ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ತೀವ್ರ ವಾಗ್ದಾಳಿ ನಡೆದಿದೆ. ರಾಜ್ಯ ಸರ್ಕಾರವೇ ದರ ಏರಿಕೆಗೆ ಒತ್ತಡ ಹೇರಿ ಈಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಸೂರ್ಯ ಆರೋಪಿಸಿದರು.
ಬೆಂಗಳೂರು (ಫೆ.7): ಬೆಂಗಳೂರಿನ ಮೆಟ್ರೋ ದರ ಏರಿಕೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯ ಸರ್ಕಾರ ಸತ್ಯ ಮರೆಮಾಚಿ ಪದೇ ಪದೇ ಸುಳ್ಳು ಹೇಳುತ್ತಿದೆ. ಎಂಟು ತಿಂಗಳ ಹಿಂದೆ ಅಷ್ಟೇ ಶೇ. 71ರಷ್ಟು ದರ ಏರಿಸಿ ಜನರಿಗೆ ಬರೆ ಎಳೆದಿದ್ದರು, ಆ ಹೊಡೆತದಿಂದ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೆ ಬೆಲೆ ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ನಮ್ಮ ಮೆಟ್ರೋ ದೇಶದಲ್ಲೇ ಅತಿ ದುಬಾರಿ ಮೆಟ್ರೋ ಎಂಬ ಕುಖ್ಯಾತಿಗೆ ಪಾತ್ರವಾಗಿದೆ' ಎಂದು ಆಕ್ರೋಶ ಹೊರಹಾಕಿದರು.
ದರ ನಿಗದಿ ಸಮಿತಿ ರಚನೆಯ ಅಸಲಿ ಸತ್ಯ ಬಿಚ್ಚಿಟ್ಟ ತೇಜಸ್ವಿ ಸೂರ್ಯ
'ಬೆಲೆ ಏರಿಕೆ ನಮ್ಮ ಕೈಯಲ್ಲಿಲ್ಲ, ಕೇಂದ್ರದ ಕೈಯಲ್ಲಿದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿರುವುದು ಶುದ್ಧ ಸುಳ್ಳು. ರಾಜ್ಯ ಸರ್ಕಾರವೇ ನಾಲ್ಕು ಬಾರಿ ಪತ್ರ ಬರೆದು ಒತ್ತಡ ಹಾಕಿದ ನಂತರವಷ್ಟೇ 'ಫೇರ್ ಫಿಕ್ಸೇಷನ್ ಕಮಿಟಿ' (ದರ ನಿಗದಿ ಸಮಿತಿ) ರಚಿಸಲಾಗಿದೆ. ಕೇಂದ್ರ ತನಗೆ ಬೇಕು ಅಂತ ಈ ಕಮಿಟಿ ಮಾಡಿಲ್ಲ. ಕೂಡಲೇ ದರ ಹೆಚ್ಚಳ ಮಾಡಬೇಕು, ನಮಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು ರಾಜ್ಯ ಸರ್ಕಾರವೇ ಪತ್ರ ಬರೆದಿದೆ. ಅಷ್ಟೇ ಅಲ್ಲದೆ, ಪ್ರತಿ ವರ್ಷ ದರ ಹೆಚ್ಚಳ ಮಾಡಬೇಕು ಎಂದು ರಾಜ್ಯ ಸರ್ಕಾರದ ಅಧಿಕಾರಿಗಳೇ ಈ ಸಮಿತಿಗೆ ಸಲಹೆ ನೀಡಿದ್ದಾರೆ. ಇಷ್ಟೆಲ್ಲಾ ಮಾಡಿ ಈಗ ಕೇಂದ್ರದ ಮೇಲೆ ಬೊಟ್ಟು ಮಾಡುವುದು ಸರಿಯಲ್ಲ' ಎಂದು ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ದಿವಾಳಿಯಾಗಿದೆ ಎಂದು ಆರೋಪಿಸಿದ ಸಂಸದರು, 'ಈ ಹಿಂದೆ ಬಿಎಂಆರ್‌ಸಿಎಲ್‌ಗೆ ರಾಜ್ಯ ಸರ್ಕಾರ ನೀಡುತ್ತಿದ್ದ 'ಶಾಡೋ ಕ್ಯಾಶ್ ಸಪೋರ್ಟ್' (ಸಾಲದ ಬಡ್ಡಿ ಹೊರೆ ತಪ್ಪಿಸಲು ನೀಡುವ ಹಣ) ಅನ್ನು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಿಲ್ಲಿಸಿದೆ. ರಾಜ್ಯ ಮತ್ತು ಕೇಂದ್ರದ ನಡುವಿನ ಎಂಓಯು ಪ್ರಕಾರ, ಬಿಎಂಆರ್‌ಸಿಎಲ್ ಕರ್ತವ್ಯವೇ ದರ ನಿಗದಿ ಮಾಡುವುದಾಗಿದೆ. ಆದರೆ ರಾಜ್ಯ ಸರ್ಕಾರ ಆರ್ಥಿಕ ಸಹಾಯ ನಿಲ್ಲಿಸಿ ಈಗ ಜನಸಾಮಾನ್ಯರ ಮೇಲೆ ಹೊರೆ ಹೊರಿಸುತ್ತಿದೆ. ಇದು ಬಡವರಿಗೆ ಮಾಡುತ್ತಿರುವ ಅನ್ಯಾಯ ಎಂದು ಕಿಡಿಕಾರಿದರು.
ಸಿಎಂ, ಡಿಸಿಎಂಗೆ ಸವಾಲು: ಹೋರಾಟದ ಎಚ್ಚರಿಕೆ
ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ನಾನು ಪ್ರಶ್ನೆ ಮಾಡುತ್ತಿದ್ದೇನೆ, ಸೋಮವಾರದಿಂದ ದರ ಹೆಚ್ಚಳ ಮಾಡಲು ಹೊರಟಿದ್ದನ್ನು ಕೂಡಲೇ ನಿಲ್ಲಿಸಬೇಕು. ದರ ಮರು ಪರಿಷ್ಕರಣೆ ಮಾಡಲು ಹೊಸ ಕಮಿಟಿ ರಚನೆಗೆ ಪತ್ರ ಬರೆಯಿರಿ. ತಮಿಳುನಾಡಿನ ಚೆನ್ನೈನಲ್ಲಿ ದರ ಏರಿಕೆಯಾಗಿಲ್ಲ, ಅಲ್ಲಿ ಕೇಂದ್ರ ಸರ್ಕಾರ ದರ ಏರಿಸಿಲ್ಲವೇ? ಕರ್ನಾಟಕದಲ್ಲಿ ಮಾತ್ರ ಯಾಕೆ? ರಾಜಕೀಯ ಲಾಭಕ್ಕಾಗಿ ಕೇಂದ್ರದ ಮೇಲೆ ಗೂಬೆ ಕೂರಿಸುವುದನ್ನ ನಿಲ್ಲಿಸಿ. ದರ ಏರಿಕೆ ನಿಲ್ಲಿಸದಿದ್ರೆ ನಾಳೆಯಿಂದ ನಾವು ಮೆಟ್ರೋ ನಿಲ್ದಾಣಗಳಲ್ಲಿ ಕಪ್ಪು ಪಟ್ಟಿ ಧರಿಸಿ ಹೋರಾಟ ಮಾಡುತ್ತೇವೆ. ನಮ್ಮ ತೆರಿಗೆ ನಮ್ಮ ಹಕ್ಕು ಅಂತ ದೆಹಲಿಗೆ ಹೋಗುವ ನೀವು, ಈ ಬಗ್ಗೆ ಒಂದು ನಿಯೋಗ ತೆಗೆದುಕೊಂಡು ಹೋಗಿ ಮಾತನಾಡಲು ಯಾಕೆ ಸಾಧ್ಯವಿಲ್ಲ?' ಎಂದು ಸೂರ್ಯ ಪ್ರಶ್ನಿಸಿದರು.
'ನಾವೇನು ಅನಕ್ಷರಸ್ಥರಾ?: ಸಿದ್ದರಾಮಯ್ಯ ವಿರುದ್ಧ ಸಂಸದ ಗರಂ
ಮಾಧ್ಯಮಗಳ ಮುಂದೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರವೇ ದರ ನಿಗದಿ ಮಾಡುತ್ತದೆ ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಂಸದ ತೇಜಸ್ವಿ ಸೂರ್ಯ, 'ನಾವೇನು ಅನಕ್ಷರಸ್ಥರಾ? ನಮಗೆ ಓದಲು ಬರುವುದಿಲ್ಲವೇ? ಕೋರ್ಟ್ ಆದೇಶದಲ್ಲಿ ಏನಿದೆ ಎಂಬುದು ಗೊತ್ತಾಗುವುದಿಲ್ಲವೇ? ಮಾಧ್ಯಮಗಳ ಮುಂದೆ ಬಂದು ಹೀಗೆ ಸುಳ್ಳು ಹೇಳುತ್ತೀರಲ್ಲ, ನಿಮಗೆ ನಾಚಿಕೆ ಆಗಲ್ವಾ? ಏನು ತಿಂತೀರಿ ನೀವು?' ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಜನಸಾಮಾನ್ಯರು ಈ ಬಗ್ಗೆ ಜಾಗೃತವಾಗಿ ಸಿಎಂ ಮತ್ತು ಡಿಸಿಎಂ ಅವರಿಗೆ ದರ ಕಡಿಮೆ ಮಾಡಲು ಆಗ್ರಹಿಸಬೇಕು ಎಂದು ಅವರು ಕರೆ ನೀಡಿದರು.
ಸಿದ್ದರಾಮಯ್ಯ ಅವರ ಸದ್ಯದ ಪ್ರತಿಕ್ರಿಯೆ:
ಸಂಸದರ ಈ ಎಲ್ಲಾ ಆರೋಪಗಳ ನಡುವೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, 'ಕೇಂದ್ರ ಸರ್ಕಾರ ನೇಮಕ ಮಾಡಿದ ಸಮಿತಿಯಿದೆ, ಆ ಸಮಿತಿಯವರೇ ದರ ನಿಗದಿ ಮಾಡುತ್ತಾರೆ' ಎಂದು ಹೇಳುವ ಮೂಲಕ ದರ ಏರಿಕೆಯ ಹೊಣೆಯನ್ನು ಕೇಂದ್ರದತ್ತಲೇ ತಿರುಗಿಸಿ ಅಲ್ಲಿಂದ ನಿರ್ಗಮಿಸಿದರು.



