Asianet Suvarna News Asianet Suvarna News

ರಾಜ್ಯದ 1.1 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌

ರಾಜ್ಯದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ 1.09 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಗುತ್ತಿದೆ. 

First year students of Karnataka govt degree colleges to get free laptops
Author
Bengaluru, First Published Jan 11, 2020, 7:44 AM IST

ಬೆಂಗಳೂರು [ಜ.11]:  ರಾಜ್ಯಾದ್ಯಂತ ಡಿ.12ರ ಭಾನುವಾರ ಆಚರಿಸಲಾಗುವ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ 1.09 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಸಾರುವ ದೃಷ್ಟಿಯಿಂದ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದಿಂದ ಡಿ.12ರಂದು ಸ್ವಾಮಿ ವಿವೇಕಾನಂದ ಜಯಂತಿ ಆಯೋಜಿಸಲಾಗಿದೆ. ಬೆಂಗಳೂರಿನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಂದು ಉದ್ಘಾಟಿಸಲಿದ್ದು, ಸಾಂಕೇತಿಕವಾಗಿ ಹಲವು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಿದ್ದಾರೆ. ಇದೇ ವೇಳೆ ಯುವಜನ ಸಬಲೀಕರಣಕ್ಕೆ ರೂಪಿಸಲಾಗಿರುವ ‘ಯುವಜನ ಸಬಲೀಕರಣ ಕೇಂದ್ರ’, ಡಿಡಿ ಚಂದನ ವಾಹಿನಿಯ ‘ಅರಿವಿನ ದಾರಿ’ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಅಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ವಿವೇಕಾನಂದ ಜಯಂತಿ ಕಾರ್ಯಕ್ರಮಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಲಿದ್ದಾರೆ. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ಈ ಯೋಜನೆಗೆ 311 ಕೋಟಿ ರು. ವೆಚ್ಚ ಮಾಡಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಎಚ್‌ಪಿ ಕಂಪನಿಯ ಲ್ಯಾಪ್‌ಟಾಪ್‌ ನೀಡಲಾಗುತ್ತದೆ. ಪದವಿ ಪ್ರವೇಶಿಸಿದ ಮೊದಲ ವರ್ಷ ಲ್ಯಾಪ್‌ಟಾಪ್‌ ವಿತರಿಸಿದರೆ ಇಡೀ ಉನ್ನತ ಶಿಕ್ಷಣದ ಅವಧಿ ಪೂರ್ತಿ ಅದು ಉಪಯೋಗಕ್ಕೆ ಬರಲಿದೆ. ಹಾಗಾಗಿ ಹಿಂದಿನ ಸರ್ಕಾರ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರದಂತೆ ಪ್ರಥಮ ಪದವಿಯ ಒಟ್ಟು 1,09,916 ವಿದ್ಯಾರ್ಥಿಗಳಿಗೆ ಈ ಬಾರಿ ಲ್ಯಾಪ್‌ಟಾಪ್‌ ವಿತರಿಸಲಾಗುವುದು ಎಂದರು.

ವಿವೇಕಾನಂದರ ಜಯಂತಿಯನ್ನು ಅವರ ಪುಸ್ತಕಗಳ ವಿತರಣೆ, ಉತ್ತಮ ಸಾಧನೆ ಮಾಡಿದ ಯುವಕರನ್ನು ಸನ್ಮಾನಿಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮೂಲಕ ಅರ್ಥಪೂರ್ಣವಾಗಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಪ್ರತಿ ಕಾಲೇಜಲ್ಲೂ ಯುವಜನ ಸಬಲೀಕರಣ ಕೇಂದ್ರ:

ಯುವಜನರ ಸಬಲೀಕರಣಕ್ಕಾಗಿ ಸರ್ಕಾರದ ವಿವಿಧ ಇಲಾಖೆಯಗಳಡಿ ನಮ್ಮ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಇರುವ ಸೌಲಭ್ಯಗಳ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ನೀಡುವ ದೃಷ್ಟಿಯಿಂದ ಪ್ರತಿ ಶಾಲಾ, ಕಾಲೇಜಿನಲ್ಲೂ ಯುವಜನ ಸಬಲೀಕರಣ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯ ಮುಂಚೂಣಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ಕೇಂದ್ರಗಳನ್ನು ಆರಂಭಿಸುತ್ತಿದೆ. ಇವುಗಳಿಗೆ ಮುಖ್ಯಮಂತ್ರಿ ಡಿ.12ರಂದು ಚಾಲನೆ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.

ಕೈಗೆಟಕುವ ಬೆಲೆಯ ಹೊಸ HP ಲ್ಯಾಪ್ ಟಾಪ್ ಮಾರುಕಟ್ಟೆಗೆ...

ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ಉದ್ಯೋಗಾವಕಾಶಗಳಿದ್ದರೂ ಸಂವಹನ ಹಾಗೂ ಮಾಹಿತಿ ಕೊರತೆಯಿಂದ ಯುವಜನರಿಗೆ ಉದ್ಯೋಗ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಯುವಜನರಿಗೆ ಉನ್ನತ ಶಿಕ್ಷಣ ಇಲಾಖೆ, ಯುವಜನ ಸಬಲೀಕರಣ, ಕಾರ್ಮಿಕ ಇಲಾಖೆ ಸೇರಿದಂತೆ ಸುಮಾರು ಹತ್ತು ಇಲಾಖೆಗಳಲ್ಲಿ ಉನ್ನತ ವ್ಯಾಸಂಗಕ್ಕೆ ಇರುವ ಸವಲತ್ತುಗಳು, ಸಾಲ ಸೌಲಭ್ಯ, ಉದ್ಯೋಗಾಧಾರಿತ ಕೌಶಲ್ಯ ತರಬೇತಿ ಸೇರಿದಂತೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಆಯಾ ಶಾಲಾ ಕಾಲೇಜುಗಳಲ್ಲಿ ಯುವಜನ ಸಬಲೀಕರಣ ಕೇಂದ್ರ ಆರಂಭಿಸಿ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಪ್ರಮುಖ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ಕೇಂದ್ರಗಳನ್ನು ಆರಂಭಿಸಲಾಗುವುದು. ನಂತರ ಹಂತ ಹಂತವಾಗಿ ಎಲ್ಲಾ ಶಾಲಾ ಕಾಲೇಜುಗಳಿಗೂ ಇದನ್ನು ವಿಸ್ತರಿಸಲಾಗುವುದು. ಅದೇ ರೀತಿ ಮುಂದಿನ ಹಂತದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಒಂದೊಂದು ಯುವ ಉತ್ತೇಜನ ಕೇಂದ್ರ (ಯೂತ್‌ ಪ್ರಮೋಷನ್‌ ಸೆಂಟ​ರ್ಸ್) ತೆರೆಯುವ ಉದ್ದೇಶವಿದೆ. ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಗೊಂದು ಕೇಂದ್ರ ತೆರೆದು, ನಂತರ ಅವುಗಳನ್ನು ಪ್ರತಿ ಕ್ಷೇತ್ರಕ್ಕೂ ವಿಸ್ತರಿಸಲಾಗುವುದು ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಏಸಸ್‌ ಹೊಸ ಮಳಿಗೆ; ಲ್ಯಾಪ್‌ಟಾಪ್‌ ಖರೀದಿಸಿ ಕ್ಷಣದೊಳಗೆ...

ಪ್ರತ್ಯೇಕ ವೆಬ್‌ ಪೋರ್ಟಲ್‌ ಮೂಲಕ ಸರ್ಕಾರ ನೀಡುವ ಮಾಹಿತಿಯನ್ನು ಈ ಕೇಂದ್ರಗಳು ವಿದ್ಯಾರ್ಥಿಗಳು, ಯುವಜನರಿಗೆ ತಲುಪಿಸಲಿವೆ. ಕಾಲೇಜಿನ ಅಧ್ಯಾಪಕರಲ್ಲೇ ಸೂಕ್ತವಾದವರನ್ನು ಈ ಕೇಂದ್ರಗಳಿಗೆ ಆಪ್ತಸಮಾಲೋಚಕರನ್ನಾಗಿ ಆಯ್ಕೆ ಮಾಡಲಾಗುವುದು. 10ನೇ ತರಗತಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿವರೆಗೆ ಯಾವುದೇ ಹಂತದಲ್ಲಿ ವ್ಯಾಸಂಗ ಮುಂದುವರೆಸಿರುವ, ಅರ್ಧಕ್ಕೆ ನಿಲ್ಲಿಸಿರುವ ಎಲ್ಲರೂ ಮುಂದಿನ ಜೀನವಕ್ಕೆ ತಮಗಿರುವ ಸೌಲಭ್ಯಗಳನ್ನು ಈ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದು ಎಂದು ಸಚಿವರು ಹೇಳಿದರು.

ಚಂದನದಲ್ಲಿ ಅರಿವಿನ ದಾರಿ:

ವಿದ್ಯಾರ್ಥಿಗಳಿಗೆ ತಜ್ಞರಿಂದ ಉನ್ನತ ಶಿಕ್ಷಣ, ಉದ್ಯೋಗ ಮಾರ್ಗದರ್ಶನ, ನಾಯಕತ್ವ ತರಬೇತಿಗಾಗಿ ಅಗತ್ಯ ಭಾಷಾ ಜ್ಞಾನ ಹಾಗೂ ಮಾನವೀಯ ಮೌಲ್ಯ ಕುರಿತ ಕಾರ್ಯಕ್ರಮಗಳನ್ನು ಡಿಡಿ ಚಂದನ ವಾಹಿನಿಯಲ್ಲಿ ‘ಅರಿವಿನ ದಾರಿ’ ಕಾರ್ಯಕ್ರಮ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ, ಇಲಾಖೆಯ ಆಯುಕ್ತ ಡಾ.ಕೆ.ಜಿ.ಜಗದೀಶ್‌ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios