ಬೆಳೆ ಪರಿಹಾರಕ್ಕಾಗಿ ಡಿಕೆಶಿ ಕಾಲಿಗೆ ಬಿದ್ದ ರೈತ!
ಬೆಳೆ ಪರಿಹಾರಕ್ಕಾಗಿ ರೈತನೋರ್ವ ಸಚಿವ ಡಿ.ಕೆ.ಶಿವಕುಮಾರ್ ಕಾಲಿಗೆ ಬಿದ್ದ ಘಟನೆ ಮಾಗಡಿ ತಾಲೂಕಿನಲ್ಲಿ ನಡೆದಿದೆ
ರಾಮನಗರ[ಜ.11]: ಬೆಳೆ ಪರಿಹಾರ ಕೊಡಿಸುವಂತೆ ರೈತನೋರ್ವ ಸಚಿವ ಡಿ.ಕೆ.ಶಿವಕುಮಾರ್ ಕಾಲಿಗೆ ಬಿದ್ದ ಘಟನೆ ಮಾಗಡಿ ತಾಲೂಕಿನ ಪಣ್ಣಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಸಚಿವ ಡಿಕೆಶಿ ನೇತೃತ್ವದ ತಂಡ ಗುರುವಾರ ರಾಮನಗರ ಜಿಲ್ಲೆಯ ವಿವಿಧೆಡೆ ಬರ ಪರಿಶೀಲನೆ ನಡೆಸಿತು. ಈ ವೇಳೆ ಪಣ್ಣಯ್ಯನದೊಡ್ಡಿಗೆ ತಂಡ ಪರಿಶೀಲನೆಗೆ ಆಗಮಿಸಿದ ವೇಳೆ ಗ್ರಾಮದ ಕಾಂತರಾಜಪ್ಪ ಎಂಬುವರು ಸಚಿವ ಡಿಕೆಶಿ ಕಾಲಿಗೆ ಬಿದ್ದು, ಬೆಳೆ ಪರಿಹಾರ ಕೊಡಿಸುವಂತೆ ಮನವಿ ಮಾಡಿಕೊಂಡರು. ತಕ್ಷಣ ರೈತ ಕಾಲಿಗೆ ಬಿದ್ದಿದ್ದರಿಂದ ಕ್ಷಣಕಾಲ ತಬ್ಬಿಬ್ಬಾದ ಸಚಿವರು, ಪರಿಹಾರ ಒದಗಿಸುವ ಭರವಸೆ ನೀಡಿ ರೈತನನ್ನು ಸಮಾಧಾನ ಮಾಡುವ ಯತ್ನ ನಡೆಸಿದರು.
ಈ ವೇಳೆ ಸಚಿವರಾದ ಶಿವಶಂಕರ ರೆಡ್ಡಿ, ಡಿ.ಸಿ.ತಮ್ಮಣ್ಣ ಹಾಗೂ ವೆಂಕಟರಮಣಪ್ಪ ಇದ್ದರು. ಮುಂಗಾರು ಕೈಕೊಟ್ಟಹಿನ್ನೆಲೆಯಲ್ಲಿ ಕಾಂತರಾಜಪ್ಪ ಬಿತ್ತನೆ ಮಾಡಿದ ರಾಗಿ ಬೆಳೆ ನೆಲ ಕಚ್ಚಿತ್ತು ಎಂದು ತಿಳಿದುಬಂದಿದೆ.