Asianet Suvarna News Asianet Suvarna News

ಭತ್ತಕ್ಕೆ ಬಂಪರ್‌ ಬೆಲೆ: ಅಕ್ಕಿ ದುಬಾರಿ?

ಬತ್ತದ ಕೃಷಿ ಮಾಡಲು ರೈತರು ಹಿಂದೇಟು ಹಾಕಲು ಆದಾಯ ಕಡಿಮೆ ಜೊತೆಗೆ ಕೂಲಿ ಕಾರ್ಮಿಕರ ಕೊರತೆ ಕಾರಣ. ಕೂಲಿಗೆ ಬಂದರೂ ಅತಿ ಹೆಚ್ಚು ಕೂಲಿ ನೀಡುವುದರಿಂದ ಆದಾಯ ಕಡಿಮೆಯಾಗುತ್ತದೆ. ಈಗ ಬತ್ತದ ಗದ್ದೆಗೆ ನಾಟೀ ಯಂತ್ರ, ಟ್ರಾಕ್ಟರ್‌ ಹೂಟಿ, ಗದ್ದೆ ಕೊಯಿಲು ಯಂತ್ರ, ಒಕ್ಕಲಾಟದ ಯಂತ್ರ ಬಂದಿದೆ. ಆದರೆ, ರೈತರ ಬತ್ತದ ಆದಾಯ ವೆಲ್ಲಾ ಯಂತ್ರಗಳ ಬಾಡಿಗೆಗೆ ಸರಿಯಾಗುತ್ತದೆ ಎಂಬುದು ರೈತರ ಅಳಲಾಗಿದೆ. 

Farmers Happy For 3000 per Quintal of Paddy in Karnataka grg
Author
First Published Dec 21, 2023, 4:18 AM IST

ಕೆ.ಎಂ. ಮಂಜುನಾಥ್‌, ಯಡಗೆರೆ ಮಂಜುನಾಥ್‌,

ಬಳ್ಳಾರಿ/ನರಸಿಂಹರಾಜಪುರ(ಡಿ.21): ಗದ್ದೆ ಕಟಾವು ಸಮಯದಲ್ಲೇ ಬತ್ತದ ಬೆಲೆ 1 ಕ್ವಿಂಟಾಲ್‌ ಗೆ 3 ಸಾವಿರ ಧಾರಣೆ ಕಂಡಿದ್ದು ಬತ್ತ ಬೆಳೆಯುವ ರೈತರು ಪುಲ್ ಖುಷಿಯಾಗಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ 1 ಕ್ವಿಂಟಾಲ್‌ ಬತ್ತದ ಬೆಲೆ 1500 ರಿಂದ 1600 ರು. ಇತ್ತು. ಈ ವರ್ಷ ಆಗಸ್ಟ್‌ ತಿಂಗಳಿಂದ ಬತ್ತದ ಬೆಲೆ ಏರಿಕೆಯಾಗುತ್ತಾ ಡಿಸೆಂಬರ್ ತಿಂಗಳಲ್ಲಿ 1 ಕ್ವಿಂಟಾಲ್‌ ಗೆ 3 ಸಾವಿರ ರು. ಏರಿಕೆಯಾಗಿ ದಾಖಲೆ ಸೃಷ್ಠಿಸಿದೆ.

ಬತ್ತದ ಬೆಲೆ ಏರಿಕೆಗೆ ಕಾರಣ ?

ನರಸಿಂಹರಾಜಪುರ ತಾಲೂಕು ಒಂದು ಕಾಲದಲ್ಲಿ ಬಹುತೇಕ ರೈತರು ಬತ್ತ ಮಾತ್ರ ಬೆಳೆಯುತ್ತಿದ್ದರಿಂದ ಬತ್ತದ ಕಣಜ ಎಂದು ಪ್ರಸಿದ್ದಿ ಪಡೆದಿತ್ತು. ತಾಲೂಕಿನಲ್ಲಿ ಅಂದಾಜು 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬತ್ತ ಬೆಳೆಯುತ್ತಿದ್ದರು. ಆದರೆ, 20 - 30 ವರ್ಷದ ಹಿಂದಕ್ಕೆ ಹೋದರೆ ಬತ್ತವನ್ನು ಯಾರೂ ಕೇಳುವುವರೇ ಇಲ್ಲವಾಗಿತ್ತು. ಬತ್ತದ ಧಾರಣೆ 1 ಕ್ವಿಂಟಾಲ್ ಗೆ 700-800 ರು.ಗೆ ಕೇಳುತ್ತಿದ್ದರು. ಕೆಲವು ವರ್ಷದಲ್ಲಿ 1200 ರು.ನಿಂದ 1300 ರು, ಗೆ ಮಾತ್ರ ಖರೀದಿ ಮಾಡುತ್ತಿದ್ದರು. ಆದರೆ, ಬತ್ತ ಬೆಳೆಯಲು ಕೂಲಿಕಾರರಿಗೆ ಸಂಬಳ ನೀಡುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಬತ್ತ ಬೆಳೆಯುವ ರೈತರು ಸಾಲದ ಹೊರೆಯಲ್ಲೇ ಕಾಲ ಕಳೆಯುತ್ತಿದ್ದರು. ಇದರಿಂದ ಬಹುತೇಕ ರೈತರು ತಮ್ಮ ಗದ್ದೆಗಳಲ್ಲಿ ಬತ್ತ ಬೆಳೆಯುವುದನ್ನೇ ಬಿಟ್ಟು ವಾಣಿಜ್ಯ ಬೆಳೆಯಾದ ಅಡಿಕೆ, ರಬ್ಬರ್‌,ನೇಂದ್ರ ಬಾಳೆ, ಶುಂಠಿ ಬೆಳೆಯತ್ತ ವಾಲಿದ್ದಾರೆ. ನರಸಿಂಹರಾಜಪುರ ತಾಲೂಕಿನಲ್ಲಿ ಕಳೆದ 10 ವರ್ಷದ ಹಿಂದೆ ಅಂದಾಜು 4 ರಿಂದ 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದರು. ಈಗ 1900 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬತ್ತ ಬೆಳೆಯುತ್ತಿದ್ದಾರೆ. ಇದೇ ರೀತಿ ಮಲೆನಾಡು ಭಾಗವಾದ ಶೃಂಗೇರಿ, ಕೊಪ್ಪ ತಾಲೂಕುಗಳಲ್ಲೂ ಬತ್ತದ ಗದ್ದೆಯೆಲ್ಲಾ ಅಡಿಕೆ ತೋಟವಾಗಿದೆ. ಇದರಿಂದ ಮಲೆನಾಡು ಭಾಗದಲ್ಲಿ ಬತ್ತವೇ ಸಿಗದೆ ಬತ್ತದ ಧಾರಣೆ ಏರಿಕೆಯಾಗಿರಬಹುದು ಎನ್ನುತ್ತಾರೆ ಬತ್ತ ಬೆಳೆಯುವ ರೈತರು ಹಾಗೂ ವ್ಯಾಪಾರಿಗಳು.

ಭತ್ತದ ಬೆಳೆಗೆ ತಜ್ಞರು ಶಿಫಾರಸು ಮಾಡಿದ ಔಷಧಿ, ಗೊಬ್ಬರ ಬಳಸಿದರೆ ಮಾತ್ರ ಉತ್ತಮ ಇಳುವರಿ

ಕಾರ್ಮಿಕರ ಕೊರತೆಯೂ ಕಾರಣ ?:

ಬತ್ತದ ಕೃಷಿ ಮಾಡಲು ರೈತರು ಹಿಂದೇಟು ಹಾಕಲು ಆದಾಯ ಕಡಿಮೆ ಜೊತೆಗೆ ಕೂಲಿ ಕಾರ್ಮಿಕರ ಕೊರತೆ ಕಾರಣ. ಕೂಲಿಗೆ ಬಂದರೂ ಅತಿ ಹೆಚ್ಚು ಕೂಲಿ ನೀಡುವುದರಿಂದ ಆದಾಯ ಕಡಿಮೆಯಾಗುತ್ತದೆ. ಈಗ ಬತ್ತದ ಗದ್ದೆಗೆ ನಾಟೀ ಯಂತ್ರ, ಟ್ರಾಕ್ಟರ್‌ ಹೂಟಿ, ಗದ್ದೆ ಕೊಯಿಲು ಯಂತ್ರ, ಒಕ್ಕಲಾಟದ ಯಂತ್ರ ಬಂದಿದೆ. ಆದರೆ, ರೈತರ ಬತ್ತದ ಆದಾಯ ವೆಲ್ಲಾ ಯಂತ್ರಗಳ ಬಾಡಿಗೆಗೆ ಸರಿಯಾಗುತ್ತದೆ ಎಂಬುದು ರೈತರ ಅಳಲಾಗಿದೆ. ಹವಮಾನ ವೈಪರೀತ್ಯದಿಂದ ನಾಟಿ ಮಾಡುವ ಸಮಯದಲ್ಲಿ ಮಳೆ ಬರದೆ, ನೀರಿಲ್ಲದೆ ಹರಸಾಹಸ ಪಡಬೇಕಾಗುತ್ತದೆ. ಗದ್ದೆ ಕೊಯ್ಲು ಸಮಯದಲ್ಲಿ ಅಕಾಲಿಕ ಮಳೆ ಬಂದು ಬತ್ತ, ಹುಲ್ಲು ಹಾಳಾಗುತ್ತದೆ.

3 ಸಾವಿರ ರು. ಏರಿಕೆ:

ಈ ವರ್ಷ ಐಇಟಿ ಬತ್ತಕ್ಕೆ ಕ್ವಿಂಟಾಲ್‌ ಗೆ 3 ಸಾವಿರ, ತುಂಗಾ 2100, ಜ್ಯೋತಿ 2500. ಸೋನಾ ಮಸೂರಿ 3 ಸಾವಿರ ಬೆಲೆ ಬಂದಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಐ.ಇ.ಟಿ ಬತ್ತದ ಬೆಲೆ 1500 ರು. ತುಂಗಾ 1600 ಇತ್ತು. ಬಹುತೇಕ ಧಾರಣೆ ಡಬಲ್ ಆಗಿದೆ. ವಿಶೇಷವೆಂದರೆ ಕಳೆದ ಹಲವಾರು ವರ್ಷದಲ್ಲಿ ಬತ್ತಕ್ಕೆ ಧಾರಣೆ ಇರದಿದ್ದರೂ ಅಕ್ಕಿಗೆ ಮಾತ್ರ ಧಾರಣೆ ಏರಿಕೆಯಾಗುತಿತ್ತು. ಈ ವರ್ಷ ಬತ್ತದ ಧಾರಣೆ ಏರುತ್ತಲೇ ಅಕ್ಕಿಯ ಧಾರಣೆಯೂ ಏರಿಕೆ ಕಂಡಿದ್ದು 1 ಕೆ.ಜಿ.ಗೆ 55 ರಿಂದ 60 ರು. ಏರಿದೆ. ಇದರ ಜೊತೆಗೆ ಬತ್ತದ ಹುಲ್ಲಿನ ಧಾರಣೆಯೂ ಕಳೆದ 5 ವರ್ಷದಿಂದ ಏರಿಕೆಯಾಗುತ್ತಲೇ ಇದ್ದು ಕಳೆದ ವರ್ಷ 1 ಹುಲ್ಲಿನ ಕಟ್ಟಿಗೆ 40 ರಿಂದ 50 ರು. ಏರಿಕೆಯಾಗಿತ್ತು.

ಏರಿಕೆಯಾಗಲೇ ಬೇಕಾಗಿತ್ತು

ದೇಶಕ್ಕೆ ಅನ್ನ ಕೊಡುವ ಅನ್ನದಾತರು ಬೆಳೆದ ಮುಖ್ಯ ಆಹಾರ ಬೆಳೆಯಾದ ಬತ್ತಕ್ಕೆ ಉತ್ತಮ ಧಾರಣೆ ಏರಲೇಬೇಕಾಗಿದ್ದು ಅನಿವಾರ್ಯವಾಗಿದೆ. ಹಲವು ದಶಕಗಳಿಂದ ಬತ್ತ ಬೆಳೆಯುವ ರೈತರು ಕಾಯುತ್ತಿದ್ದ ಬತ್ತದ ಧಾರಣೆ ಈ ವರ್ಷ ಏರಿಕೆಯಾಗಿದ್ದು ಸಂತಸ ತಂದಿದೆ ಎನ್ನುತ್ತಾರೆ ಬತ್ತ ಬೆಳೆಯುವ ರೈತರು.

ಉಡುಪಿ ಶ್ರೀಕೃಷ್ಣನ ನೈವೇದ್ಯಕ್ಕೆ ಶುದ್ಧ ಸಾವಯವ ಭತ್ತ ಅಭಿಯಾನ!

ಹಲವು ವರ್ಷಗಳಿಂದ ನಾನು ಬತ್ತದ ವ್ಯಾಪಾರ ಮಾಡುತ್ತಿದ್ದು 5 ವರ್ಷದ ಹಿಂದೆ 20 ಸಾವಿರ ಕ್ವಿಂಟಾಲ್‌ ಭತ್ತ ಖರೀದಿಸುತ್ತಿದ್ದೆ. ಆದರೆ,ಇತ್ತೀಚಿನ ವರ್ಷಗಳಲ್ಲಿ ಕೇವಲ 10 ಸಾವಿರ ಕ್ವಿಂಟಾಲ್ ಮಾತ್ರ ರೈತರಿಂದ ಸಿಗುತ್ತಿದೆ. ಬತ್ತದ ಅಭಾವ ಸೃಷ್ಠಿಯಾಗುತ್ತಿದೆ. ತಾಲೂಕಿನಲ್ಲಿ ಅರ್ದಕ್ಕಿಂತ ಹೆಚ್ಚು ರೈತರು ಬತ್ತ ಬೆಳೆಯುವುದನ್ನು ಬಿಟ್ಟಿದ್ದಾರೆ. ಬತ್ತ ಬೆಳೆಯದೆ ಇರುವುದರಿಂದ ಬತ್ತದ ಧಾರಣೆ ಏರಿಕೆಯಾಗಿದೆ ಎಂದು ಬತ್ತದ ವ್ಯಾಪಾರಿ ಪೂರ್ಣೇಶ್‌ ಹೇಳಿದ್ದಾರೆ. 
ನಾನು ಹಲವಾರು ವರ್ಷಗಳಿಂದ 22 ಎಕರೆ ಗದ್ದೆಯಲ್ಲಿ ಬತ್ತ ಬೆಳೆಯುತ್ತಿದ್ದೇನೆ. ಬತ್ತ ಬೆಳೆಯಲ್ಲಿ ನನಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪ್ರಶಸ್ತಿ ಬಂದಿದೆ. ಪ್ರತಿ ವರ್ಷ ನಾವು ಬತ್ತ ಮಾರಾಟ ಮಾಡಿದ ಮೇಲೆ ಧಾರಣೆ ಏರುತ್ತಿತ್ತು. ಇದೇ ಪ್ರಥಮ ಬಾರಿಗೆ ಗದ್ದೆ ಕಟಾವಿನ ಸಮಯಕ್ಕೆ ಬತ್ತದ ಧಾರಣೆ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಪ್ರತಿ ಕ್ವಿಂಟಾಲ್ ಬತ್ತಕ್ಕೆ 3 ಸಾವಿರ ರು. ಇರುವುದು ಸರಿಯಾದ ಧಾರಣೆಯಾಗಿದೆ ಎಂದು ಪ್ರಗತಿಪರ ಬತ್ತ ಬೆಳೆಯುವ ಕೃಷಿಕ ಜಾರ್ಜ್ ತಿಳಿಸಿದ್ದಾರೆ.

ನಾವು 4 ಎಕರೆಯಲ್ಲಿ ಪ್ರತಿ ವರ್ಷ ಬತ್ತ ಬೆಳೆಯುತ್ತಿದ್ದೇವೆ. ಸಾಮಾನ್ಯವಾಗಿ 1600 ರಿಂದ 1700 ರು.ವರೆಗೆ ಧಾರಣೆ ಇರುತ್ತಿತ್ತು. ಈ ವರ್ಷ ಆರ್‌ಎನ್‌ಆರ್‌ ಬತ್ತಕ್ಕೆ 2800 ರಿಂದ 3 ಸಾವಿರಕ್ಕೆ ಏರಿಕೆಯಾಗಿದೆ. ಈ ಧಾರಣೆ ಇದ್ದರೆ ರೈತರಿಗೆ ಬತ್ತದ ಬೆಳೆ ನಷ್ಟ ಅಗುವುದಿಲ್ಲ.1 ಎಕರೆಯಲ್ಲಿ 20 ರಿಂದ 25 ಕ್ವಿಂಟಾಲ್ ಬತ್ತ ಬೆಳೆಯುತ್ತಿದ್ದೇವೆ. ಆದರೆ, ಹವಾಮಾನ ವೈಪರೀತ್ಯ, ಅಕಾಲಿಕ ಮಳೆಯಿಂದಾಗಿ ಬತ್ತ, ಹುಲ್ಲು ಹಾಳಾಗುತ್ತದೆ ಎಂದು ಪ್ರಗತಿಪರ ಕೃಷಿಕರು ವಾಣಿ ನರೇಂದ್ರ ತಿಳಿಸಿದ್ದಾರೆ. 

Follow Us:
Download App:
  • android
  • ios