ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ವಾಕ್ಸಮರ ನಡೆದಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ದರ ಏರಿಕೆಗೆ ಕೇಂದ್ರವನ್ನು ಹೊಣೆ ಮಾಡಿ ರಾಜ್ಯ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು(ಫೆ.7) ಸಿಲಿಕಾನ್ ಸಿಟಿಯ ಜೀವನಾಡಿ ಮೆಟ್ರೋ ದರ ಏರಿಕೆ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ. ಬೆಂಗಳೂರಿನಲ್ಲಿಂದು ಮಾತನಾಡಿದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 'ರಾಜ್ಯ ಸರ್ಕಾರ ತಾವು ಸತ್ಯವಂತರು ಎಂದು ಹೇಳಿಕೊಳ್ಳುತ್ತಲೇ ಜನರಿಗೆ ಸತತವಾಗಿ ಸುಳ್ಳು ಹೇಳುತ್ತಿದೆ. ಮೆಟ್ರೋ ಯೋಜನೆಯಲ್ಲಿ ಕೇಂದ್ರದ ಪಾಲು ಕೇವಲ 20% ಎಂದು ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ. ಆದರೆ ಅಧಿಕಾರ ಚಲಾಯಿಸುವಾಗ ಕೇಂದ್ರದ ಮೇಲೆ ದೂಷಣೆ ಮಾಡುವುದು ಇವರ ಚಾಳಿಯಾಗಿದೆ' ಎಂದು ಕಿಡಿಕಾರಿದರು.

Add Asianetnews Kannada as a Preferred SourcegooglePreferred

ದರ ನಿಗದಿ ಅಧಿಕಾರ ಯಾರದ್ದು? ಎಚ್‌ಡಿಕೆ ಪ್ರಶ್ನೆ

ಮೆಟ್ರೋ ದರ ಏರಿಕೆಯ ಹೊಣೆಯನ್ನು ಕೇಂದ್ರದ ಮೇಲೆ ಹಾಕುತ್ತಿರುವ ಸರ್ಕಾರದ ನೀತಿಯನ್ನು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಇತರ ರಾಜ್ಯಗಳಲ್ಲಿ ಮೆಟ್ರೋ ದರ ಏಕೆ ಏರಿಕೆಯಾಗುತ್ತಿಲ್ಲ? ಇಲ್ಲಿ ಮಾತ್ರ ಯಾಕೆ ಈ ಪರಿಸ್ಥಿತಿ? ರಾಜ್ಯ ಸರ್ಕಾರದ ಪಾಲು ಹೆಚ್ಚಿದೆ ಎಂದ ಮೇಲೆ ದರ ನಿಗದಿಪಡಿಸುವ ಅಧಿಕಾರ ಇರುವುದು ಯಾರಿಗೆ?' ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಗಳ ಜನವಿರೋಧಿ ನೀತಿಗಳು ಮತ್ತು ತಪ್ಪು ನಿರ್ಣಯಗಳನ್ನು ಮುಚ್ಚಿಟ್ಟುಕೊಳ್ಳಲು ಪ್ರತಿ ಬಾರಿಯೂ ಕೇಂದ್ರವನ್ನು ಎಳೆದು ತರುತ್ತಿರುವುದು ಖಂಡನೀಯ ಎಂದರು. ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಗ್ಯಾರೆಂಟಿ ಮತ್ತು ಆರ್ಥಿಕ ಶಕ್ತಿಯ ಭ್ರಮೆ: ಸರ್ಕಾರಕ್ಕೆ ಟಾಂಗ್

ಜನರಿಗೆ ಆರ್ಥಿಕ ಶಕ್ತಿ ತುಂಬಿದ್ದೇವೆ ಎಂದು ಸರ್ಕಾರ ಪದೇ ಪದೇ ಜಾಹೀರಾತು ನೀಡುತ್ತಿದೆ. ತಲಾ ಆದಾಯ ಹೆಚ್ಚಾಗಿದೆ ಎಂಬುದು ಸರ್ಕಾರದ ಭಾವನೆ ಇರಬಹುದು. ಹಾಗಾಗಿಯೇ ದರ ಎಷ್ಟು ಏರಿಕೆ ಮಾಡಿದರೂ ಜನ ಸಂತೋಷದಿಂದ ಕೊಡುತ್ತಾರೆ ಎಂಬ ಭ್ರಮೆಯಲ್ಲಿ ಮುಖ್ಯಮಂತ್ರಿಗಳಿದ್ದಾರೆ' ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. ಗ್ಯಾರೆಂಟಿಗಳ ಹೆಸರಿನಲ್ಲಿ ಜನರ ಕೈಗೆ ಒಂದಿಷ್ಟು ಹಣ ಕೊಟ್ಟು, ಇನ್ನೊಂದೆಡೆ ದರ ಏರಿಕೆಯ ಮೂಲಕ ಅವರಿಂದಲೇ ಹಣ ವಾಪಸ್ ಕಿತ್ತುಕೊಳ್ಳುವ ತಂತ್ರಗಾರಿಕೆಯನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಎಚ್ಚರಿಸಿದರು.

ಯತೀಂದ್ರ ಹೇಳಿಕೆಗೆ ಕಿಮ್ಮತ್ತಿಲ್ಲ: ನನ್ನ ಕೆಲಸ ನನಗಿದೆ

ಇದೇ ವೇಳೆ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಕುಮಾರಸ್ವಾಮಿ ನಿರಾಕರಿಸಿದರು. 'ಅದು ಅವರ ಪಕ್ಷಕ್ಕೆ ಸೇರಿದ ವಿಚಾರ, ಅದರ ಬಗ್ಗೆ ಮಾತನಾಡಲು ನನಗೇನು ಕೆಲಸ? ಸಿಎಂ ಸ್ಥಾನದ ಬಗ್ಗೆ ಅವರು ಏನು ಬೇಕಾದರೂ ನಿರ್ಧಾರ ಮಾಡಿಕೊಳ್ಳಲಿ, ನನಗೆ ನೂರೆಂಟು ಕೆಲಸಗಳಿವೆ, ಕಾಂಗ್ರೆಸ್‌ನ ಆಂತರಿಕ ಗೊಂದಲಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು. 

YouTube video player