತ್ರವಲ್ಲ, ಕಣಕುಂಬಿ ಮತ್ತು ಜಾಂಬೋಟಿ ಅರಣ್ಯದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಅಪಾಯಮಟ್ಟತಲುಪಿದೆ. ಭೀಮಗಡ ಮತ್ತು ಕಣಕುಂಬಿ ಅರಣ್ಯದ 50ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ. ಕೃಷ್ಣಾ ನದಿ ಮಟ್ಟಹೆಚ್ಚಳದಿಂದಾಗಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮತ್ತೆ ಮುಳುಗಡೆಯಾಗಿದ್ದು, 3 ನಡುಗಡ್ಡೆ ಗ್ರಾಮಗಳು ಮತ್ತು 3 ನದಿ ದ್ವೀಪಗಳ ಸಂಪರ್ಕ ಕಡಿತಗೊಂಡಿದೆ. ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಮುಳುಗುವ ಹಂತಕ್ಕೆ ತಲುಪಿದೆ.

ಅಸ್ಸಾಂ, ಬಿಹಾರ್‌ ನೆರೆ ಪರಿಹಾರಕ್ಕೆ ಅಕ್ಷಯ್ ಕುಮಾರ್ ತಲಾ 1 ಕೋಟಿ ನೆರವು

ಗದಗದಲ್ಲಿ ಪ್ರವಾಹಾತಂಕ-ಧಾರವಾಡ ಜಿಲ್ಲೆಯಾದ್ಯಂತ ಶನಿವಾರ ರಾತ್ರಿಯಿಂದಲೇ ಭಾರೀ ಮಳೆಯಾಗುತ್ತಿದ್ದು, ನವಿಲುತೀರ್ಥ ಡ್ಯಾಂನಿಂದ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಬೆಣ್ಣಿಹಳ್ಳ, ತುಪ್ಪರಿಹಳ್ಳ ಸೇರಿ ಹಲವು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕಿನ 20ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮತ್ತೆ ನೀರು ನುಗ್ಗುವ ಸಾಧ್ಯತೆ ಇದ್ದು, ತಗ್ಗುಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗುತ್ತಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಳೆ ಇಳಿಮುಖವಾಗಿದ್ದು, ಉತ್ತರ ಕನ್ನಡದಲ್ಲಿ ಮಾತ್ರ ಭಾರೀ ಮಳೆಯಾಗಿದೆ. ಭಟ್ಕಳದಲ್ಲಿ ಮಧ್ಯಾಹ್ನ 2 ಗಂಟೆ ವರೆಗೂ ನಿರಂತರವಾಗಿ ಮಳೆ ಸುರಿದಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 2 ಗಂಟೆ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಇನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಉಳಿದಂತೆ ಹಾವೇರಿ, ದಾವಣಗೆರೆ, ಹಾವೇರಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗಿದೆ.