ಹಬ್ಬಕ್ಕೂ ಮುನ್ನವೇ ಪಟಾಕಿ ದುರಂತ: ಬಾಲಕನ ಮುಖಕ್ಕೆ ಬಹುತೇಕ ಹಾನಿ ಮುಖಕ್ಕೆ ರಾಕೆಟ್ ತಗುಲಿ ಅನಾಹುತ ಮತ್ತೊಬ್ಬನಿಗೂ ತೊಂದರೆ
ಬೆಂಗಳೂರು (ಆ.24) : ದೀಪಾವಳಿ ಹಬ್ಬ ಆರಂಭಕ್ಕೂ ಮುನ್ನವೇ ನಗರದಲ್ಲಿ ಪಟಾಕಿ ಸಿಡಿತದಿಂದ ಇಬ್ಬರು ಹಾನಿಗೊಳಗಾಗಿದ್ದಾರೆ. ಈ ಪೈಕಿ 10 ವರ್ಷ ಬಾಲಕನೊಬ್ಬನ ಮುಖ ಬಹುಭಾಗ ಸುಟ್ಟಿದ್ದು, ಕಣ್ಣುಗಳ ದೃಷ್ಟಿಗೂ ಹಾನಿಯಾಗಿದೆ. ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿ ಹಾನಿಗೊಳಗಾದವರಿಗೆ ವಿಶೇಷ ವಾರ್ಡ್ ಮೀಸಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ಆಸ್ಪತ್ರೆಯಲ್ಲಿ ಪಟಾಕಿ ಹಾನಿಗೊಳಗಾದ ಎರಡು ಪ್ರಕರಣಗಳು ದಾಖಲಾಗಿವೆ. ಜೆಪಿ ನಗರದ 10 ವರ್ಷದ ಬಾಲಕನೊಬ್ಬರಿಗೆ ರಾಕೆಟ್ ತಗುಲಿ ಮುಖಕ್ಕೆ ಗಂಭೀರ ಗಾಯವಾಗಿದೆ. ಮುಖದ ಚರ್ಮ ಬಹುತೇಕ ಸುಟ್ಟಿದ್ದು, ಎರಡ ಕಣ್ಣುಗಳಿಗೂ ಹಾನಿಯಾಗಿ, ದೃಷ್ಟಿಯೂ ತಗ್ಗಿದೆ. ಈ ಬಾಲಕನಿಗೆ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದು ಪ್ರಕರಣದಲ್ಲಿ ಕಲಾಸಿಪಾಳ್ಯದ 35 ವರ್ಷದ ವ್ಯಕ್ತಿ ಪಟಾಕಿ ಸಿಡಿದು ಕಣ್ಣಿನ ಭಾಗಕ್ಕೆ ಸ್ವಲ್ಪ ಪ್ರಮಾಣದ ಹಾನಿಯಾಗಿದೆ.
Deepavali 2022; ದಿನಕ್ಕೆ ಎರಡು ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ
ತನ್ನದಲ್ಲದ ತಪ್ಪಿನಿಂದ ಹಾನಿ:
ಎರಡು ಪ್ರಕರಣಗಳಲ್ಲಿಯೂ ಬೇರೊಬ್ಬರು ಹಚ್ಚಿದ ಪಟಾಕಿಯಿಂದ ಹಾನಿಯಾಗಿದೆ. ರಸ್ತೆಯಲ್ಲಿ ಹಾದುಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಪಟಾಕಿ ಬಂದು ತಗುಲಿದೆ ಎಂದು ಹಾನಿಗೊಳಗಾದವರು ವೈದ್ಯರಿಗೆ ಮಾಹಿತಿ ನೀಡಿದ್ದಾರೆ.
ಮಿಂಟೋ ಕಣ್ಣಿನ ಆಸ್ಪತ್ರೆ ಸಹಾಯವಾಣಿ
ಪಟಾಕಿಯಿಂದ ಹಾನಿಗೀಡಾದಾಗ ತುರ್ತು ಚಿಕಿತ್ಸೆಗಾಗಿ ಸಂಪರ್ಕಿಸಬೇಕಾದ ಮೊಬೈಲ್ ನಂಬರ್‌ಗಳು - 94817 40137, 94808 32430
ಹಸಿರು ಪಟಾಕಿಗಳೂ ಸುರಕ್ಷಿತವಲ್ಲ!
ಹಸಿರು ಪಟಾಕಿಗಳು ಸಂಪೂರ್ಣ ರಾಸಾಯನಿಕ ಮುಕ್ತವಲ್ಲ. ಮಾಲಿನ್ಯ ಮಾತ್ರ ತುಸು ತಗ್ಗಿಸಲಿದ್ದು, ಬೆಂಕಿ ಕಿಡಿ ಮತ್ತು ಉಷ್ಣ ಪ್ರಮಾಣ ಸಾಮಾನ್ಯ ಪಟಾಕಿಗಳಂತೆಯೇ ಹೆಚ್ಚಿರುತ್ತದೆ. ಹೀಗಾಗಿ, ಹಸಿರು ಪಟಾಕಿ ಸಿಡಿಸುವುದರಿಂದಲೂ ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳಿದ್ದು, ಎಚ್ಚರಿಕೆ ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಕಳೆದ ಮೂರು ವರ್ಷಗಳಿಂದ ಕಡ್ಡಾಯ ಹಸಿರು ಪಟಾಕಿ ಬಳಕೆ ಕ್ರಮ ಜಾರಿಯಲ್ಲಿದ್ದರೂ, ರಾಜಧಾನಿ ಬೆಂಗಳೂರಿನಲ್ಲಿ 300ಕ್ಕೂ ಅಧಿಕ ಮಂದಿಗೆ ಪಟಾಕಿಯಿಂದ ಹಾನಿಯಾಗಿದೆ. 10 ಮಂದಿಗೆ ದೃಷ್ಟಿಹಾನಿಯಾಗಿದೆ. ಮುಖ್ಯವಾಗಿ ಹಸಿರು ಪಟಾಕಿಗಳ ಕುರಿತು ಸಾರ್ವಜನಿಕರಲ್ಲಿರುವ ಮಾಹಿತಿ ಕೊರತೆಯೇ ಪಟಾಕಿ ಹೆಚ್ಚಿನ ಹಾನಿಗೆ ಕಾರಣ ಎನ್ನುತ್ತಾರೆ ವೈದ್ಯರು.
ಪಟಾಕಿ ವಿಷಕಾರಿ ಹೊಗೆ ಉಸಿರಾಟದ ಸಮಸ್ಯೆಯ ಅಪಾಯ ಹೆಚ್ಚಿಸುತ್ತೆ ಎಚ್ಚರ..!
2018ರಲ್ಲಿ ಸುಪ್ರೀಂಕೋರ್ಚ್ ‘ಸಾಮಾನ್ಯ ಪಟಾಕಿ ನಿಷೇಧಿಸಿ, ಹಸಿರು ಪಟಾಕಿ ಬಳಸುವಂತೆ’ ಸೂಚನೆ ನೀಡಿತ್ತು. ಈ ಹಿನ್ನೆಲೆ 2019ರಿಂದ ರಾಜ್ಯ ಸರ್ಕಾರಗಳು ಸಾಮಾನ್ಯ ಪಟಾಕಿ ನಿಷೇಧಿಸಿ, ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡುವಂತೆ ಕಾನೂನು ಜಾರಿ ಮಾಡಿತು. ಆದರೆ, ಹಸಿರು ಪಟಾಕಿ ತಯಾರಿಯಲ್ಲಿಯೂ ಅಲ್ಯೂಮಿನಿಯಂ, ಬೇರಿಯಂ, ಪೊಟ್ಯಾಸಿಯಮ… ನೈಟ್ರೇಚ್ ಮತ್ತು ಕಾರ್ಬನ್‌ನಂತಹ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದರೆ, ಸಾಮಾನ್ಯ ಪಟಾಕಿಗಿಂತ ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ. ಇದರಿಂದಾಗಿ ಪಟಾಕಿಗಳಿಂದ ಮಾಲಿನ್ಯ ಶೇ.30ರಷ್ಟು, ಶಬ್ದ 160 ಡೆಸಿಬಲ್‌ಗಿಂತ 125 ಡೆಸಿಬಲ್‌ಗೆ ಕಡಿಮೆಯಾಗುತ್ತದೆ. ಉಳಿದಂತೆ ಸ್ಫೋಟ, ಶಾಖ, ಬೆಳಕಿನ ಉತ್ಪತ್ತಿ, ತ್ಯಾಜ್ಯ ಪ್ರಮಾಣ ಎಲ್ಲಾ ಅಂಶಗಳು ಸಾಮಾನ್ಯ ಪಟಾಕಿಯಂತೆಯೇ ಇರುತ್ತದೆ.
