ಭೂ ವ್ಯಾಜ್ಯ ಪ್ರಕರಣದ ಠೇವಣಿ ಹಣ ಬಿಡುಗಡೆ ಮಾಡಲು ₹13 ಸಾವಿರ ಲಂಚ ಸ್ವೀಕರಿಸುತ್ತಿದ್ದ ಮಹಾಲೆಕ್ಕ ಪರಿಶೋಧಕ ಕಚೇರಿಯ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಇದು ಕೇಂದ್ರ ಸರ್ಕಾರಿ ಕಚೇರಿಯಲ್ಲೇ ಸಿಬ್ಬಂದಿಯನ್ನು ಲೋಕಾಯುಕ್ತರು ಬಂಧಿಸಿದ ಮೊದಲ ಪ್ರಕರಣವಾಗಿದೆ.

- ಕೇಂದ್ರ ನೌಕರನ ಬಂಧನ ಇದೇ ಮೊದಲು । ಭೂವಾಜ್ಯದ ಠೇವಣಿ ಹಣ ಪಡೆಯಲು ಲಂಚ । ಕೇಂದ್ರ ಸರ್ಕಾರಿ ಕಚೇರಿಯಲ್ಲೇ ನೌಕರನ ಸೆರೆ । ಈ ವೇಳೆ ಸರ್ಕಾರಿ ನೌಕರನಿಂದ ತೀವ್ರ ಆಕ್ಷೇಪ । ನನ್ನ ಬಂಧಿಸುವ ಅಧಿಕಾರ ಇಲ್ಲ ಎಂದು ಆಕ್ರೋಶ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು (ಜು.3): ಭೂ ವ್ಯಾಜ್ಯ ಪ್ರಕರಣದ ಠೇವಣಿ ಹಣ ಬಿಡುಗಡೆಗೆ ಲಂಚ ಸ್ವೀಕರಿಸುವಾಗ ಮಹಾಲೆಕ್ಕ ಪರಿಶೋಧಕ ಕಚೇರಿಯ ನೌಕರನೊಬ್ಬನನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸೆರೆ ಹಿಡಿದಿದ್ದಾರೆ. ಇದು ಭ್ರಷ್ಟಾಚಾರ ಸಂಬಂಧ ಕೇಂದ್ರ ಸರ್ಕಾರಿ ಕಚೇರಿಯಲ್ಲೇ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಪ್ರಥಮ ಪ್ರಕರಣ ಇದಾಗಿದೆ.

ವಿಧಾನಸೌಧ ಸಮೀಪದ ಭಾರತೀಯ ಲೆಕ್ಕಪರಿಶೋಧಕ ಕಚೇರಿಯ ಲೆಕ್ಕ ಅಧಿಕಾರಿ ಆದರ್ಶ ಕುಮಾರ್ ಸಿಂಗ್ ಬಂಧಿತನಾಗಿದ್ದು, ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಅವರಿಂದ ₹13 ಸಾವಿರ ಲಂಚ ಸ್ವೀಕರಿಸುವಾಗ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೇಂದ್ರ ಸರ್ಕಾರದ ನೌಕರನ ಬಂಧನವು ಅಧಿಕಾರಿ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಏನಿದು ಪ್ರಕರಣ?:

ರಾಜಗೋಪಾಲನಗರದಲ್ಲಿ ನೆಲೆಸಿರುವ ರಿಯಲ್ ಎಸ್ಟೇಟ್ ಉದ್ಯಮಿ ರಮೇಶ್ ಅವರು, ನಗರದಲ್ಲಿ ತಮ್ಮ ಪತ್ನಿ ಹೆಸರಿನಲ್ಲಿ ಖರೀದಿಸಿದ್ದ ನಿವೇಶನವು ವಿವಾದಕ್ಕೆ ಒಳಗಾಗಿತ್ತು. ಈ ಸಂಬಂಧ ನಗರದ ಹಿರಿಯ ಶ್ರೇಣಿ ಸಿವಿಎಲ್ ಕೋರ್ಟ್‌ನಲ್ಲಿ ಅವರು ದಾವೆ ಹೂಡಿದ್ದರು. ಆಗ ಕೋರ್ಟ್‌ನಲ್ಲಿ ಆ ಭೂಮಿಯ ಮಾರ್ಗಸೂಚಿ ದರ ₹13.90 ಲಕ್ಷವನ್ನು ರಮೇಶ್ ಠೇವಣಿ ಇಟ್ಟಿದ್ದರು. ಈ ಭೂ ವ್ಯಾಜ್ಯ ಇತ್ಯರ್ಥವಾದ ಬಳಿಕ ಆ ಠೇವಣಿ ಹಣ ಬಿಡುಗಡೆಗೆ ಮಹಾಲೆಕ್ಕಪರಿಶೋಧಕರ ಕಚೇರಿಗೆ ನ್ಯಾಯಾಲಯವು ಆದೇಶಿಸಿತ್ತು. ಆದರೆ ಈ ಹಣ ಬಿಡುಗಡೆಗೆ ಶೇ.2ರಷ್ಟು ಕಮೀಷನ್ ನೀಡುವಂತೆ ಎಜೆ ಕಚೇರಿಯ ಅಕೌಟೆಂಟ್‌ ಆದರ್ಶ ಬೇಡಿಕೆ ಇಟ್ಟಿದ್ದರು.

ಒಂದು ವರ್ಷದಿಂದ ಎಜೆ ಕಚೇರಿ ಅಲೆದಾಡಿದ ರಮೇಶ್ ಅವರು, ಕೊನೆಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು. ಈ ದೂರನ್ನು ಲೋಕಾಯುಕ್ತ ಪೊಲೀಸರು ಗಂಭೀರವಾಗಿ ಪರಿಗಣಿಸಿದರು. ಎಸ್ಪಿ ಶಿವಪ್ರಕಾಶ್ ದೇವರಾಜ್‌ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ತಿಪ್ಪೇಸ್ವಾಮಿ ಸಾರಥ್ಯದಲ್ಲಿ ಇನ್‌ಸ್ಪೆಕ್ಟರ್‌ಗಳಾದ ವಿಜಯಕೃಷ್ಣ ಹಾಗೂ ಪ್ರದೀಪ್ ಪೂಜಾರಿ ತಂಡವು, ಎಜೆ ಕಚೇರಿಯ ನೌಕರನ್ನು ಬಲೆಗೆ ಬೀಳಿಸಲು ಸಿದ್ಧತೆ ನಡೆಸಿತು. ಅಂತೆಯೇ ಠೇವಣಿ ಹಣ ಬಿಡುಗಡೆಗೆ ಮತ್ತೆ ಆದರ್ಶ್‌ ಅವರನ್ನು ರಮೇಶ್ ಸಂಪರ್ಕಿಸಿದರು. ಆಗ ಪರಸ್ಪರ ಮಾತುಕತೆ ನಡೆದು ಅಂತಿಮವಾಗಿ ಶೇ.1ರಷ್ಟು ಕಮಿಷನ್‌ ₹13 ಸಾವಿರ ನೀಡಲು ಆದರ್ಶ್ ಸಮ್ಮತಿಸಿದರು. ಈ ಲಂಚ ಸ್ವೀಕರಿಸುವಾಗ ಆತನನ್ನು ಟ್ರ್ಯಾಪ್‌ ಮಾಡಲು ಲೋಕಾಯುಕ್ತ ಪೊಲೀಸರು ಯೋಜಿಸಿದರು. ಅದರಂತೆ ಎಜೆ ಕಚೇರಿಯಲ್ಲಿ ರಮೇಶ್ ಅವರಿಂದ ಲಂಚ ಸ್ವೀಕರಿಸುವಾಗ ಆದರ್ಶ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಜೆ ಕಚೇರಿಯಲ್ಲಿ ಹೈಡ್ರಾಮಾ

ಕೇಂದ್ರ ಸರ್ಕಾರದ ಅಧಿಕಾರಿ-ಸಿಬ್ಬಂದಿಯನ್ನು ಬಂಧಿಸುವ ಅಥವಾ ವಿಚಾರಣೆಗೆ ಒಳಪಡಿಸುವ ಅಧಿಕಾರ ಲೋಕಾಯುಕ್ತ ಪೊಲೀಸರು ಹೊಂದಿಲ್ಲ ಎಂದು ಎಜೆ ಕಚೇರಿ ನೌಕರ ಆದರ್ಶ್ ಆಕ್ಷೇಪಿಸಿದ್ದಾನೆ. ಆಗ ಕೆಲ ಹೊತ್ತು ಹೈಡ್ರಾಮಾ ನಡೆದಿದೆ. ಅಲ್ಲದೆ ಲೋಕಾಯುಕ್ತ ಪೊಲೀಸರಿಗೆ ಪೂರ್ವಾನುಮತಿ ಇಲ್ಲದೆ ಹೇಗೆ ತಮಗೆ ಕಚೇರಿಯೊಳಗೆ ಪ್ರವೇಶಿಸಿದ್ದೀರಿ? ನಾವು ರಾಜ್ಯ ಸರ್ಕಾರದ ನೌಕರರಲ್ಲ. ಹೀಗಿರುವಾಗ ನೀವು ಹೇಗೆ ಕಚೇರಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಆಗ ನಾವು ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತಿದ್ದೇವೆ. ನಿಮ್ಮನ್ನು ಈಗ ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧಿಸುತ್ತೇವೆ. ಈ ಬಗ್ಗೆ ತಕಾರಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಿ ಎಂದು ಹೇಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

‘ಸುಪ್ರೀಂಕೋರ್ಟ್ ಆದೇಶಗಳಿವೆ’

ಕೇಂದ್ರ ಸರ್ಕಾರದ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಕೇಳಿ ಬರುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ರಾಜ್ಯದ ಭ್ರಷ್ಟಾಚಾರ ನಿಗ್ರಹ ಪಡೆ ಮತ್ತು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಅದರನ್ವಯವೇ ನಾವು ಎಜೆ ಕಚೇರಿ ನೌಕರನ ಮೇಲೆ ತನಿಖೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.