ಯಲ್ಲಾಪುರ[ಜ.11]: ಕಾಯಿಲೆ ಪೀಡಿತ ಮಕ್ಕಳನ್ನು ಉಳಿಸುವುದಕ್ಕಾಗಿ ಹೆಣಗಾಡುವ ಹೆತ್ತವರನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ತಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗಳನ್ನು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಬುಧವಾರ ಸಂಭವಿಸಿದೆ.

ಹೆಮ್ಮಾಡಿಯ ಕುಂಬ್ರಿಯ ನಿವಾಸಿ ನಯನಾ(9) ಮೃತ ದುರ್ದೈವಿ. 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆಗೆ ತಂದೆ ನಾಗರಾಜ ಪೂಜಾರಿಯೇ ವಿಷ ನೀಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿತನಿಗೆ ಮೂವರು ಹೆಣ್ಣು ಮಕ್ಕಳಿದ್ದು, ಪುತ್ರಿಯ ಹೃದಯ ಚಿಕಿತ್ಸೆಗೆ ಸಾಕಷ್ಟುಹಣ ವ್ಯಯಿಸಿ ಕೋಪಗೊಂಡಿದ್ದನು ಎನ್ನಲಾಗಿದೆ.

ಇದರಿಂದ ಮನನೊಂದು ಸಾರಾಯಿ ಸೇವಿಸಿ, ಮನೆಗೆ ಬಂದು ದಿನಾಲೂ ಹೆಂಡತಿ ಮಕ್ಕಳೊಂದಿಗೆ ಗಲಾಟೆ ಮಾಡುತ್ತಿದ್ದನು. ಈ ಮಧ್ಯೆ ಹೆಂಡತಿ ಪತಿಯ ಕಾಟಕ್ಕೆ ಬೇಸತ್ತು ಮನೆಯಿಂದ ಹೋಗಿದ್ದಳು. ಇದಾದ ಬಳಿಕ ನಾಗರಾಜ ಬುಧವಾರ ರಾತ್ರಿ ತನ್ನ ವಾಸದ ಮನೆಯಲ್ಲಿ ಬಾಲಕಿ ನಯನಾಳ ಮೇಲೆ ಹಲ್ಲೆ ಮಾಡಿ ವಿಷ ಕೊಟ್ಟಿದ್ದಾನೆ ಎನ್ನಲಾಗಿದೆ. ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.