ಹಲವು ವರ್ಷಗಳ ಹೊಯ್ದಾಟದ ಬಳಿಕ ಕೊನೆಗೂ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ಕ್ಕೆ ಹೊಸ ಕಚೇರಿ ಹೊಂದುವ ಆಸೆ ಈಡೇರುವ ಭಾಗ್ಯ ಸನಿಹವಾಗಿದ್ದು, ಈಗ ಹಳೇ ಕಟ್ಟಡದಿಂದ ಸಿಸಿಬಿ ಕಚೇರಿ ತೆರವಿಗೆ ಮುಹೂರ್ತ ನಿಗದಿಯಾಗಿದೆ.

ಬೆಂಗಳೂರು (ಫೆ.3) ಹಲವು ವರ್ಷಗಳ ಹೊಯ್ದಾಟದ ಬಳಿಕ ಕೊನೆಗೂ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ಕ್ಕೆ ಹೊಸ ಕಚೇರಿ ಹೊಂದುವ ಆಸೆ ಈಡೇರುವ ಭಾಗ್ಯ ಸನಿಹವಾಗಿದ್ದು, ಈಗ ಹಳೇ ಕಟ್ಟಡದಿಂದ ಸಿಸಿಬಿ ಕಚೇರಿ ತೆರವಿಗೆ ಮುಹೂರ್ತ ನಿಗದಿಯಾಗಿದೆ.

ಚಾಮರಾಜಪೇಟೆಯ ರಾಯನ್‌ ಸರ್ಕಲ್‌ನಲ್ಲಿರುವ ಹಳೇ ಕಚೇರಿಯನ್ನು ಎರಡು ವಾರಗಳಲ್ಲಿ ಖಾಲಿ ಮಾಡಿ ಶಾಂತಿನಗರದಲ್ಲಿರುವ ಬಿಎಂಟಿಸಿಯ ಟಿಟಿಎಂಸಿ ಕಟ್ಟಡಕ್ಕೆ ಸಿಸಿಬಿ ಅಧಿಕಾರಿಗಳು ಸ್ಥಳಾಂತರವಾಗಲಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳು ಚುರುಕಿನಿಂದ ಸಾಗಿದೆ. ಇನ್ನು ಹಳೇ ಕಟ್ಟಡವನ್ನು ತೆರವುಗೊಳಿಸದೆ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಡಿ ಎಂದು ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್‌ ಸೂಚಿಸಿದ್ದಾರೆ.

ರೌಡಿ ಪಟಾಲಂ ಕಟ್ಟಿಕೊಂಡು ಬಿಲ್ಡರ್‌ಗಳಿಂದ ಹಣ ವಸೂಲಿ; ಸಿಸಿಬಿ ಪೊಲೀಸರಿಂದ ನಕಲಿ ಆರ್‌ಟಿಐ ಕಾರ್ಯಕರ್ತನ ಬಂಧನ!

ಆಯುಕ್ತರ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಎಚ್ಚೆತ್ತ ಸಿಸಿಬಿ ಅಧಿಕಾರಿಗಳು, ಅಳೆದುತೂಗಿ ಅಂತಿಮವಾಗಿ ಶಾಂತಿನಗರದ ಟಿಎಂಸಿ ಕಟ್ಟಡದಲ್ಲಿ ತಾತ್ಕಾಲಿಕ ಕಚೇರಿಯನ್ನು ತೆರೆಯಲು ನಿರ್ಧರಿಸಿದ್ದಾರೆ. ಇದಕ್ಕೆ ಆಯುಕ್ತರು ಸಮ್ಮತಿಸಿದ್ದಾರೆ.

ಸಿಸಿಬಿಗೆ ಹೊಸ ಕಟ್ಟಡ ನಿರ್ಮಾಣ ಸಂಬಂಧ ಹಲವು ವರ್ಷಗಳಿಂದ ಪ್ರಯತ್ನ ನಡೆದಿದ್ದು, ಈಗ ಹಳೇ ಕಟ್ಟಡ ತೆರವು ಬಳಿಕ ಸಿಸಿಬಿ ನೂತನ ಕಾರ್ಯಾಲಯ ಕಾಣುವ ನಿರೀಕ್ಷೆ ಮೂಡಿಸಿದೆ.ಸಿಸಿಬಿ ಕಚೇರಿ ಸ್ಥಿತಿ ಕಂಡು ಮರುಗಿದ್ದ ದಯಾನಂದ್‌

ಎರಡು ದಶಕಗಳ ಹಿಂದೆ ಚಾಮರಾಜಪೇಟೆಯ ರಾಯನ್‌ ವೃತ್ತದಲ್ಲಿ ಸಿಸಿಬಿ ಕಚೇರಿ ಆರಂಭಿಸಲಾಯಿತು. ರಾಜಧಾನಿಯಲ್ಲಿ ಅತಿ ಮಹತ್ವದ ಅಪರಾಧ ಪ್ರಕರಣಗಳ ತನಿಖೆ ಹಾಗೂ ಪಾತಕಲೋಕದ ಮೇಲೆ ನಿಗಾವಹಿಸುವ ಸಿಸಿಬಿ ವ್ಯವಸ್ಥೆಯೂ ಕಾಲಾನುಕಾಲಕ್ಕೆ ಬದಲಾವಣೆಯಾಗಿದೆ. ಆದರೆ ಕಟ್ಟಡ ಮಾತ್ರ ವಯಸ್ಸಾದಂತೆ ಅದರ ಪರಿಸ್ಥಿತಿಯಂತೂ ಶೋಚನೀಯವಾಗುತ್ತ ಸಾಗಿತು. ಕೆಲ ದಿನಗಳ ಹಿಂದೆ ವಾರ್ಷಿಕ ಪರಿವೀಕ್ಷಣೆ ನಿಮಿತ್ತ ಸಿಸಿಬಿ ಕಚೇರಿಗೆ ಭೇಟಿ ನೀಡಿದ್ದ ಆಯುಕ್ತ ದಯಾನಂದ್ ಅವರು, ಸ್ವಚ್ಛತೆ ಇಲ್ಲದ ಸಿಸಿಬಿ ಕಚೇರಿಯನ್ನು ನೋಡಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು.

ಆಗ ಸಿಸಿಬಿಗೆ ಹೊಸ ಕಟ್ಟಡದ ನಿರ್ಮಾಣ ವಿಚಾರವನ್ನು ಅಧಿಕಾರಿಗಳು ಪ್ರಸ್ತಾಪಿಸಿದ್ದರು. ಆದರೆ ಈ ಮಾತಿಗೆ ಆಯುಕ್ತರು, ಮೊದಲು ಹಳೆ ಕಟ್ಟಡವನ್ನು ತೆರ‍ವುಗೊಳಿಸಿ ಆಮೇಲೆ ಹೊಸ ಕಟ್ಟಡದ ಪ್ರಸ್ತಾಪ ಮಾಡುವಂತೆ ಹೇಳಿದ್ದರು. ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಕಚೇರಿಯನ್ನು ಖಾಲಿ ಮಾಡಲು ಮುಂದಾದ ಅಧಿಕಾರಿಗಳು, ಮೊದಲು ವಿಜಯನಗರದ ಬಿಎಸ್‌ಎನ್ಎಲ್ ಸೇರಿದಂತೆ ಕೆಲವು ಕಟ್ಟಡಗಳನ್ನು ಪರಿಶೀಲಿಸಿದರು. ಆದರೆ ಅಂತಿಮವಾಗಿ ಗುಪ್ತದಳದ ಕಚೇರಿ ಸ್ಥಳಾಂತರ ಬಳಿಕ ಶಾಂತಿನಗರದ ಟಿಎಂಸಿಯಲ್ಲಿ ಖಾಲಿಯಾಗಿದ್ದ ಕಟ್ಟಡಕ್ಕೆ ಸಿಸಿಬಿ ಕಚೇರಿ ತೆರೆಯಲು ನಿರ್ಧರಿಸಲಾಗಿದೆ.

ರೇಸ್‌ ಕೋರ್ಸ್‌ನಲ್ಲಿ ರೌಡಿಗಳಿಂದ ಬೆಟ್ಟಿಂಗ್‌ ದಂಧೆ, ಸಿಸಿಬಿ ದಾಳಿಗೆ ಪೊಲೀಸ್‌ ಆಯುಕ್ತರ ಪ್ರತಿಕ್ರಿಯೆ

ನಾನೇ ಕಟ್ಟಡ ನಿರ್ಮಿಸಿ ಕೊಡುವೆ ಎಂದಿದ್ದ ರೆಡ್ಡಿ!

ಈ ಹಿಂದೆ ವಂಚನೆ ಯತ್ನ ಪ್ರಕರಣ ಸಂಬಂಧ ಬಳ್ಳಾರಿ ಗಣಿಧಣಿ ಹಾಗೂ ಈಗಿನ ಗಂಗಾವತಿ ಕ್ಷೇತ್ರದ ಶಾಸಕ ಜೆ.ಜನಾರ್ಧನ ರೆಡ್ಡಿ ಅವರನ್ನು ಸಿಸಿಬಿ ಬಂಧಿಸಿತ್ತು. ಆಗ ಸಿಸಿಬಿ ಕಚೇರಿಯ ಅವಸ್ಥೆ ನೋಡಿದ್ದ ರೆಡ್ಡಿ ಅವರು, ನಾನೇ ಸ್ವಂತ ದುಡ್ಡಿನಲ್ಲಿ ಸಿಸಿಬಿಗೆ ಹೊಸ ಕಟ್ಟಡ ಕಟ್ಟಿಸಿ ಕೊಡುವೆ ಎಂದು ವ್ಯಂಗ್ಯವಾಗಿ ಹೇಳಿದ್ದರು.