ಕಲಬುರಗಿ ಕೇಂದ್ರೀಯ ವಿವಿ ಕ್ಯಾಂಪಸ್‌ನಲ್ಲಿ ಚಪಾತಿ ವಿಚಾರಕ್ಕೆ ವಿದ್ಯಾರ್ಥಿಗಳ ಗುಂಪುಗಳ ನಡುವೆ ಗಲಾಟೆ ನಡೆದಿದೆ. ಉತ್ತರ ಮತ್ತು ದಕ್ಷಿಣ ಭಾರತದ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಕಲಬುರಗಿ (ಮಾ.9): ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿ ಕ್ಯಾಂಪಸ್‌ಲ್ಲಿ ಊಟದ ಹೊತ್ತಲ್ಲಿ ಹೆಚ್ಚಿನ ಚಪಾತಿಗಳನ್ನು ಕೆಲವರು ಕೊಂಡೊಯ್ದರೆಂಬ ಕಾರಣಕ್ಕಾಗಿ ವಿದ್ಯಾರ್ಥಿಗಳ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. 

ಈ ವೇಳೆ, ಉತ್ತರ ಭಾರತದ ವಿದ್ಯಾರ್ಥಿಗಳು, ದಕ್ಷಿಣ ಭಾರತದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಘಟನೆ ಗುರುವಾರ ರಾತ್ರಿ ಊಟದ ಹೊತ್ತಲ್ಲಿ ಸಂಭವಿಸಿದ್ದು, ವಿವಿ ಕ್ಯಾಂಪಸ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಶುಕ್ರವಾರ ಕೂಡಾ ಕ್ಯಾಂಪಸ್‌ನಲ್ಲಿ ಬಿಗುವಿನ ಪರಿಸ್ಥಿತಿ ಮುಂದುವರಿದಿತ್ತು. ವಿದ್ಯಾರ್ಥಿ ಸಂಘಟನೆಯೊಂದರೊಡನೆ ಗುರುತಿಸಿಕೊಂಡ ಮುಖಂಡರು ಹೆಚ್ಚಿನ ಚಪಾತಿ ಕೊಂಡೊಯ್ದದ್ದನ್ನು ಇತರ ವಿದ್ಯಾರ್ಥಿಗಳು ಪ್ರಶ್ನಿಸಿ ಆಕ್ಷೇಪಿಸಿದ್ದಕ್ಕೆ ಗಲಾಟೆ ಶುರುವಾಗಿದ್ದು, ಉತ್ತರ ಮತ್ತು ದಕ್ಷಿಣ ಭಾರತದ ವಿದ್ಯಾರ್ಥಿಗಳ ಗುಂಪಿನ ನಡುವೆ ಗಲಾಟೆ ನಡೆದಿದೆ. 

ಇದನ್ನೂ ಓದಿ: ಕಲಬುರಗಿ ಕಾಂಗ್ರೆಸ್‌ನ ನಟ್ಟು, ಬೋಲ್ಟು ಟೈಟ್‌ ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯತ್ನ!

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರೊಂದಿಗೂ ವಿದ್ಯಾರ್ಥಿಗಳ ಗುಂಪು ಮಾತಿನ ಚಕಮಕಿ ನಡೆಸಿದ್ದು, ಗುಂಪು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದರು. ಘಟನೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.