Areca Catechu: ಮಕ್ಕಳಂತೆ ಬೆಳೆಸಿದ ಅಡಿಕೆ ಮರಗಳನ್ನು ಅರಣ್ಯ ಇಲಾಖೆಯವರೇ ಕಟ್ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ. ಈ ಘಟನೆಯನ್ನು ರೈತರು ಖಂಡಿಸಿದ್ದಾರೆ. ಜಯರಾಮ್ ಹೆಗಡೆ ತೋಟದಲ್ಲಿಯೇ ಈ ಘಟನೆ ನಡೆದಿದೆ.
ಸಿದ್ದಾಪುರ: ಬೆಳೆ ಇದ್ದಾಗ ಬೆಲೆ ಇರೋದಿಲ್ಲ, ಬೆಲೆ ಇದ್ದಾಗ ಬೆಳೆ ಇರೋದಿಲ್ಲ. ಇನ್ನು ಎಲೆಚುಕ್ಕಿ ರೋಗ, ಬೇರುಳ ರೋಗದ ಮಧ್ಯೆ ಅತಿ ಹೆಚ್ಚು ಮಳೆಯಾದರೆ ಕೊಳೆ ಬಂದು ಅಡಿಕೆ ಇಳುವರಿ ಸಮಸ್ಯೆ ಆಗುವುದು. ಇದಕ್ಕಿಂತ ಹೆಚ್ಚಾಗಿ ಇಂದು ಕೃಷಿ ಮಾಡಲು ಜನರು ಸಿಗೋದು ಕಷ್ಟ, ಸಿಕ್ಕಿದರೂ ಕೂಡ ಅತಿ ಹೆಚ್ಚು ಸಂಬಳ ಕೊಡಬೇಕು. ಹೀಗಾಗಿ ಎಷ್ಟೋ ಜನರು ಕೃಷಿ ಬಿಟ್ಟು ಪೇಟೆ ಸೇರಿದ್ದಾರೆ. ಹೀಗಿರುವಾಗ ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಬಿಳಗಿ ಪಂಚಾಯತ್ ಹಾಗೂ ಕ್ಯಾದಗಿ ಅರಣ್ಯ ವಲಯದೊಳಗಿನ ಗೋಳಿಕೈ ಗ್ರಾಮದ ಜಯರಾಮ ಹೆಗಡೆ ಅವರ ತೋಟದ ಅಡಿಕೆ ಮರಗಳನ್ನು ಕಟ್ ಮಾಡಿದ್ದಾರೆ.
ನಿಜಕ್ಕೂ ನಡೆದಿದ್ದೇನು?
ಜಯರಾಮ್ ಹೆಗಡೆ ಅವರು 30-40 ವರ್ಷಗಳಿಂದ ಅತಿಕ್ರಮಣ ಜಾಗದಲ್ಲಿ ಅಡಿಕೆ ಗಿಡ ನೆಟ್ಟು ಸಾಗುವಳಿ ಮಾಡುತ್ತಿದ್ದರು. ಅಲ್ಲಿ ಸುಮಾರು 120 ಕ್ಕೂ ಹೆಚ್ಚು ಅಡಿಕೆ ಮರಗಳಿದ್ದವು. ಅರಣ್ಯ ಇಲಾಖೆಯವರು ಒಂದಿಷ್ಟು ಜನರನ್ನು ಕರೆದುಕೊಂಡು ಮರಗಳನ್ನು ಕಟ್ ಮಾಡಿದ್ದಾರೆ. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.
ಮಂಗಳವಾರ ಮರಗಳನ್ನು ಕಡಿದ ಸ್ಥಳಕ್ಕೆ ಬುಧವಾರ ಬಿಜೆಪಿ ಮುಖಂಡರೂ ಆಗಿರುವ ಉತ್ತರ ಕನ್ನಡ ಜಿಲ್ಲಾ ರೈತ ಮೋರ್ಚಾದ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ತಂಡವು ಭೇಟಿ ನೀಡಿ, ಈ ಘಟನೆಯನ್ನು ಖಂಡಿಸಿದ್ದಾರೆ.
ಅನಂತಮೂರ್ತಿ ಹೆಗಡೆ ಏನು ಹೇಳಿದರು?
ಅನಂತಮೂರ್ತಿ ಹೆಗಡೆ ಮಾತನಾಡಿದ್ದು, ಜಾಮೀನು ಮಾಲೀಕರು ಇಲ್ಲದ ಟೈಮ್‌ನಲ್ಲಿ ಅರಣ್ಯ ಇಲಾಖೆಯವರು ಬಂದು, ಪೈಶಾಚಿಕ ಕೃತ್ಯ ಮಾಡಿದ್ದಾರೆ. ಅರಣ್ಯ ಉಳಿಸುವ ಅರಣ್ಯ ಇಲಾಖೆಯವರೇ ಈ ರೀತಿಯ ದೌರ್ಜನ್ಯವನ್ನು ಮಾಡಿದರೆ ರೈತರು ಎಲ್ಲಿಗೆ ಹೋಗಬೇಕು? ಮರಗಳನ್ನು ಉಳಿಸುವವರು ಈ ರೀತಿ ಮರಗಳನ್ನು ಕಡಿದು ಹಾಕಿದ್ದಾರೆ. ಅರಣ್ಯ ಇಲಾಖೆಯವರಿಗೆ ಈ ರೀತಿ ಮರಗಳನ್ನು ಕಡಿಯುವ ಅಧಿಕಾರವನ್ನು ನೀಡಿದವರಾರು? ಕಾನೂನು ನಮ್ಮ ರಕ್ಷಣೆಗೆ ಇದೆ. ಅಡಿಕೆ ಮರಗಳನ್ನು ಕಡಿಯಬೇಕು ಎನ್ನುವ ಕಾನೂನು ಎಲ್ಲಿ ಬರೆದುಕೊಂಡಿದೆ? ನಿನ್ನೆ ಮೊನ್ನೆ ಗಿಡ ನೆಟ್ಟು ಏನೇನೋ ಮಾಡಿದರೆ ನೀವು ಈ ರೀತಿ ಕ್ರಮ ಕೈಗೊಂಡರೆ ಓಕೆ. ಉಳಿದ ಮರಗಳನ್ನು, ಸೊಪ್ಪಿನ ಗಿಡಗಳನ್ನು ಬಿಟ್ಟು ಅಡಿಕೆ ಮರಗಳನ್ನು ಮಾತ್ರ ಕಡಿಯುತ್ತೀರಾ ಅಂದರೆ ಯಾವ ಉದ್ದೇಶಕ್ಕೆ ಕಡಿಯುತ್ತೀರಿ?” ಎಂದು ಪ್ರಶ್ನೆ ಮಾಡಿದ್ದಾರೆ.
“ನಿಮಗೆ ಈ ರೀತಿ ಮಾಡಲು ಹೇಳಿದವರು ಯಾರು? ಮೊನ್ನೆ ಮಂಜುನಾಥ್ ನಾಯ್ಕ್ ಎನ್ನುವ ರೈತರು ಕಾಲು ಹಿಡಿದುಕೊಂಡರೂ ಕೂಡ ನೀವು ಮರ ಕಡಿದಿರಿ, ನನ್ನ ಗಮನಕ್ಕೆ ಒಟ್ಟೂ 8 ಪ್ರಕರಣಗಳು ಆಯ್ತು. ರೈತರ ದಿನಾಚರಣೆಗೆ ಈ ರೀತಿಯ ಉಡುಗೊರೆ ಕೊಡುತ್ತಿದ್ದೀರಾ? ಈ ರೀತಿಯ ಕೆಲಸ ಮಾಡಿರುವುದು ಎಷ್ಟು ಮಟ್ಟಿಗೆ ಸರಿ? ಈ ಉದ್ದೇಶದ ಹಿಂದೆ ಯಾರ ಕೈವಾಡವಿದೆ? ನಮ್ಮ ಜಿಲ್ಲೆಯ ರೈತರನ್ನು ಶಾಂತ ಸ್ವಭಾವದರು ಎಂದು ಕಡೆಗಣಿಸಬೇಡಿ, ರೈತರನ್ನು ಒಕ್ಕಲೆಬ್ಬಿಸಬೇಡಿ, ನಾವು ಯಾವ ಉಗ್ರ ಹೋರಾಟ ಮಾಡಲು ಕೂಡ ಹಿಂಜರಿಯುವುದಿಲ್ಲ. ಅದರಿಂದ ಆಗುವ ಪರಿಣಾಮ ಏನಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆಲ್ಲ ನೀವೆ ಹೊಣೆಗಾರರಾಗಬೇಕಾಗುತ್ತದೆ” ಎಂದು ಹೇಳಿದ್ದಾರೆ.
“ಯಾರು ಮರ ಕಡಿದಿದ್ದಾರೋ, ಅದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. 1980 ರ ಪೂರ್ವದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದ ತೋಟ ಇಂದು ಸರ್ವನಾಶವಾಗಿದೆ. ಅಲ್ಲಲ್ಲಿ ಬೇರೆ ಬೇರೆ ಜಾತಿಯ ಮರಗಳನ್ನು ಬಿಟ್ಟು ಅಡಿಕೆ ಮರಗಳನ್ನು ಸಂಪೂರ್ಣ ಕಿತ್ತೆಸೆಯಲಾಗಿದೆ. ಇದು ರೈತರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ. ಸ್ಥಳೀಯ ಶಾಸಕರು, ಅಧಿಕಾರಿಗಳು ಇಲ್ಲಿಗೆ ಬಂದು ಅರಣ್ಯ ಇಲಾಖೆ ಮೇಲಾಧಿಕಾರಿಗಳು ಮಾಡಿದ ಕೆಲಸವನ್ನು ಪರಿಶಿಲಿಸಬೇಕು” ಎಂದು ಆಗ್ರಹಿಸಿದ್ದಾರೆ.
ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂಕೆ ತಿಮ್ಮಪ್ಪ ಕೂಡ ಮಾತನಾಡಿ, ಅರಣ್ಯ ಇಲಾಖೆಯ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುವುದನ್ನೇ ತಮ್ಮ ಮುಖ್ಯ ಗುರಿ ಮಾಡಿಕೊಂಡಿದೆ. ಯಾವ ಕ್ಷಣದಲ್ಲಿ ಅರಣ್ಯ ಇಲಾಖೆಯವರು ಬಂದು ಮರ ಕಡಿಯುತ್ತಾರೋ ಎಂಬ ಆತಂಕದಲ್ಲಿ ನಮ್ಮ ರೈತರು ದಿನವನ್ನು ದೂಡುತ್ತಿದ್ದಾರೆ. ಬೇರೆ ಬೇರೆಯ ದೇಶಗಳಿಂದ ವಲಸೆ ಬಂದವರಿಗೆ, ನಿರಾಶ್ರಿತರಿಗೆ ಸರ್ಕಾರ ಸಾವಿರಾರು ಎಕರೆ ಭೂಮಿಯನ್ನು ನೀಡಲು ರೆಡಿಯಿದೆ. ಆದರೆ ನಮ್ಮ ದೇಶದ ರೈತರ ನೆರವಿಗೆ ನಮ್ಮವರೇ ಬಾರದಿರುವುದು ಬೇಸರದ ವಿಷಯ. ತುಂಬ ದಿನ ಈ ರೀತಿಯ ದೌರ್ಜನ್ಯವು ನಡೆಯುವುದಿಲ್ಲ . ರೈತರ ಪರವಾಗಿ ಯಾವುದೇ ರೀತಿಯ ಹೋರಾಟ ಮಾಡಲು ರೆಡಿಯಿದ್ದೇವೆ" ಎಂದು ಹೇಳಿದರು.
ಅರಣ್ಯ ಇಲಾಖೆಯನ್ನು ಪ್ರಶ್ನೆ ಮಾಡಿದರೆ, “ಕಾನೂನಿನ ಪ್ರಕಾರ, ನ್ಯಾಯಾಲಯದ ಆದೇಶದಂತೆ ಅಡಿಕೆ ಮರಗಳನ್ನು ತೆರವುಗೊಳಿಸಿ ಎಂದು ಮೊದಲೇ ಸೂಚನೆ ಕೊಟ್ಟಿದ್ದಲ್ಲದೆ, ನೋಟಿಸ್ ಕೂಡ ನೀಡಲಾಗಿತ್ತು” ಎಂದು ಹೇಳಿದ್ದಾರೆ.
ಉತ್ತರ ಕನ್ನಡದಲ್ಲಿ ಏನಾಗ್ತಿದೆ?
ಇಲ್ಲಿನವರು ಬಹುತೇಕ ರೈತರು ಅಡಿಕೆ, ಭತ್ತವನ್ನು ಬೆಳೆಯುತ್ತಾರೆ. ಮಾಲಕಿ, ಬೆಟ್ಟ, ಅರಣ್ಯ ಪ್ರದೇಶ ಎಂದು ವಿಂಗಡಣೆಯಾಗಿದೆ. ಕೆಲವರಿಗೆ ಕಾಲು ದಾರಿಯಲ್ಲಿ ಕೂಡ ಹೊಂಡ ಹೊಡೆಯಲಾಗಿದೆ. ಇನ್ನು ಮಾಲ್ಕಿ ಜಾಗಕ್ಕೆ ಹೋಗಲು ಇರುವ ಕಾಲುದಾರಿಯನ್ನು ಮುಚ್ಚಲಾಗಿದೆ ಎಂಬ ಆರೋಪವಿದೆ.



