Asianet Suvarna News Asianet Suvarna News

ಮಳೆ ತಗ್ಗಿದರೂ ಉತ್ತರ ಕರ್ನಾಟಕದಲ್ಲಿ ಪ್ರವಾಹ ಆತಂಕ..!

* ರಾಜ್ಯದ ಬಹುತೇಕ ಭಾಗದಲ್ಲಿ ಕಡಿಮೆಯಾದ ಮಳೆ
* ಮಹಾರಾಷ್ಟ್ರದಿಂದ ಬರುತ್ತಿದೆ ಭಾರಿ ನೀರು
* ಹೊಲ- ಗದ್ದೆಗೆ ನೀರು ನುಗ್ಗಿ ಅಪಾರ ಬೆಳೆ ನಷ್ಟ
 

Flood in North Karnataka due to heavy Rain in Maharashtra grg
Author
Bengaluru, First Published Jun 21, 2021, 7:09 AM IST

ಬೆಂಗಳೂರು(ಜೂ.21): ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮುಂಗಾರು ಮಳೆ ಅಬ್ಬರ ಭಾನುವಾರದಂದು ಬಹುತೇಕ ಇಳಿಮುಖವಾಗಿದೆ. ಆದರೆ ಮಹಾರಾಷ್ಟ್ರದ ಘಟ್ಟಪ್ರದೇಶ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕಳೆದ ನಾಲ್ಕೈದು ದಿನಗಳು ಸುರಿದ ನಿರಂತರ ಮಳೆಯಿಂದಾಗಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ನದಿ ತೀರದ 16 ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.

ಶನಿವಾರ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಒಟ್ಟು 21 ಸೇತುವೆಗಳು ಮುಳುಗಿ 45ಕ್ಕೂ ಅಧಿಕ ಗ್ರಾಮಗಳ ಜನರಿಗೆ ನೇರ ಸಂಪರ್ಕಕ್ಕೆ ಸಮಸ್ಯೆಯಾಗಿತ್ತು. ಇದೀಗ ಮಳೆ ಅಬ್ಬರ ತಗ್ಗಿದ್ದರೂ ನದಿಗೆ ನೀರು ಹರಿದುಬರುತ್ತಿರುವುದರಿಂದ ಮುಳುಗಿರುವ ಸೇತುವೆಗಳು ಇನ್ನೂ ಮುಕ್ತಗೊಂಡಿಲ್ಲ. ಇನ್ನು ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಜಲಾಶಯಕ್ಕೆ 1.40 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಹೀಗಾಗಿ ಜಲಾಶಯದಿಂದ ಅಷ್ಟೇ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್‌ ತುಂಬಿ ಹರಿಯುತ್ತಿದೆ.

ಹಿಡಕಲ್‌ ಜಲಾಶಯದಿಂದ ಘಟಪ್ರಭಾ ನದಿಗೆ 30 ಸಾವಿರ ಕ್ಯುಸೆಕ್‌ ನೀರನ್ನು ಭಾನುವಾರ ಬೆಳಗ್ಗೆ ಬಿಡುಗಡೆ ಮಾಡಿದ್ದು ಮುಧೋಳ ತಾಲೂಕಿನ ಹಲವು ಸೇತುವೆಗಳು ಹಾಗೂ ರಸ್ತೆಗಳು ಜಲಾವೃತವಾಗಿವೆ. ತಾಲೂಕಿನ ನದಿ ತೀರದ ಗ್ರಾಮಗಳಿಗೂ ಪ್ರವಾಹ ಭೀತಿ ಎದುರಾಗಿದೆ. ಜೊತೆಗೆ ಹೊಲಗಳಿಗೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಕಬ್ಬು ಹಾನಿಗೀಡಾಗುತ್ತಿದೆ.

ಮಹಾರಾಷ್ಟ್ರ, ಬೆಳಗಾವಿಯಲ್ಲಿ ಭಾರೀ ಮಳೆ, ತೀರ ಪ್ರದೇಶಗಳಲ್ಲಿ ಪ್ರವಾಹಾತಂಕ

ಉತ್ತರ ಕನ್ನಡದಲ್ಲಿ ಭೂಕುಸಿತ:

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಜೋಯಿಡಾ ಮತ್ತು ಯಲ್ಲಾಪುರ ಹೊರತುಪಡಿಸಿ ಬಹುತೇಕ ಕಡೆಗಳಲ್ಲಿ ಮಳೆ ಕಡಿಮೆಯಾಗಿದೆ. ಸಿದ್ದಾಪುರ ತಾಲೂಕಿನಲ್ಲಿ ಬೀಳುತ್ತಿರುವ ಭರ್ಜರಿ ಮಳೆಯಾಗುತ್ತಿದ್ದು, ಬೇಡ್ಕಣಿ ಗ್ರಾಪಂ ವ್ಯಾಪ್ತಿಯ ಮದ್ದಿನಕೇರಿಯಲ್ಲಿ ಎರಡು ವರ್ಷಗಳ ಹಿಂದೆ ಭೂಕುಸಿತವಾದ ಪ್ರದೇಶದಲ್ಲೇ ಮತ್ತೆ ಭೂಕುಸಿತವುಂಟಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೃಂಗೇರಿ ತಾಲೂಕಿನಲ್ಲಿ ಮಾತ್ರ ಮಳೆ ಮುಂದುವರೆದಿದ್ದು ಉಳಿದೆಡೆ ಬೇಸಿಗೆ ಬಿಸಿಲಿನ ವಾತಾವರಣವಿದೆ. ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ಕೊಡಗು, ಹಾಸನ ಜಿಲ್ಲೆಯ ಹಲವೆಡೆ ಭಾನುವಾರ ತುಂತುರು ಮಳೆಯಾಗಿದೆ.

ತುಂಗಭದ್ರಾ ಡ್ಯಾಂಗೆ ಒಂದೇ ದಿನದಲ್ಲಿ 4 ಟಿಎಂಸಿ ನೀರು

ಹೊಸಪೇಟೆ: ರಾಜ್ಯದ ಮಲೆನಾಡು ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನ ನಿರಂತರ ಮಳೆಯಾದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ ಒಳ ಹರಿವು ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ದಿನದ ಅಂತರದಲ್ಲಿ 4 ಟಿಎಂಸಿ ನೀರು ಜಲಾಶಯದ ಒಡಲು ಸೇರಿದೆ. ಜಲಾಶಯದ ಒಳಹರಿವು 42,748 ಕ್ಯುಸೆಕ್‌, ಹೊರ ಹರಿವು 242 ಕ್ಯುಸೆಕ್‌ನಷ್ಟಿದೆ. 16.110 ಟಿಎಂಸಿಯಷ್ಟುನೀರು ಸಂಗ್ರಹವಾಗಿದೆ. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ ಕೊಡಸಳ್ಳಿ, ಕದ್ರಾ, ಹಾಸನದ ಯಗಚಿ ಜಲಾಶಗಳಿಂದ ಹೆಚ್ಚುವರಿ ನೀರು ಹೊರಬಿಡಲಾಗಿದೆ.

ಗುಡ್ಡ ಕುಸಿತ: ಕಾರ್ಮಿಕನ ರಕ್ಷಣೆ

ಮಂಗಳೂರು: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಸಡಿಲಗೊಂಡಿದ್ದ ಗುಡ್ಡವೊಂದು ತಡೆಗೋಡೆ ನಿರ್ಮಾಣ ವೇಳೆ ಕುಸಿದ ಘಟನೆ ನಗರದ ಹೊರವಲಯದ ಕುಪ್ಪೆಪದವು ನೋಣಾಲ್‌ ಎಂಬಲ್ಲಿ ಭಾನುವಾರ ಸಂಭವಿಸಿದ್ದು ಇದರಡಿ ಸಿಲುಕಿದ ಕಾರ್ಮಿಕನನ್ನು ರಕ್ಷಿಸಲಾಗಿದೆ. ಕುಪ್ಪೆಪದವು ಅರಳ ನಿವಾಸಿ ರಾಜೇಶ್‌ (28) ಪ್ರಾಣಾಪಾಯದಿಂದ ಪಾರಾದವರು. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸುವ ಮೊದಲೇ ಕಾರ್ಮಿಕನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸಣ್ಣಪುಟ್ಟ ಗಾಯಗೊಂಡ ರಾಜೇಶ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
 

Follow Us:
Download App:
  • android
  • ios