Asianet Suvarna News Asianet Suvarna News

ಜಿ 20ಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿದ ರೈತರು ವಶಕ್ಕೆ

ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಬೆಂಗಳೂರಲ್ಲಿ ಆರಂಭವಾಗಿರುವ ಜಿ20 ಸಭೆಗೆ ಕಪ್ಪು ಬಾವುಟ ಪ್ರದರ್ಶಿಸಲು ತೆರಳುತ್ತಿದ್ದ ರೈತರನ್ನು ಹೆಬ್ಬಾಳ ಮೇಲ್ಸೇತುವೆ ಬಳಿಯೇ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದಾರೆ.

Farmers who tried to show black flag at G20 farmers arrested rav
Author
First Published Dec 13, 2022, 10:50 PM IST

ಬೆಂಗಳೂರು (ಡಿ.13): ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಬೆಂಗಳೂರಲ್ಲಿ ಆರಂಭವಾಗಿರುವ ಜಿ20 ಸಭೆಗೆ ಕಪ್ಪು ಬಾವುಟ ಪ್ರದರ್ಶಿಸಲು ತೆರಳುತ್ತಿದ್ದ ರೈತರನ್ನು ಹೆಬ್ಬಾಳ ಮೇಲ್ಸೇತುವೆ ಬಳಿಯೇ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದಾರೆ. ಕಬ್ಬಿನ ಎಫ್‌ಆರ್‌ಪಿ ಹೆಚ್ಚಿಸಬೇಕು. ರೈತರ ಸಾಲಕ್ಕೆ ಸಿಬಿಲ್‌ ಸ್ಕೋರ್‌ ಕಡ್ಡಾಯ ಮಾಡಿರುವುದನ್ನು ಕೈಬಿಡಬೇಕು. ರೈತರ ಮಕ್ಕಳಿಗೆ ಬಡ್ಡಿರಹಿತವಾಗಿ ವಿದ್ಯಾಭ್ಯಾಸ ಸಾಲ ನೀಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 22 ದಿನದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು, ಜಿ 20ಸಭೆಗೆ ಅಡ್ಡಿಪಡಿಸಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದರು. ದೇವನಹಳ್ಳಿ ಬಳಿಯ ಖಾಸಗಿ ಹೋಟೆಲ್‌ವೊಂದರಲ್ಲಿ ಮಂಗಳವಾರ ನಡೆಯುತ್ತಿದ್ದ ಜಿ 20ಸಭೆಯಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಹಲವು ವಾಹನಗಳಲ್ಲಿ ರೈತರು ಬಳ್ಳಾರಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಹೆಬ್ಬಾಳ ಮೇಲ್ಸೇತುವೆಯಲ್ಲಿ ರೈತರನ್ನು ಮುನ್ನೆಚ್ಚರಿಕೆಯಾಗಿ ತಡೆದ ಪೊಲೀಸರು ವಶಕ್ಕೆ ಪಡೆದರು. ಬಳಿಕ ಪ್ರತಿಭಟನಾಕಾರರನ್ನು ಮೈಸೂರು ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.

ಪೊಲೀಸ್‌ ದೌರ್ಜನ್ಯ ಆರೋಪ:

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡ ಕುರುಬೂರು ಶಾಂತಕುಮಾರ್‌, ಕಬ್ಬಿಗೆ ನ್ಯಾಯಸಮ್ಮತ ಬೆಲೆ ನೀಡಬೇಕು, ರೈತರ ಕೃಷಿ ಸಾಲಕ್ಕೆ ಸಿಬಿಲ್‌ ಕಡ್ಡಾಯ ಮಾಡಬಾರದು, ದೇಶದ ಜನರಿಗೆ ಆಹಾರ ಉತ್ಪಾದಿಸುವ ವಲಯವಾಗಿರುವ ಕೃಷಿಕರಿಗೆ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಬಡ್ಡಿರಹಿತ ಸಾಲ ನೀಡಬೇಕು ಎಂದು ಒತ್ತಾಯಿಸಲು ಜಿ 20 ಶೃಂಗಸಭೆ ನಡೆಯುತ್ತಿದ್ದ ಸ್ಥಳಕ್ಕೆ ಹೊರಟಿದ್ದ ರೈತರನ್ನು ತಡೆದು ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿನಿಂದ 3 ದಿನ ಬೆಂಗಳೂರಲ್ಲಿ ಜಿ20 ದೇಶಗಳ ಸಭೆ

‘ರೈತರು ತಂಡೋಪತಂಡವಾಗಿ ವಾಹನಗಳ ಮೂಲಕ ಬಳ್ಳಾರಿ ರಸ್ತೆಯಲ್ಲಿ ತೆರಳುತ್ತಿದ್ದಾಗ ಹೆಬ್ಬಾಳ ಮೇಲ್ಸೇತುವೆ ಸಮೀಪ ಪೊಲೀಸರು ರಸ್ತೆ ಮಧ್ಯದಲ್ಲಿ ತಡೆದು ನಿಲ್ಲಿಸಿದರು. ಯಾವ ಕಾರಣಕ್ಕಾಗಿ ತಡೆಯುತ್ತೀರಿ ಎಂದರೆ ಮುಂಜಾಗ್ರತಾ ಕ್ರಮ ಎಂದು ದಬ್ಬಾಳಿಕೆ ನಡೆಸಿದರು. ಆಗ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆಯಿತು. ಬಳಿಕ ರೈತರ ಮೂರು ತಂಡಗಳನ್ನು ವಶಕ್ಕೆ ಪಡೆದು ಕೆಎಸ್‌ಆರ್‌ಪಿ ಮೈದಾನಕ್ಕೆ ಕರೆತಂದರು. ಫ್ರೀಡಂ ಪಾರ್ಕ್ನಲ್ಲಿ ಶಾಂತಿಯುತವಾಗಿ ಧರಣಿ ಮುಂದುವರೆಸುತ್ತಿದ್ದ ಕೆಲವು ರೈತರನ್ನೂ ವಶಕ್ಕೆ ಪಡೆದಿದ್ದಾರೆ. ಸರ್ಕಾರ ಪೊಲೀಸ್‌ ಬಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಟೀಕಿಸಿದರು.

Follow Us:
Download App:
  • android
  • ios