3 ಸಲ ಬಿತ್ತೀವಿ, ಮಳಿ ಎಲ್ಲ ಸತ್ಯಾನಾಶ ಮಾಡ್ಯದ: ಕೇಂದ್ರದ ನೆರೆ ಅಧ್ಯಯನ ತಂಡದ ಮುಂದೆ ಕಣ್ಣೀರಿಟ್ಟ ರೈತರು
ಗುರುವಾರ ಜಿಲ್ಲೆಯ ಕಲಬುರಗಿ ತಾಲೂಕಿನ ಹೊನ್ನಕಿರಣಗಿ, ಜೇವರ್ಗಿ ಪಟ್ಟಣಕ್ಕೆ ಭೇಟಿ ನೀಡಿ ಬೆಳೆ ಹಾನಿ, ಮಳೆಯಿಂದ ಬಿದ್ದ ಮನೆಗಳನ್ನು ವೀಕ್ಷಿಸಿದ ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್ ನೇತೃತ್ವದ ಆಂತರಿಕ ಸಚಿವಾಲಯದ ತ್ರಿಸದಸ್ಯ ತಂಡ
ಶೇಷಮೂರ್ತಿ ಅವಧಾನಿ
ಕಲಬುರಗಿ(ಸೆ.09): ‘ಮೂರು ಸಾರಿ ಮುರ್ದು ಬಿತ್ತೀವಿ, ಒಂದೇ ಸವ್ನೆ ಮಳಿ ಸುರಿಲಿಕತ್ತದ್ರಿ, ಹಂತ್ಯಾಕಿದ್ದ ದುಡ್ಡೆಲ್ಲ ಬೀಜ- ಗೊಬ್ಬರಕ್ಕ ಹಾಕೀವಿ, ಆದ್ರೂ ಏಳ್ಗಿ ಇಲ್ರಿ. ಈ ಮಳಿ ನಮ್ಮ ಬದುಕು, ಬೆಳೆ ಎಲ್ಲವನ್ನ ಸತ್ಯಾನಾಶ ಮಾಡ್ಯದ. ತಿಂಗಳಾದ್ರೂ ಹೊಲ್ದಾಗ ನಿಂತಿರೋ ನೀರ ಇನ್ನ ಹೋಗವಲ್ದು, ಬಿತ್ತಿದಾಗೊಮ್ಮೆ ಎಕರೆಗೆ 5 ರಿಂದ 6 ಸಾವಿರ ಖರ್ಚ ಮಾಡೀವಿ. ಅದೆಲ್ಲಾ ಈ ಮಳ್ಯಾಗ ಹರ್ಕೋಂಡ ಹೊಂಟದ.’ ಹೀಗೆಂದು ಜಿಲ್ಲೆಯ ರೈತರು ಗುರುವಾರ ತಮ್ಮೂರು ಹಾಗೂ ಹೊಲಗದ್ದೆಗೆ ಭೇಟಿ ನೀಡಿದ್ದ ಕೇಂದ್ರ ಅಧ್ಯಯನ ತಂಡದ ಮುಂದೆ ಗೋಳಾಡುತ್ತ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಕೇಂದ್ರದ ಕೃಷಿ ಹಾಗೂ ರೈತ ಕಲ್ಯಾಣ ಸಚಿವಾಲಯದ ನಿರ್ದೇಶಕ ಡಾ.ಕೆ.ಮನೋಹರನ್ ನೇತೃತ್ವದ ಆಂತರಿಕ ಸಚಿವಾಲಯದ ತ್ರಿಸದಸ್ಯ ತಂಡ ಗುರುವಾರ ಜಿಲ್ಲೆಯ ಕಲಬುರಗಿ ತಾಲೂಕಿನ ಹೊನ್ನಕಿರಣಗಿ, ಜೇವರ್ಗಿ ಪಟ್ಟಣಕ್ಕೆ ಭೇಟಿ ನೀಡಿ ಬೆಳೆ ಹಾನಿ, ಮಳೆಯಿಂದ ಬಿದ್ದ ಮನೆಗಳನ್ನು ವೀಕ್ಷಿಸಿತು.
ನಿತಿನ್ ಗಡ್ಕರಿ-ಬೊಮ್ಮಾಯಿ ಸಭೆ: ಬೆಂಗಳೂರಿನ ರಸ್ತೆ, ಟ್ರಾಫಿಕ್ ಬಗ್ಗೆ ಮಹತ್ವದ ಚರ್ಚೆ
ಎಲ್ಲಾ ಲುಕ್ಸಾನ್:
ಹೊನ್ನಕಿರಣಗಿ ಹೊರ ವಲಯದಲ್ಲಿರುವ ತನ್ನ 1 ಎಕರೆ 30 ಗುಂಟೆ ತೊಗರಿ ಹೊಲದಲ್ಲಿ ನೀರು ತಿಂಗಳಿಂದ ನಿಂತಿದ್ದು ಇನ್ನೂ ಇಂಗಿಲ್ಲವೆಂದು ಹೇಳುತ್ತಲೇ ಹೊಲದ ಒಡತಿ ರಸೂಲ್ ಬಿ ಕಣ್ಣೀರಾದಳು. ‘ಕ್ಯಾ ಕರ್ನಾ ಸಾಬ್, ತೀನ್ ದಫಾ ಹಮ್ ಇಸ್ ಖೇತ್ ಮೇ ಕಾಮ್ ಕಿಯಾ ಹೈ, ಹಮ್ ಖೇತ್ ಮೇ 18 ಹಜಾರ್ ಖರ್ಚ ಕಿಯಾ ಹೈ, ಓ ಸಬ್ ಬಾರೀಷ್ ಮೇ ಹಮ್ ಖೋ ಗಯಾ ಹೈ ಎಂದು ರಸೂಲ್ ಬಿ ಮೂರು ಬಾರಿ ಮುರಿದು ಬಿತ್ತಿದ್ರೂ ಫಾಯ್ದಾ ಇಲ್ಲಾ, ಎಲ್ಲಾ ಲುಕ್ಸಾನ್ ಎಂದು ಕೇಂದ್ರ ತಂಡದ ಮುಂದೆ ವಿವರಿಸಿದಳು.
ರೈತ ವಿನೋದ ಬಸನಾಳಕರ್ ತನಗಿರೋ 10 ಎಕರೆ ಹೊಲದಲ್ಲಿನ ತೊಗರಿ 2 ಬಾರಿ ಹಾಳಾದದ್ದು ಹೇಳಿ ಗೋಳಾಡಿದ. ವೈನಾಗಿ ಬೆಳೆದಿದ್ರ ಎಕರೆಗೆ 6 ಕ್ವಿಂಟಾಲ್‌ನಂತೆ 60 ಕ್ವಿಂಟಾಲ್ ಬೆಳ್ದು 5 ಲಕ್ಷ ಆಗತಿತ್ತು. ಈಗ ನೋಡ್ರಿ ಬಲ್ಯಾಕಿದ್ದ ದುಡ್ಡನ್ನೆಲ್ಲ ಸುರದ್ರೂ ತೊಗರಿ ದಾಣಿನೂ ವಾಪಸ್ ಬರುವಂಗಿಲ್ಲ. ಮಳಿ ಬದುಕೇ ಮೂರಾಬಟ್ಟೆಮಾಡಿದೆ ಎಂದು ಕಣ್ಣೀರಿಟ್ಟ. ಶೇ.80ರಷ್ಟುಬೆಳೆ ಹಾನಿಯಾಗಿದೆ. ಬೆಳೆ ವಿಮೆ ಪರಿಹಾರಕ್ಕೆ ದೂರು ನೀಡುವ ಕಾಲಾವಧಿಯನ್ನು ವಿಸ್ತರಿಸುವಂತೆ ಕೋರಿದೆ.
Karnataka Floods: ನೂರಾರು ಗ್ರಾಮಗಳಿಗೆ ಜಲದಿಗ್ಬಂಧನ
ಕಲಬುರಗಿ ಜಿಲ್ಲೆ ಹೊನ್ನಕಿರಣಗಿಗೆ ಭೇಟಿ ನೀಡಿದ ಕೇಂದ್ರ ತಂಡ, 10 ದಿನದಲ್ಲಿ ವರದಿ
ಬೆಂಗಳೂರು: ರಾಜ್ಯದಲ್ಲಿ ಮಳೆಹಾನಿ ಪರಿಶೀಲನೆಗೆ ಕೇಂದ್ರದ 4 ತಂಡ ಆಗಮಿಸಿದ್ದು, ಸಂಚಾರ ಆರಂಭಿಸಿದೆ. ಕಲಬುರಗಿ, ಧಾರವಾಡ, ಗದಗ, ವಿಜಯಪುರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಿಗೆ ಗುರುವಾರ ಭೇಟಿ ನೀಡಿದೆ. 10 ದಿನದಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದೆ.
ಮಳೆಗೆ 2 ಮಂದಿ ಬಲಿ
ಬೆಂಗಳೂರು: ರಾಜ್ಯದಲ್ಲಿ ಮಳೆಯಬ್ಬರ ಕೊಂಚ ಕಡಿಮೆಯಾಗಿದ್ದು, ಪ್ರವಾಹದ ಆತಂಕ ಇನ್ನೂ ಇಳಿಕೆಯಾಗಿಲ್ಲ. ಮಳೆ ಸಂಬಂಧಿ ಅನಾಹುತಗಳಲ್ಲಿ ಗುರುವಾರ ಇಬ್ಬರು ಸಾವನ್ನಪ್ಪಿದ್ದಾರೆ.