ಜೂನ್ 1 ರಿಂದ ಜುಲೈ 31 ರವರೆಗೆ ಮೀನುಗಾರಿಕೆ ನಿಷೇಧ ಜಾರಿಯಲ್ಲಿದ್ದು, ಮೀನುಗಾರರು ತಮ್ಮ ಬೋಟ್‌ಗಳಿಗೆ ಲಂಗರು ಹಾಕಿದ್ದಾರೆ. ಮೀನು ಮೊಟ್ಟೆ ಇಡುವ ಸಮಯವಾಗಿರುವುದರಿಂದ ಈ ನಿಷೇಧ ಹೇರಲಾಗಿದ್ದು, ಸಾಂಪ್ರದಾಯಿಕ ಬೋಟ್‌ಗಳನ್ನು ಹೊರತುಪಡಿಸಿ ಟ್ರಾಲ್ ಮತ್ತು ಪರ್ಸೀನ್ ಬೋಟ್‌ಗಳಿಗೆ ನಿಷೇಧ ಅನ್ವಯಿಸುತ್ತದೆ.

ಉತ್ತರ ಕನ್ನಡ (ಮೇ.31) ಪ್ರತೀ ದಿನ ಆಳ ಸಮುದ್ರಕ್ಕೆ ಇಳಿದು ಮತ್ಸ್ಯ ಶಿಕಾರಿ ಮಾಡುತ್ತಿದ್ದ ಕಡಲ ಮಕ್ಕಳಿಗೆ ಇನ್ನು ಎರಡು ತಿಂಗಳು ವನವಾಸ ಪ್ರಾರಂಭ. ಪ್ರತೀ ದಿನ ಆಳ ಸಮುದ್ರಕ್ಕೆ ಇಳಿದು ಬೋಟ್ ಗಳಲ್ಲಿ ಮೀನಿನ ಶಿಕಾರಿ ಮಾಡಿಕೊಂಡು ಬಂದು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಕಾಯಕವನ್ನು ಮೀನುಗಾರರು ವರ್ಷ ಪೂರ್ತಿ ಮಾಡುತ್ತಾರೆ. ಆದರೆ, ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮಳೆಗಾಲದ ವೇಳೆ ಮೀನು ಮೊಟ್ಟೆ ಇಟ್ಟು ಸಂತತಿ ವೃದ್ಧಿ ಮಾಡುವ ಸಮಯ ಆಗಿರುವುದರಿಂದ ಜೂ. 1ರಿಂದ ಜು. 31ರವರೆಗೆ ಮೀನುಗಾರಿಕೆ ಮೇಲೆ ನಿಷೇಧ ಹೇರಿದೆ.

ಈ ಎರಡು ತಿಂಗಳ ಕಾಲ ಸಾಂಪ್ರದಾಯಿಕ ಮೀನುಗಾರಿಕೆ ನಡೆಸೋ ಬೋಟ್‌ಗಳು ಹೊರತುಪಡಿಸಿ ಟ್ರಾಲ್ ಹಾಗೂ ಪರ್ಸೀನ್ ಬೋಟ್‌ಗಳು ಯಾವುದೇ ಕಾರಣಕ್ಕೂ ಮೀನುಗಾರಿಕೆ ಮಾಡಲು ಕಡಲಿಗೆ ಇಳಿಯುವಂತಿಲ್ಲ. ಈ ನಿಟ್ಟಿನಲ್ಲಿ ಜೂ.1ರಿಂದ ಮೀನುಗಾರಿಕೆಗೆ ನಿಷೇಧ ಪ್ರಾರಂಭವಾಗುವುದರಿಂದ ಕಡಲ ನಗರಿ ಕಾರವಾರದಲ್ಲಿ ಬೈತ್‌ಕೋಲ ಬಂದರಿನಲ್ಲಿ ಮೀನುಗಾರರು ತಮ್ಮ ಸಾವಿರಾರು ಬೋಟ್‌ಗಳಿಗೆ ಲಂಗರು ಹಾಕಿ ನಿಲ್ಲಿಸಿದ್ದಾರೆ. ಮೀನುಗಾರರು ಯಾವುದೇ ಕಾರಣಕ್ಕೂ ಜೂ.1ರಿಂದ ಕಡಲಿಗೆ ಇಳಿಯದಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇನ್ನು ಉತ್ತರಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಬಂದರುಗಳಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಬೋಟ್‌ಗಳು ಮೀನುಗಾರಿಕೆಗೆ ಆಳ ಸಮುದ್ರಕ್ಕೆ ತೆರಳುತ್ತದೆ. ಮೀನುಗಾರಿಕೆಯನ್ನು ನಂಬಿ ಸುಮಾರು ಹತ್ತು ಸಾವಿರ ಜನರು ಜೀವನ ಸಾಗಿಸುತ್ತಿದ್ದು, ಎರಡು ತಿಂಗಳು ಬೋಟ್ ಗಳನ್ನು ದಡಕ್ಕೆ ತಂದು ರಿಪೇರಿ ಕಾರ್ಯ ಮಾಡುವುದು, ಬಲೆಗಳನ್ನು ಸರಿ ಪಡಿಸಿಕೊಳ್ಳುವ ಕೆಲಸ ಮಾಡುತ್ತಾರೆ.

ಈ ಬಾರಿ ಹತ್ತು ದಿನ ಮುಂಚಿತವಾಗಿಯೇ ಚಂಡ ಮಾರುತದ ಕಾರಣ ಮೀನುಗಾರಿಕೆ ನಿಂತಿದ್ದು, ಕಡಲ ಮಕ್ಕಳು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಇನ್ನೆರಡು ತಿಂಗಳ ಕಾಲ‌ ಮೀನುಗಾರರಿಗೆ ಕೆಲಸ ಇಲ್ಲದ ಸಂದರ್ಭ ಸರ್ಕಾರ ಮೀನುಗಾರರ ನೆರವಿಗೆ ಬರಬೇಕು ಅನ್ನೋದು ಬೋಟ್ ಮಾಲಕರ ಒತ್ತಾಯ.