Crop Loss Compensation: 2.6 ಲಕ್ಷ ಬೆಳೆ ಹಾನಿ ಪರಿಹಾರ ಅರ್ಜಿ ತಿರಸ್ಕೃತ: ರೈತರ ಪರದಾಟ

*  ಬ್ಯಾಂಕ್‌ ಖಾತೆ- ಆಧಾರ್‌ ಲಿಂಕ್‌ ಆಗದ್ದು, ಹಳೆಯ ಪಹಣಿ ಸಲ್ಲಿಕೆ
*  ಸಮೀಕ್ಷೆ ನಡೆಸದ ಕಾರಣಕ್ಕೆ 10% ಅರ್ಜಿಗಳು ವಜಾ 
*  ಪರಿಹರಿಸಿಕೊಳ್ಳಿ ಎಂದು ಹೇಳದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿವೆ 
 

Farmers Faces Problems Due to 2.6 lakh Crop Loss Compensation Applications Rejected grg

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಡಿ.25): ಬೆಳೆ ಹಾನಿ ಪರಿಹಾರ(Crop Loss Compensation) ಕೋರಿ ರಾಜ್ಯಾದ್ಯಂತ(Karnataka) ರೈತರಿಂದ ಸಲ್ಲಿಕೆಯಾಗಿದ್ದ ಬರೋಬ್ಬರಿ 2.60 ಲಕ್ಷಕ್ಕೂ ಅಧಿಕ ಅರ್ಜಿ ತಿರಸ್ಕಾರವಾಗಿವೆ. ಸಣ್ಣ ಪುಟ್ಟ ತಾಂತ್ರಿಕ ಕಾರಣಕ್ಕೆಲ್ಲಾ ಅರ್ಜಿ ತಿರಸ್ಕರಿಸಲಾಗಿದ್ದು, ಈ ಬಗ್ಗೆ ಅರಿವಿಲ್ಲದ ರೈತರು(Farmers) ಪರಿಹಾರಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸಮಸ್ಯೆಯನ್ನು ರೈತರ ಗಮನಕ್ಕೆ ತಂದು ಪರಿಹರಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗದೆ ಮುಗುಮ್ಮಾಗಿರುವುದು ರೈತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಆಧಾರ್‌ ಕಾರ್ಡ್‌ಗೆ(Aadhar Card) ಬ್ಯಾಂಕ್‌ ಖಾತಾ ಸಂಖ್ಯೆ ಜೋಡಣೆ ಆಗದಿದ್ದರೆ, ಜಮೀನು(Land) ವಿಭಾಗ ಅಥವಾ ಮಾರಾಟವಾಗಿದ್ದು ಹಳೆಯ ಪಹಣಿ ನೀಡಿದ್ದರೆ, ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ(Survey) ನಡೆಸಿ ಬೆಳೆ ಹಾನಿ ಎಂದು ಉಲ್ಲೇಖಿಸಿರದ ಭಾಗಗಳ ರೈತರ ಅರ್ಜಿಗಳು ತಿರಸ್ಕಾರಗೊಂಡಿದೆ ಎಂದು ಮೂಲಗಳು ತಿಳಿಸಿವೆ.

Compensation For Crop loss : ಮುಂಗಾರಲ್ಲಿ ಬೆಳೆ ಪರಿಹಾರ ಪಡೆದಿದ್ರೆ ಹಿಂಗಾರಿಗೆ ಇಲ್ಲ!

ಬೆಳೆ ಹಾನಿ ಪರಿಹಾರ ಪಡೆಯಲು ಪಹಣಿ, ಆಧಾರ್‌ ಕಾರ್ಡ್‌ ಮತ್ತಿತರ ದಾಖಲೆಗಳನ್ನು ನೀಡಿದ್ದ ರೈತರು, ಹಂತ ಹಂತವಾಗಿ ಪರಿಹಾರ ಹಣ ಬಿಡುಗಡೆ ಆಗುತ್ತಿರುವುದರಿಂದ ಅರ್ಜಿ ತಿರಸ್ಕಾರವಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವ ಗೋಜಿಗೇ ಹೋಗುತ್ತಿಲ್ಲ. ಆದರೆ ಗ್ರಾಮ ಲೆಕ್ಕಿಗರು ಅಥವಾ ಗ್ರಾಮ ಸಹಾಯಕರಾದರೂ, ಇಂತಹವರ ಅರ್ಜಿಗಳು ಈ ಕಾರಣಕ್ಕೆ ತಿರಸ್ಕೃತವಾಗಿವೆ, ಪರಿಹರಿಸಿಕೊಳ್ಳಿ ಎಂದು ಹೇಳದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿವೆ ಎಂದು ರೈತ ನಾಯಕರು ಆರೋಪಿಸುತ್ತಾರೆ.

27,85,103 ಅರ್ಜಿ, 2,61,456 ತಿರಸ್ಕೃತ:

ಬೆಳೆ ಹಾನಿ ಪರಿಹಾರಕ್ಕಾಗಿ ಶುಕ್ರವಾರ ಸಂಜೆಯವರೆಗೆ ರಾಜ್ಯಾದ್ಯಂತ ಒಟ್ಟು 27,85,103 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ 2,61,456 ಅರ್ಜಿ ತಿರಸ್ಕೃತವಾಗಿವೆ. 23,73,733 ಅರ್ಜಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡಿದ್ದಾರೆ. ಇನ್ನುಳಿದ ಅರ್ಜಿಗಳ ವಿಲೇ ಕಾರ್ಯ ಮುಂದುವರೆದಿದೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 26209 ಅರ್ಜಿ ತಿರಸ್ಕೃತವಾಗಿವೆ. ನಂತರ ಚಿಕ್ಕಬಳ್ಳಾಪುರ 24846, ಕಲಬುರಗಿಯಲ್ಲಿ 21125 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Flood Effect on Crops : ಚಿಕ್ಕಬಳ್ಳಾಪುರದಲ್ಲಿ ಮಳೆಗೆ ನೆಲಕಚ್ಚಿದ್ದು 72,440 ಹೆಕ್ಟೇರ್‌ ಬೆಳೆ

ಕೆಲ ರೈತರು ಎರಡ್ಮೂರು ವರ್ಷ ಹಳೆಯ ಪಹಣಿಗಳನ್ನು ಪರಿಹಾರಕ್ಕಾಗಿ ಸಲ್ಲಿಸಿದ್ದು, ಗ್ರಾಮ ಲೆಕ್ಕಾಧಿಕಾರಿಗಳು ಡಾಟಾ ಎಂಟ್ರಿ ಮಾಡಲು ಹೊರಟರೆ ಪರಭಾರೆ ಅಥವಾ ವಿಭಜನೆಯಿಂದಾಗಿ ಪಹಣಿಯಲ್ಲಿದ್ದ ಹಿಡುವಳಿ ಕಡಿಮೆಯಾಗಿ ಅರ್ಜಿ ತಿರಸ್ಕೃತವಾಗಿವೆ. ಇಂತಹ ಪ್ರಕರಣಗಳನ್ನು ರೈತರ ಗಮನಕ್ಕೆ ತಂದು ಹೊಸ ಪಹಣಿಗಳನ್ನು ನೀಡಿ ಎಂದು ಮನವರಿಕೆ ಮಾಡಿಕೊಟ್ಟರೆ ಒಂದಷ್ಟುರೈತರು ಪರಿಹಾರದ ಪ್ರಯೋಜನ ಪಡೆಯಬಹುದು.

ಆಧಾರ್‌ ಸಂಖ್ಯೆಗೆ ಬ್ಯಾಂಕ್‌ ಖಾತೆ(Bank Account) ಲಿಂಕ್‌(Link) ಆಗದಿರುವುದರಿಂದಲೂ ಒಂದಷ್ಟು ಅರ್ಜಿಗಳು ತಿರಸ್ಕೃತವಾಗಿವೆ. ಆಧಾರ್‌ ಲಿಂಕ್‌ ಮಾಡಿಸಿಕೊಂಡು ಬರುವಂತೆ ಹೇಳಿದರೂ ಸಮಸ್ಯೆ ಪರಿಹಾರವಾಗುತ್ತದೆ. ಆದರೆ, ರೈತರಿಗೆ ಈ ಮಾಹಿತಿಯನ್ನು ನೀಡದೆ ನೇರವಾಗಿ ಅರ್ಜಿ ತಿರಸ್ಕರಿಸಿ ಅಧಿಕಾರಿಗಳು ಸುಮ್ಮನಾಗುತ್ತಿದ್ದಾರೆ. ಈ ಧೋರಣೆ ಬದಲಾಗಬೇಕು ಎಂದು ರೈತ ನಾಯಕರು ಅಭಿಪ್ರಾಯಪಡುತ್ತಾರೆ.

ಜಿಲ್ಲೆ ತಿರಸ್ಕೃತ ಅರ್ಜಿ

ತುಮಕೂರು 26209
ಚಿಕ್ಕಬಳ್ಳಾಪುರ 24846
ಕಲಬುರಗಿ 21125
ರಾಮನಗರ 18706
ಕೋಲಾರ 16923

ಜಮೀನೊಂದನ್ನು ಮೂರ್ನಾಲ್ಕು ಜನರಿಗೆ ವಿಭಾಗ ಅಥವಾ ಮಾರಾಟ ಮಾಡಿದ್ದು, ಪಹಣಿಯಲ್ಲಿ ಇನ್ನೂ ಹಿಸ್ಸಾ ಆಗದೆ ಜಂಟಿ ಖಾತೆ ಇದ್ದರೆ ಯಾರು ಮೊದಲು ಪರಿಹಾರಕ್ಕೆ ಅರ್ಜಿ ಸಲ್ಲಿಸುತ್ತಾರೋ ಅಂತಹವರ ಅರ್ಜಿ ಸ್ವೀಕಾರ ಆಗುತ್ತಿವೆ. ಉಳಿದವರ ಅರ್ಜಿ ತಿರಸ್ಕೃತವಾಗುತ್ತಿವೆ. ಬೇರೆ ಕಾರಣಗಳಿಂದಾಗಿಯೂ ಅರ್ಜಿ ತಿರಸ್ಕೃತವಾದರೆ ಗಮನಕ್ಕೆ ತಂದರೆ ಸರಿಪಡಿಸುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ ಅಂತ ಚಿಕ್ಕಬಳ್ಳಾಪುರ ರೈತ ಮುಖಂಡ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.  
 

Latest Videos
Follow Us:
Download App:
  • android
  • ios