ಮಂಗಳೂರು(ಜು.27): ಕೊರೋನಾ ಮರಣ ಪ್ರಮಾಣ(ಡೆತ್‌ ರೇಟ್‌)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು​ತ್ತಿ​ದ್ದರೂ ವಿವಿಧ ಕಾರಣಗಳಿಂದಾದ ಒಟ್ಟು ಸಾವಿನ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಗಣನೀಯವಾಗಿ ತಗ್ಗಿರುವ ವಿಚಾರ ಇದೀಗ ಬೆಳ​ಕಿಗೆ ಬಂದಿದೆ. ಲಾಕ್‌ಡೌನ್‌ ಹೇರಿದ್ದ ವೇಳೆ ಅಪಘಾತ, ಅಪರಾಧ ಚಟುವಟಿಕೆಗಳ ಸಂಖ್ಯೆ ಇಳಿಕೆಯಾದದ್ದು, ಜೊತೆಗೆ ಜನತೆ ಜಾಗೃತರಾಗಿ ಮನೆಯಲ್ಲುಳಿದು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದೂ ಸಾವಿನ ಸಂಖ್ಯೆ ಇಳಿ​ಮು​ಖಕ್ಕೆ ಕಾರ​ಣ​ಗ​ಳ​ಲ್ಲೊಂದು ಎಂದು ಹೇಳಲಾಗಿದೆ.

ಜು.24ರ ರಾಜ್ಯ ಬುಲೆಟಿನ್‌ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4214 ಕೋವಿಡ್‌ ಸೋಂಕಿತರ ಪೈಕಿ 99 ಮಂದಿ ಮೃತಪಟ್ಟು ಡೆತ್‌ರೇಟ್‌ ಶೇ.2.34ಕ್ಕೇರಿದೆ. ಇಷ್ಟಾದರೂ ಮಂಗಳೂರಿನ ಒಟ್ಟು ಸಾವಿನ ಸಂಖ್ಯೆಯಲ್ಲಿ ಈ ಬಾರಿ ಏರಿಕೆಯೇ ಆಗದೆ, ಇಳಿಮುಖವಾಗಿರುವುದು ವಿಶೇಷ.

ದೇಶದಲ್ಲಿ ಮತ್ತೆ 50218 ಕೇಸ್‌: ಕೊರೋನಾಗೆ 725 ಬಲಿ!

ಕಳೆದ ವರ್ಷ ನಗರ ವ್ಯಾಪ್ತಿಯಲ್ಲಿ ಜ.1ರಿಂದ ಜು.19ರವರೆಗೆ ವಿವಿಧ ಕಾರಣಗಳಿಂದ ಮೃತ​ಪ​ಟ್ಟವರ ಸಂಖ್ಯೆ ಒಟ್ಟು 4,787. ಆದರೆ ಈ ಬಾರಿ ಕೊರೋನಾ ಸಾವುಗಳನ್ನು ಸೇರಿಸಿಯೂ ಜು.20ರವರೆಗೆ ಮೃತಪಟ್ಟಿರುವವರ ಸಂಖ್ಯೆ 3403. ಅಂದರೆ ಕೋವಿಡ್‌ ಅಬ್ಬ​ರದ ನಡು​ವೆಯೂ ಈ ವರ್ಷ 1,384 ಕಡಿಮೆ ಮರಣ ದಾಖಲಾಗಿದೆ. ಕಳೆದ ವರ್ಷ ಜನವರಿಯಿಂದ ಜೂನ್‌ ಅಂತ್ಯದವರೆಗೆ ಮಂಗಳೂರಲ್ಲಿ 1,032 ಅಪಘಾತಗಳು ಸಂಭವಿಸಿ ಅದರಲ್ಲಿ 148 ಮಂದಿ ಸಾವಿಗೀಡಾಗಿದ್ದರು. 1075 ಮಂದಿ ಗಾಯಗೊಂಡಿದ್ದರು. ಈ ವರ್ಷ ಇದೇ ಅವಧಿಯಲ್ಲಿ ಕೇವಲ 326 ಅಪಘಾತಗಳು ಸಂಭವಿಸಿ 50 ಮಂದಿ ಮೃತಪಟ್ಟಿದ್ದಾರೆ. 364 ಮಂದಿ ಮಾತ್ರ ಗಾಯಗೊಂಡಿದ್ದಾರೆ.

ಅಪ​ಘಾತ ಪ್ರಕ​ರ​ಣ​ಗಳು ಇಳಿ​ಮು​ಖ​ವಾ​ಗಿ​ರು​ವುದು ಒಂದು ಕಾರ​ಣ​ವಾ​ದರೆ ಕೇರ​ಳ​ದಿಂದ ಬರುವ ರೋಗಿ​ಗಳ ಸಂಖ್ಯೆ, ಹೊರ ಜಿಲ್ಲೆ​ಗ​ಳಿಂದ ದಕ್ಷಿಣ ಕನ್ನ​ಡಕ್ಕೆ ಬರುವ ರೋಗಿ​ಗಳ ಸಂಖ್ಯೆಯೂ ಇಳಿ​ಮು​ಖ​ವಾ​ಗಿ​ರು​ವುದು ಈ ರೀತಿ ಸಾವಿನ ಪ್ರಮಾಣ ತಗ್ಗಲು ಮತ್ತೊಂದು ಕಾರಣ ಎಂದು ಆರೋಗ್ಯ ಅಧಿ​ಕಾ​ರಿ​ಗಳು ಹೇಳು​ತ್ತಾ​ರೆ.

ದೈಹಿಕ ಅಂತರ ಕಾಪಾಡುತ್ತೆ ‘ಡಿಸ್ಟೋಸಿಟ್‌’ ಉಪಕರಣ!

ಲಾಕ್‌ಡೌನ್‌ನಿಂದಾಗಿ ಅಪಘಾತದಿಂದ ಸಾವಿನ ಸಂಖ್ಯೆಯೂ ಈ ಬಾರಿ ಇಳಿದಿದೆ. ಉತ್ತಮ ವೈದ್ಯಕೀಯ ವ್ಯವಸ್ಥೆಯಿರುವ ಮಂಗಳೂರಿನ ಆಸುಪಾಸಿನ ಎಂಟು ಜಿಲ್ಲೆಗಳಲ್ಲದೆ ನೆರೆಯ ಕೇರಳದಿಂದಲೂ ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಈ ಬಾರಿ ಲಾಕ್‌ಡೌನ್‌ನಿಂದಾಗಿ ಬರಲು ಸಾಧ್ಯವಾಗಿಲ್ಲ. ಅಲ್ಲದೆ, ಆರೋಗ್ಯ ಜಾಗೃ​ತಿಯೂ ಹೆಚ್ಚಿದೆ. ಸಾವಿನ ಸಂಖ್ಯೆ ಕ್ಷೀಣಿಸಲು ಇದು ಕೂಡ ಬಹುಮುಖ್ಯ ಕಾರಣವಾಗಿರಬಹುದು ಎಂದು ಜಿಲ್ಲಾ ಪ್ರಭಾರ ಆರೋ​ಗ್ಯಾ​ಧಿ​ಕಾರಿ ಡಾ.ರತ್ನಾಕರ್‌ ಹೇಳುತ್ತಾ​ರೆ.