ನವದೆಹಲಿ(ಜು.27): ದೇಶದಲ್ಲಿ ಭಾನುವಾರ ಹೊಸದಾಗಿ 50128 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 14,32,773ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ಭಾನುವಾರ ಒಂದೇ ದಿನ 725 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 32769ಕ್ಕೆ ಹೆಚ್ಚಳವಾಗಿದೆ. ಕಳೆದ 24 ತಾಸುಗಳ ಅವಧಿಯಲ್ಲಿ 36145 ಸೋಂಕಿತರು ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡವರ ಪ್ರಮಾಣ ಶೇ.63.92ರಷ್ಟಿದೆ.

ಒಂದೇ ದಿನ ಕೊರೋನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕಿಂತ ಹೆಚ್ಚು ವರದಿಯಾಗುತ್ತಿರುವುದು ಇದು ಎರಡನೇ ಬಾರಿ. ಕಳೆದ ಗುರುವಾರ ದೇಶದಲ್ಲಿ 50,904 ಪ್ರಕರಣಗಳು ಪತ್ತೆಯಾಗಿದ್ದವು. 1199 ಮಂದಿ ಸಾವಿಗೀಡಾಗಿದ್ದರು.

3,75,799 ಸೋಂಕಿತರು ಹಾಗೂ 13656 ಸಾವಿನೊಂದಿಗೆ ದೇಶದಲ್ಲೇ ಸೋಂಕು ಹಾಗೂ ಸಾವಿನಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದೆ. 2,13,723 ಸೋಂಕಿತರೊಂದಿಗೆ ತಮಿಳುನಾಡು ಎರಡನೇ ಸ್ಥಾನದಲ್ಲಿದೆ.