Asianet Suvarna News Asianet Suvarna News

ನದಿಗಳಿಗೆ ಭಾರೀ ನೀರು: ಈಗ ಉತ್ತರ ಕರ್ನಾಟಕಕ್ಕೆ ಪ್ರವಾಹ ಭೀತಿ

ತುಂಬಿ ಹರಿಯುತ್ತಿವೆ ಕೃಷ್ಣಾ, ತುಂಗಭದ್ರಾ ನದಿ, ಜಲಾಶಯಗಳಿಂದಲೂ ಅಪಾರ ನೀರು ಬಿಡುಗಡೆ

Fear of Flood to North Karnataka Due to Heavy Inflow to Rivers grg
Author
Bengaluru, First Published Aug 11, 2022, 6:35 AM IST

ಬೆಂಗಳೂರು(ಆ.11):  ಕೆಲ ದಿನಗಳಿಂದ ಸುರಿದ ಭಾರೀ ಮಳೆಗೆ ಉತ್ತರ ಕರ್ನಾಟಕದ ಕೃಷ್ಣಾ, ತುಂಗಭದ್ರಾ ಸೇರಿ ಹಲವು ನದಿಗಳು ತುಂಬಿ ಹರಿಯುತ್ತಿದ್ದು ಜೊತೆಗೆ ಜಲಾಶಯಗಳಿಂದಲೂ ಭಾರೀ ಪ್ರಮಾಣದ ನೀರನ್ನು ಹೊರಬಿಡುತ್ತಿರುವುದರಿಂದ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ನೆರೆಯ ಮಹಾರಾಷ್ಟ್ರ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ವರುಣನ ಆರ್ಭಟ ಹಾಗೆ ಇರುವುದರಿಂದ ಕೃಷ್ಣಾ ನದಿಮಟ್ಟದಲ್ಲಿ ತೀವ್ರ ಹೆಚ್ಚಳವಾಗಿದೆ. ಪರಿಣಾಮ ಬೆಳಗಾವಿ ಜಿಲ್ಲೆಯೊಂದರಲ್ಲೇ 21 ಸೇತುವೆಗಳು ಮುಳುಗಡೆಯಾಗಿದ್ದು ಸಂಚಾರ ಬಂದ್‌ ಆಗಿದೆ. ಧಾರಾಕಾರ ಮಳೆಯಿಂದಾಗಿ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ಸೇರಿದಂತೆ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಚಿಕ್ಕೋಡಿ ಉಪವಿಭಾಗದಲ್ಲಿ ಈಗಾಗಲೇ 14 ಸೇತುವೆಗಳ ಪೈಕಿ 8 ಸೇತುವೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಇದರಿಂದ ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಬೇರೆ ಮಾರ್ಗಗಳ ಮೂಲಕ ಜನ ಸಂಚರಿಸುತ್ತಿದ್ದಾರೆ. ಇನ್ನು ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ 4, ಬಳ್ಳಾರಿ ನಾಲಾ ನೀರಿಗೆ ಅಡ್ಡಲಾಗಿ ಕಟ್ಟಿರುವ 2 ಸೇತುವೆಗಳು ಮುಳುಗಡೆಯಾಗಿದೆ.

ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಹೆಚ್ಚಳವಾಗಿದ್ದರಿಂದಾಗಿ ಕೃಷ್ಣಾ ನದಿಗೆ ಬರುತ್ತಿರುವ ನೀರಿನ ಮಟ್ಟದಲ್ಲಿಯೂ ಏರಿಕೆ ಕಂಡಿದೆ. 1.36 ಲಕ್ಷ ಕ್ಯುಸೆಕ್‌ ನೀರು ಕೃಷ್ಣಾ ನದಿ ಸೇರುತ್ತಿದ್ದು, 1.75 ಲಕ್ಷ ಕ್ಯುಸೆಕ್‌ನಷ್ಟುನೀರನ್ನು ನದಿಗೆ ಬಿಡಲಾಗುತ್ತಿದೆ. ಖಾನಾಪುರ ತಾಲೂಕಿನಲ್ಲಿ ಮಲಪ್ರಭಾ ನದಿಯ ಅಬ್ಬರ ಕೂಡ ಹೆಚ್ಚಳವಾಗಿದ್ದು, 15 ಸಾವಿರ ಕ್ಯುಸೆಕ್‌ನಷ್ಟುನೀರು ಮಲಪ್ರಭಾ ಅಣೆಕಟ್ಟೆಸೇರುತ್ತಿದೆ. ಘಟಪ್ರಭಾ ನದಿಯಲ್ಲಿಯೂ ಏರಿಕೆ ಕಂಡಿದ್ದು, 29 ಸಾವಿರ ಕ್ಯುಸೆಕ್‌ನಷ್ಟುನೀರು ನದಿ ಸೇರುತ್ತಿದೆ.

ರಾಜ್ಯದಲ್ಲಿ ಇಂದಿನಿಂದ ತಗ್ಗಲಿದೆ ಮಳೆ ಅಬ್ಬರ: ಹವಾಮಾನ ಇಲಾಖೆ

40 ಗ್ರಾಮಗಳಲ್ಲಿ ನೆರೆಭೀತಿ:

ಇನ್ನು ಯಾದಗಿರಿಯ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಬಸವಸಾಗರ ಜಲಾಶಯಕ್ಕೆ 1.70 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿರುವುದರಿಂದ ಜಲಾಶಯದಿಂದ 24 ಕ್ರಸ್ಟ್‌ ಗೇಟ್‌ಗಳ ಮೂಲಕ 1 ಲಕ್ಷ 80 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಡಲಾಗಿದೆ. ಇದರಿಂದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಒಟ್ಟು 40ಕ್ಕೂ ಹೆಚ್ಚು ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಕಾಳಜಿ ಕೇಂದ್ರಗಳ ಸ್ಥಾಪನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ಜಿಲ್ಲಾಡಳಿತಗಳು ತಿಳಿಸಿವೆ.

ಹಂಪಿ, ಆನೆಗೊಂದಿ ಮುಳುಗಡೆ:

ಇದೇ ವೇಳೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಎಲ್ಲ 33 ಗೇಟುಗಳಿಂದ 1.80 ಲಕ್ಷ ಕ್ಯೂಸೆಕ್‌ ನೀರನ್ನು ಬಿಟ್ಟಿದ್ದು ಹಂಪಿ, ಆನೆಗೊಂದಿ ಸೇರಿದಂತೆ ಹಲವೆಡೆ ಸ್ಮಾರಕಗಳು ಜಲಾವೃತವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ನದಿಯ ಮಧ್ಯದಲ್ಲಿರುವ ಶ್ರೀ ಕೃಷ್ಣದೇವರಾಯನ ಸಮಾಧಿ ಸಾಲು ಮಂಟಪ, ಹುಚ್ಚಪ್ಪಯ್ಯ ಮಂಟಪ ನೀರಿನಲ್ಲಿ ಮುಳುಗಿದ್ದು, ನವ ವೃಂದಾವನಗಡ್ಡೆ ಸಹ ನೀರಿನಿಂದ ಆವೃತವಾಗಿ ಸಂಪರ್ಕ ಕಡಿತಗೊಂಡಿದೆ. ಹಂಪಿ- ಆನೆಗೊಂದಿ ಬೋಟ್‌ ಸಂಚಾರವನ್ನು ಮೂರನೇ ದಿನವೂ ರದ್ದುಪಡಿಸಲಾಗಿದೆ. ಕಂಪ್ಲಿ- ಗಂಗಾವತಿ ಸೇತುವೆ ನಾಲ್ಕನೇ ದಿನವೂ ನೀರಿನಲ್ಲಿ ಮುಳುಗಿದೆ. ಇದೇ ವೇಳೆ ಶಿವಾಪುರದ ಬಳಿ ನದಿ ದಾಟಿ ಹೋಗಿ ನಡುಗಡ್ಡೆಯಲ್ಲಿ ಸಿಲುಕಿದ್ದ 9 ಜನರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಸುಪ್ರಸಿದ್ಧ ಹುಲಿಗೆಮ್ಮಾ ದೇವಸ್ಥಾನ ಬಳಿ ನದಿಯಲ್ಲಿ ಪ್ರವಾಹ ಬಂದಿದೆ. ಇದರಿಂದ ದೇವಸ್ಥಾನಕ್ಕೆ ಬರುವ ಭಕ್ತರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

Chikkamagaluru Rain: ವಾಡಿಕೆಗಿಂತ ಶೇ.50ರಷ್ಟು ಹೆಚ್ಚು ಮಳೆ; ಅಪಾರ ಹಾನಿ

ಇನ್ನು ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಹಾವೇರಿ ಜಿಲ್ಲೆಯಲ್ಲಿ ತುಂಗಭದ್ರಾ ಮತ್ತು ಕುಮದ್ವತಿ ನದಿಗಳು ಹಾವೇರಿ ಜಿಲ್ಲೆಯಲ್ಲಿ ಉಕ್ಕೇರಿ ಹರಿಯುತ್ತಿವೆ. ಇದರಿಂದ ರಟ್ಟೀಹಳ್ಳಿ ತಾಲೂಕು ಕುಡಪಲಿ ಮತ್ತು ರಾಣಿಬೆನ್ನೂರು ತಾಲೂಕಿನ ಕೂಲಿ ಗ್ರಾಮದ ನಡುವಿನ ಸೇತುವೆ ಮುಳುಗಡೆಯಾಗಿದೆ. ಹಾವೇರಿ ತಾಲೂಕಿನ ಹಾಂವಶಿ ಶಾಖಾರದಿಂದ ಹೊಳಲು ಗ್ರಾಮಕ್ಕೆ ತೆರಳುವ ರಸ್ತೆ ಮುಳುಗಡೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ವರದಾ ಹಾಗೂ ದಂಡಾವತಿ ನದಿ ಪ್ರವಾಹದಿಂದ ನದಿಪಾತ್ರದ ಗ್ರಾಮಗಳ ಸುಮಾರು 500 ಎಕರೆ ಜಮೀನುಗಳು ಜಲಾವೃತಗೊಂಡಿದ್ದರಿಂದ ಮೆಕ್ಕೆಜೋಳ, ನಾಟಿ ಮಾಡಿದ ಭತ್ತದ ಸಸಿ ಕೊಳೆಯುತ್ತಿವೆ.

ನಡುಗಡ್ಡೆಯಲ್ಲಿ ಸಿಲುಕಿದ್ದ 9 ಜನರ ರಕ್ಷಣೆ

ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದ ಬಳಿ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಕೃಷಿ ಚಟುವಟಿಕೆ ಮತ್ತು ಜಾನುವಾರು ಮೇಯಿಸಲು ಹೋಗಿದ್ದ 9 ಜನರು ಅಲ್ಲಿಯೇ ಸಿಲುಕಿದ್ದು, ಅವರನ್ನು ಬೋಟ್‌ ಮೂಲಕ ರಕ್ಷಿಸಿ ಕರೆತರಲಾಯಿತು. ಗ್ರಾಮದ ಬಳಿ ತುಂಗಭದ್ರಾ ನದಿ ನಡುಗಡ್ಡೆಯಲ್ಲಿ ಸುಮಾರು 180 ಎಕರೆ ಕೃಷಿ ಭೂಮಿ ಇದೆ. ಈ ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ರೈತರು ನಿತ್ಯವೂ ತೆಪ್ಪದ ಮೂಲಕ ಹೋಗುತ್ತಾರೆ. ಬುಧವಾರ ಬೆಳಗ್ಗೆ 9 ಮಂದಿ ತೆರಳಿದ್ದರು. ಪ್ರವಾಹ ಹೆಚ್ಚಳವಾಗಿದ್ದರಿಂದ ಇವರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಇವರ ರಕ್ಷಣೆಗೆ ಮುಂದಾಯಿತು. ಆದರೆ ರೈತರು ಮಾತ್ರ ನಾವು ನಾಲ್ಕಾರು ದಿನ ಇಲ್ಲಿಯೇ ಇರಲು ಆಗುವಷ್ಟುವ್ಯವಸ್ಥೆಯೊಂದಿಗೆ ಬಂದಿದೇವೆ. ನೀರು ಇಲ್ಲಿಯವರೆಗೂ ಬರುವುದಿಲ್ಲ ಎಂದು ಹೇಳಿ ಬರಲು ನಿರಾಕರಿಸಿದ್ದಾರೆ. ಆದರೆ ಅಧಿಕಾರಿಗಳು ಮನವೊಲಿಸಿ ಅಗ್ನಿಶಾಕಮ ದಳದ ಬೋಟ್‌ ಮೂಲಕ ಅವರನ್ನು ಕರೆ ತಂದಿದ್ದಾರೆ.
 

Follow Us:
Download App:
  • android
  • ios