ಬೆಂಗಳೂರು(ಏ.17): ತೋಟಗಾರಿಕೆ ಬೆಳೆಗಳನ್ನು ಹೊರ ರಾಜ್ಯಗಳಿಗೆ ಸಾಗಾಣಿಕೆ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿರುವುದರಿಂದ ತೋಟದ ಉತ್ಪನ್ನಗಳನ್ನು ನಾಶ ಮಾಡುವಂತಹ ಸ್ಥಿತಿ ಈಗ ಇಲ್ಲ. ಮಾವಿನ ಹಣ್ಣಿನ ಖರೀದಿ ಸಂಬಂಧ ಗುಜರಾತ್‌ ಹಾಗೂ ಮಹಾರಾಷ್ಟ್ರ ವರ್ತಕರ ಜೊತೆ ಮಾತುಕತೆ ನಡೆಸಿರುವುದರಿಂದ ಕೆಲವೇ ದಿನಗಳಲ್ಲಿ ಉತ್ತಮ ಬೆಲೆ ಸಿಗಲಿದೆ, ಹಾಗಾಗಿ ರೈತರು ಆತಂಕಗೊಳ್ಳಬಾರದು. ಇದು ತೋಟಗಾರಿಕೆ ಸಚಿವ ಕೆ.ಸಿ. ನಾರಾಯಣಗೌಡ ತೋಟದ ಬೆಳೆಗಾರರಿಗೆ ನೀಡಿದ ಅಭಯ.

ಸುವರ್ಣ ನ್ಯೂಸ್ ಜೊತೆ ಸುರೇಶ್ ಕುಮಾರ್; ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಣ್ಣು, ತರಕಾರಿ, ಹೂವು, ರೇಷ್ಮೆ ಬೆಳೆಗಾರರು ಎದುರಿಸುತ್ತಿರುವ ಮಾರುಕಟ್ಟೆ ಸಮಸ್ಯೆ, ಬೆಲೆ ಕುಸಿತ, ಸಾಗಾಟ ಸಮಸ್ಯೆ ಇತ್ಯಾದಿಗಳನ್ನು ಪರಿಹರಿಸುವ ಸಂಬಂಧ ಸುವರ್ಣ ನ್ಯೂಸ್‌ ವಾಹಿನಿ ಗುರುವಾರ ಏರ್ಪಡಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ರಾಜ್ಯದ ರೈತರು, ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು. ಕಾರ್ಯಕ್ರಮದ ಆಯ್ದ ಭಾಗ ಇಲ್ಲಿದೆ.

ತೋಟದ ಬೆಳೆಗಳನ್ನು ಮಾರಾಟ ಮಾಡಲಾಗದೆ ರೈತರು ನಾಶ ಮಾಡುತ್ತಿದ್ದಾರೆ. ಇದಕ್ಕೆ ಏನು ಪರಿಹಾರ?

- ರಾಜ್ಯದ ತೋಟಗಾರಿಕೆ ಉತ್ಪನ್ನಗಳಿಗೆ ಹೊರ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ತೋಟದ ಉತ್ಪನ್ನಗಳನ್ನು ತೆಗೆದುಕೊಂಡು ಹೊರ ರಾಜ್ಯಗಳಿಗೆ ಹೋಗುವ ವಾಹನಗಳಿಗೆ ನಿರ್ಬಂಧವಿಲ್ಲ. ಇದೀಗ ಎಲ್ಲವನ್ನೂ ಸರಿಪಡಿಸಲಾಗಿದ್ದು, ಯಾವುದೇ ರೈತ ತನ್ನ ಉತ್ಪನ್ನ ನಾಶ ಮಾಡುವಂತಹ ಸ್ಥಿತಿ ಇಲ್ಲ.

ರೇಷ್ಮೆ ಬೆಳೆಗಾರರಿಗೆ ಸೂಕ್ತ ಬೆಲೆ ಸಿಗದಂತಾಗಿದೆ. ಅವರ ಸಮಸ್ಯೆಗೆ ಯಾವ ಪರಿಹಾರ ಇದೆ?

- ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆ ಎಲ್ಲ ರೇಷ್ಮೆ ಮಾರುಕಟ್ಟೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅದರೆ, ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ತಕ್ಷಣ ಮಾರುಕಟ್ಟೆಗಳನ್ನು ಪುನರಾರಂಭಿಸಲಾಗಿದೆ. ರಾಜ್ಯದ 41 ರೇಷ್ಮೆ ಮಾರುಕಟ್ಟೆಗಳಲ್ಲಿ ಪ್ರತಿ ದಿನ 120 ಟನ್‌ ಮಾರಾಟವಾಗುತ್ತಿದ್ದು, ಪ್ರತಿ ಕೆ.ಜಿ.ಗೆ 300 ರು.ವರೆಗೂ ಬೆಲೆ ಸಿಗುತ್ತಿದೆ.

ಪ್ರತಿದಿನ ಮಾರಾಟವಾಗುವಂತಹ ಸೊಪ್ಪು, ತರಕಾರಿಗಳನ್ನು ಬೆಳೆಯುವ ರೈತರ ಸಂಕಷ್ಟವನ್ನು ಹೇಗೆ ಪರಿಹರಿಸುತ್ತೀರಿ?

- ಇದಕ್ಕೆ ಶಾಶ್ವತ ಪರಿಹಾರ ಬೇಕಾಗುತ್ತದೆ. ರಾಜ್ಯದ ಪ್ರತಿ ತಾಲೂಕಿನಲ್ಲಿ ಒಂದೊಂದು ಶೀತಲ ಕೇಂದ್ರ ಪ್ರಾರಂಭವಾಗಬೇಕು. ಇದಕ್ಕಾಗಿ ಬಹುರಾಷ್ಟ್ರೀಯ ಕಂಪನಿಗಳು ಮುಂದೆ ಬರುತ್ತಿವೆ. ಮುಂಬರುವ ದಿನಗಳಲ್ಲಿ ಸರ್ಕಾರದ ಸಹಭಾಗಿತ್ವದಲ್ಲಿ ಶೀತಲ ಕೇಂದ್ರಗಳನ್ನು ಪ್ರಾರಂಭಿಸಿ, ಹಣ್ಣು ತರಕಾರಿಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಲಾಗುವುದು.

ಮಾವಿನ ಹಣ್ಣು ಖರೀದಿಗೆ ವರ್ತಕರು ಬರುತ್ತಿಲ್ಲ. ಲಕ್ಷಾಂತರ ರು. ಖರ್ಚು ಮಾಡಿ ಮಾವು ಬೆಳೆದವರ ಕತೆಯೇನು?

- ರಾಜ್ಯ ಸರ್ಕಾರ ಮಹಾರಾಷ್ಟ್ರ ಮತ್ತು ಗುಜರಾತ್‌ ವ್ಯಾಪಾರಿಗಳನ್ನು ಸಂಪರ್ಕಿಸಿ, ಮಾತುಕತೆ ನಡೆಸಿದೆ. ಕೆಲವೇ ದಿನಗಳಲ್ಲಿ ಮಾವಿನ ಹಣ್ಣಿಗೆ ಒಳ್ಳೆಯ ಬೆಲೆ ಬರಲಿದೆ. ಆದ್ದರಿಂದ ಮಾವು ಬೆಳೆಯುವ ರೈತರು ಆತಂಕಕ್ಕೆ ಒಳಗಾಗಬಾರದು.

ಹಣ್ಣು ಮತ್ತು ತರಕಾರಿ ಕಟಾವಿಗೆ ಬೇರೆ ಕಡೆಯಿಂದ ಕೂಲಿ ಕಾರ್ಮಿಕರನ್ನು ಕರೆಸಿಕೊಳ್ಳಲು ಅವಕಾಶ ನೀಡುತ್ತಿಲ್ಲ, ಈ ಸಮಸ್ಯೆಗೆ ಪರಿಹಾರ ಏನು?

- ಸದ್ಯಕ್ಕೆ ಹೊರ ಭಾಗಗಳಿಂದ ಕಾರ್ಮಿಕರನ್ನು ಕರೆತರಲು ಅವಕಾಶವಿಲ್ಲ. ಸ್ಥಳೀಯವಾಗಿ ಕಡಿಮೆ ಸಂಖ್ಯೆಯ ಕೂಲಿಯಾಳುಗಳನ್ನು ಬಳಸಿಕೊಳ್ಳಬಹುದು, ಬೇರೆ ದಾರಿ ಇಲ್ಲ.

ಮೆಣಸಿಕಾಯಿ ಖರೀದಿಗೆ ವರ್ತಕರು ಬರುತ್ತಿಲ್ಲ, ಎಲ್ಲವೂ ಒಣಗುತ್ತಿವೆ. ಖರೀದಿಗೆ ವ್ಯವಸ್ಥೆ ಇಲ್ಲವೇ?

- ಕಾರದ ಪುಡಿಗೆ ಬಳಕೆಯಾಗುವ ಮೆಣಸಿನ ಕಾಯಿಯನ್ನು ರೈತರು ಒಣಗಿಸುವುದು ಉತ್ತಮ. ಆದರೆ, ಚಟ್ನಿಗೆ ಬಳಸುವ ಮೆಣಸಿನಕಾಯಿ ಇದ್ದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಖರೀದಿಗೆ ವ್ಯವಸ್ಥೆ ಮಾಡಲಾಗುವುದು.

ಹೂವು ಬೆಳೆದ ರೈತರಿಗೆ ಪರಿಹಾರ ?

- ಸದ್ಯ ಹೂವಿಗೆ ಮಾರುಕಟ್ಟೆಇಲ್ಲವಾಗಿದೆ. ಆದ್ದರಿಂದ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ.

ಹಾಪ್‌ ಕಾಮ್ಸ್‌ನಲ್ಲಿ ಸದಸ್ಯರಾದ ರೈತರಿಂದ ಮಾತ್ರ ಖರೀದಿ ಮಾಡುತ್ತಿದ್ದು, ಇತರರ ಪಾಡೇನು?

- ಇದೀಗ ಹಾಪ್‌ ಕಾಮ್ಸ್‌ಗೆ ಯಾವುದೇ ರೈತ ತನ್ನ ಉತ್ಪನ್ನ ಮಾರಾಟ ಮಾಡಬಹುದಾಗಿದೆ. ಸದಸ್ಯರೇ ಮಾರಾಟ ಮಾಡಬೇಕು ಎಂಬ ನಿಯಮ ಸಡಿಲಗೊಳಿಸಲಾಗಿದೆ. ಎಲ್ಲ ರೈತರು ತಮ್ಮ ಉತ್ಪನ್ನ ತಂದು ನೀಡಬಹುದು.

ದ್ರಾಕ್ಷಿ ಬೆಳೆಗಾರರು ಬೆಲೆ ಸಿಗದೆ ತಿಪ್ಪೆಗೆ ಸುರಿಯುತ್ತಿದ್ದಾರೆ?

- ದ್ರಾಕ್ಷಿಯನ್ನು ವೈನರಿಗಳಿಗೆ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಎಲ್ಲ ವೈನರಿಗಳನ್ನು ಪ್ರಾರಂಭಿಸುವ ಸಂಬಂಧ ಅಬಕಾರಿ ಸಚಿವರೊಂದಿಗೆ ಮಾತನಾಡಿದ್ದೇನೆ.