ಎಪಿಎಂಸಿಗಳಲ್ಲೇ ಕೊಳೆಯುತ್ತಿದೆ ತರಕಾರಿ: ಕಂಗಾಲಾದ ರೈತಾಪಿ ವರ್ಗ
ಜನತಾ ಕರ್ಫ್ಯೂ ಹಿನ್ನೆಲೆ ಕೊಳ್ಳುವವರಿಲ್ಲದೇ ಸಂಕಷ್ಟ| ಪರಿಹಾರ ಮಾರ್ಗಕ್ಕೆ ಅಂಗಲಾಚಿದ ಅನ್ನದಾತ| ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿಯಲ್ಲಿ ಹರಾಜ್ ಆಗದೇ ಸಮಸ್ಯೆ| ತರಕಾರಿ ಮಾರಾಟವಾಗದೇ ಸಂಕಷ್ಟಗೀಡಾದ ರೈತರು|
ಬೆಂಗಳೂರು(ಏ.30): ತೀವ್ರವಾಗಿ ಹಬ್ಬುತ್ತಿರುವ ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸುವುದಕ್ಕಾಗಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಜನತಾ ಕರ್ಫ್ಯೂ ಘೋಷಿಸಿದ್ದು, ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ, ವ್ಯಾಪಾರಕ್ಕೆ ಅವಕಾಶ ನೀಡಿದೆ. ಇದರ ಪರಿಣಾಮ ಹರಾಜ್ ಕರೆಯುವವರು ಇಲ್ಲದೇ ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ ಸೇರಿದಂತೆ ವಿವಿಧೆಡೆ ಎಪಿಎಂಸಿಗಳಲ್ಲಿಯೇ ತರಕಾರಿ ಕೊಳೆಯುತ್ತಿದ್ದು, ರೈತರು ಕಣ್ಣೀರು ಸುರಿಸುತ್ತಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 4 ಗಂಟೆ ಮಾತ್ರ ಅವಕಾಶ ನೀಡಲಾಗಿದೆ. ರೈತರೇನೋ ಈ ಸಮಯಕ್ಕೆ ತರಕಾರಿಯನ್ನು ಎಪಿಎಂಸಿ ಮಾರುಕಟ್ಟೆಗೆ ತಲುಪಿಸುತ್ತಿದ್ದಾರೆ. ಆದರೆ, ಸಮಯದ ಅಭಾವದಿಂದ ದೂರ ದೂರದ ನಗರಗಳಿಂದ ಹರಾಜ್‌ಗೆ ಜನ ಬರುತ್ತಿಲ್ಲ. ಇದರಿಂದ ರೈತರು ತಾವು ತಂದ ಟೊಮೆಟೋ, ಆಲೂಗಡ್ಡೆ, ಬೀನ್ಸ್, ಹೂಕೋಲು, ಎಲೆಕೋಸು, ಕ್ಯಾರೆಟ್, ಕ್ಯಾಪ್ಸಿಕಾಂ ಮುಂತಾದ ತರಕಾರಿಗಳು ಮೂಟೆಗಳಲ್ಲಿ ಕೊಳೆಯುತ್ತಿವೆ. ಹೀಗಾಗಿ ಎಪಿಎಂಸಿಗಳಲ್ಲಿ ಖರೀದಿಗೆ ಹೆಚ್ಚಿನ ಸಮಯ ಕೊಡುವಂತೆ ರೈತರು ಒತ್ತಾಯಿಸಿದ್ದಾರೆ.
ಕರ್ಫ್ಯೂ ಘೋಷಣೆ ಬೆನ್ನಲ್ಲೇ ಗಗನಕ್ಕೇರಿದ ತರಕಾರಿ ಬೆಲೆ..!
ಏಷ್ಯಾದಲ್ಲೇ ಅತಿದೊಡ್ಡ ತರಕಾರಿ ಮಾರುಕಟ್ಟೆಯಲ್ಲಿ ಒಂದಾಗಿರುವ ಕೋಲಾರ ಎಪಿಎಂಸಿಗೆ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಸೇರಿದಂತೆ ಬೆಂಗಳೂರಿನಿಂದ ವ್ಯಾಪಾರಸ್ಥರು ಆಗಮಿಸಿ ಖರೀದಿಸುತ್ತಾರೆ. ಆದರೆ, ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಿರುವುದರಿಂದ ವ್ಯಾಪಾರಸ್ಥರು ಬರುತ್ತಿಲ್ಲ. ಇದರಿಂದಾಗಿ ಕಳೆದ ಎರಡು ದಿನಗಳಿಂದ ತಕರಾರಿ ಮೂಟೆಗಳು ಎಪಿಎಂಸಿಗಳಲ್ಲಿಯೇ ಬಿದ್ದಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಇಲ್ಲದ ಕಾರಣಕ್ಕೆ ರೈತರು ಪ್ರಧಾನವಾಗಿ ಹೂವು, ಹಣ್ಣು, ತರಕಾರಿ ಬೆಳೆಯುವುದು ಜಾಸ್ತಿ. ಆದರೆ, ಮಾರುಕಟ್ಟೆಗೆ ಬರುತ್ತಿರುವ ಅಪಾರ ಪ್ರಮಾಣದ ತರಕಾರಿ ಹೊರ ರಾಜ್ಯಗಳಿಗೆ, ಬೆಂಗಳೂರಿಗೆ ಸಮರ್ಪಕವಾಗಿ ರಪ್ತು ಆಗುತ್ತಿಲ್ಲ. ಹೀಗಾಗಿ ಹೂ ಕೋಸ್, ಸೌತೆಕಾಯಿ, ಬೀಟ್‌ರೂಪ್, ಮೂಲಂಗಿ, ಕ್ಯಾರೆಟ್‌ನ ರಾಶಿ ರಾಶಿ ಮೂಟೆಗಳು ಹಾಗೇ ಬಿದ್ದಿವೆ. ಅದೇ ರೀತಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ತರಹೇವಾರಿ ಹೂ ಬೆಳೆದಿರುವ ರೈತರು ಹೂ ಕೀಳದ ತೋಟಗಳಲ್ಲಿ ಬಿಟ್ಟಿದ್ದಾರೆ. ಉಳಿದಂತೆ ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕೂಡ ಗುರುವಾರ ತರಕಾರಿ ಮಾರಾಟವಾಗದೇ ರೈತರು ಸಂಕಷ್ಟಪಟ್ಟಿದ್ದಾರೆ.