ನಾರಾಯಣ ಹೆಗಡೆ

ಹಾವೇರಿ[ಮಾ.09]: ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ರೈತರ .2 ಲಕ್ಷವರೆಗಿನ ಬೆಳೆಸಾಲ ಮನ್ನಾ ಮಾಡಿದ್ದರೂ ಈವರೆಗೂ ಜಿಲ್ಲೆಯ ಸುಮಾರು 2300 ರೈತರು ದಾಖಲೆಗಳು ಹೊಂದಾಣಿಕೆಯಾಗದೆ ಪ್ರತಿನಿತ್ಯ ಬ್ಯಾಂಕ್‌ಗಳಿಗೆ ಎಡತಾಕುತ್ತಿದ್ದಾರೆ. ಇದರೊಂದಿಗೆ ಸಾಲಮನ್ನಾಗೆ ಅರ್ಹರಾಗಿರುವ 79,020 ಮಂದಿಯಲ್ಲಿ 10 ಸಾವಿರಕ್ಕೂ ಅಧಿಕ ರೈತರಿಗೆ ಸಾಲಮನ್ನಾದ ಹಣ ಬರಬೇಕಿದೆ. ಪರಿಣಾಮ ಬ್ಯಾಂಕಿನಲ್ಲಿರುವ ಬೆಳೆಸಾಲದ ಬಡ್ಡಿ ಮೊತ್ತ ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತಿದ್ದು, ಏನು ಮಾಡುವುದೆಂದು ತೋಚದೆ ರೈತರು ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರ ಸಂಖ್ಯೆಯೇ ಅಧಿಕವಿದ್ದು, ಸಾಲ ಮನ್ನಾ ಯೋಜನೆಯಿಂದ ಅನೇಕ ಬಡ ರೈತರಿಗೆ ಅನುಕೂಲವಾಗಿದೆ. ಒಟ್ಟು 79,020 ರೈತರು ಸಾಲ ಮನ್ನಾಕ್ಕೆ ಅರ್ಹರಾಗಿದ್ದಾರೆ. ಆದರೆ, ಅವರ ಪೈಕಿ ಈ ವರೆಗೆ 68,417 ರೈತರ . 2 ಲಕ್ಷ ಒಳಗಿನ ಸಾಲ ಮನ್ನಾ ಆಗಿದೆ. ಈ ರೈತರಿಗೆ ಸಂಬಂಧಿಸಿದಂತೆ . 456 ಕೋಟಿ ಬಂದಿದೆ. ಇನ್ನೂ 10 ಸಾವಿರ ರೈತರಿಗೆ ಮನ್ನಾ ಹಣ ಬರಬೇಕಿದೆ. ಹಂತ-ಹಂತವಾಗಿ ಸರ್ಕಾರದಿಂದ ಅರ್ಹ ರೈತರಿಗೆ ಸೌಲಭ್ಯ ಸಿಗುತ್ತಿದೆ. ಆದರೆ, 2300 ರೈತರ ದಾಖಲೆಗಳು ಹೊಂದಾಣಿಕೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಮನ್ನಾ ಪ್ರಯೋಜನ ಸಿಗುತ್ತಿಲ್ಲ.

ಸಣ್ಣ ಪುಟ್ಟ ವ್ಯತ್ಯಾಸದಿಂದ ತೊಂದರೆ:

ರೈತರ ಆಧಾರ್‌ ಸಂಖ್ಯೆ, ಪಹಣಿ, ರೇಶನ್‌ ಕಾರ್ಡ್‌, ಸ್ವಯಂ ದೃಢೀಕರಣ ಪತ್ರ ಇತ್ಯಾದಿ ದಾಖಲೆಗಳನ್ನು ನೀಡಿದರೂ ಅದರಲ್ಲಿನ ಅಕ್ಷರ, ವಿಳಾಸ ಇತ್ಯಾದಿ ಸಣ್ಣಪುಟ್ಟವ್ಯತ್ಯಾಸದಿಂದಾಗಿ ಅನೇಕರು ಮನ್ನಾ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅರ್ಹರ ಪಟ್ಟಿಯಲ್ಲಿದ್ದರೂ ದಾಖಲೆ ಹೊಂದಾಣಿಕೆಯಾಗದೆ ಅನೇಕರು ತೊಂದರೆ ಎದುರಿಸುವಂತಾಗಿದೆ. ಇದನ್ನೆಲ್ಲ ಬಿಟ್ಟು ಸಾಲ ನೀಡುವಾಗ ಬ್ಯಾಂಕ್‌ಗಳು ಪಡೆದ ದಾಖಲೆಗಳನ್ನು ಹಾಗೂ ಸಾಲದ ವಿವರದ ಬಗ್ಗೆ ಬ್ಯಾಂಕುಗಳಿಂದಲೇ ವಿವರ ಪಡೆದು ಸರ್ಕಾರ ಮನ್ನಾ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ. ಶನಿವಾರ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ದಾಖಲೆ ನೀಡಿದ 24 ಗಂಟೆಯೊಳಗಾಗಿ ಸಾಲ ಮನ್ನಾ ಹಣ ಜಮಾ ಆಗಲಿದೆ ಎಂದು ಹೇಳಿರುವುದು ರೈತರಿಗೆ ಸ್ವಲ್ಪ ನೆಮ್ಮದಿ ತಂದಿದೆ.

ಬ್ಯಾಂಕ್‌ ಕಾರ್ಯವೈಖರಿಗೆ ಅಸಮಾಧಾನ:

ಸಾಲ ಮನ್ನಾದ ಬಳಿಕ ಬ್ಯಾಂಕ್‌ಗಳು ಅನುಸರಿಸುತ್ತಿರುವ ಕಾರ್ಯವೈಖರಿ ಬಗ್ಗೆ ಜಿಲ್ಲೆಯ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದಿಂದ ಬರುವ ಸಾಲ ಮನ್ನಾ ಮೊತ್ತವನ್ನು ಯಾವುದೇ ರಿಯಾಯಿತಿ ಇಲ್ಲದೇ ತುಂಬಿಸಿಕೊಳ್ಳುತ್ತಿದ್ದಾರೆ. ಬೇರೆಯವರಿಗಾದರೆ ರಿಯಾಯಿತಿ ನೀಡಿ ಒನ್‌ ಟೈಂ ಸೆಟ್‌್ಲಮೆಂಟ್‌ ಮಾಡಿಕೊಳ್ಳುತ್ತಾರೆ ಎಂಬ ಆರೋಪವಿದೆ. ಸರ್ಕಾರ ಗರಿಷ್ಠ . 2 ಲಕ್ಷ ಮನ್ನಾ ಹಣ ನೀಡುತ್ತಿದ್ದು, ಸಂಬಂಧಪಟ್ಟರೈತನದ್ದು ಅದಕ್ಕಿಂತ ಹೆಚ್ಚಿನ ಸಾಲವಿದ್ದರೆ ಯಾವುದೇ ರಿಯಾಯಿತಿ ನೀಡದೆ ಇದುವರೆಗಿನ ಅಸಲು, ಬಡ್ಡಿ ಸಮೇತ ಲೆಕ್ಕ ಹಾಕಿ ತುಂಬಿಸಿಕೊಳ್ಳುತ್ತಾರೆ. ಸಾಲ ಮನ್ನಾ ಯೋಜನೆಯಲ್ಲಿ ಪ್ರಯೋಜನ ಪಡೆದ ರೈತರಿಗೂ ಬಡ್ಡಿಯಲ್ಲಿ ರಿಯಾಯಿತಿ ಕೊಡುವಂತೆ ಕೇಳಿದರೂ ಬ್ಯಾಂಕ್‌ ಸಿಬ್ಬಂದಿ ನಿರಾಕರಿಸುತ್ತಾರೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದ್ದಾರೆ.

ಇದರಿಂದ ಸರ್ಕಾರ ಸಾಲ ಮನ್ನಾ ಮಾಡಿದ್ದರಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಬದಲಾಗಿ ಬ್ಯಾಂಕುಗಳಿಗೆ ಅನುಕೂಲವಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ.