ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಗಂಧದಗುಡಿ’ ಚಿತ್ರವನ್ನು ಪ್ರೇಕ್ಷಕರು ಮೊದಲ ದಿನ ಅದ್ಧೂರಿಯಾಗಿ ಸ್ವಾಗತಿಸಿದ್ದು, ಸಿನಿಮಾ ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳು ಹೌಸ್‌ಫುಲ್‌ ಬೋರ್ಡು ಕಂಡವು. 

ಬೆಂಗಳೂರು (ಅ.29): ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಗಂಧದ ಗುಡಿ’ ಚಿತ್ರವನ್ನು ಪ್ರೇಕ್ಷಕರು ಮೊದಲ ದಿನ ಅದ್ಧೂರಿಯಾಗಿ ಸ್ವಾಗತಿಸಿದ್ದು, ಸಿನಿಮಾ ಬಿಡುಗಡೆಯಾದ ಎಲ್ಲ ಚಿತ್ರಮಂದಿರಗಳು ಹೌಸ್‌ಫುಲ್‌ ಬೋರ್ಡು ಕಂಡವು. ಬೆಂಗಳೂರು ಸೇರಿದಂತೆ ಸಿನಿಮಾ ತೆರೆ ಕಂಡ ರಾಜ್ಯದ 250ಕ್ಕೂ ಹೆಚ್ಚು ಚಿತ್ರಮಂದಿರಗಳ ಮುಂದೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ ಅಭಿಮಾನಿಗಳು ಕೇಕ್‌ ಕತ್ತರಿಸಿ ಸಂಭ್ರಮಿಸುವ ಜತೆಗೆ ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಅನ್ನದಾನ ಮಾಡಿದರು. ಕನ್ನಡ ಬಾವುಟಗಳೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿದರು. ಚಿತ್ರಮಂದಿರಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಅಭಿಮಾನಿಯೊಬ್ಬ ಬೆಂಗಳೂರಿನ ಪ್ರಮೋದ್‌ ಚಿತ್ರಮಂದಿರಕ್ಕೆ ಕುದುರೆ ಮೇಲೆ ಬಂದು ಚಿತ್ರವನ್ನು ವೀಕ್ಷಿಸಿದ್ದು ಎಲ್ಲರ ಗಮನ ಸೆಳೆಯಿತು.

ಮಕ್ಕಳೊಂದಿಗೆ ಸಿನಿಮಾ ನೋಡಲು ಬಂದವರು ಪುನೀತ್‌ ಅವರ ಪೋಸ್ಟರ್‌ಗಳಿಗೆ ಕೈಮುಗಿದು ಚಿತ್ರಮಂದಿರಗಳಿಗೆ ಪ್ರವೇಶಿಸಿದರು. ಕೆಲವು ಚಿತ್ರಮಂದಿರಗಳ ಮುಂದೆ ಅಭಿಮಾನಿಗಳಿಂದ ಪ್ರೇಕ್ಷಕರಿಗೆ ಗಿಡಗಳನ್ನು ವಿತರಿಸುವ ಮೂಲಕ ‘ಗಂಧದಗುಡಿ’ ಚಿತ್ರವನ್ನು ಖುಷಿಯಿಂದ ಬರಮಾಡಿಕೊಳ್ಳುವ ಜತೆಗೆ ಪುನೀತ್‌ ಅವರ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಲಾಯಿತು. ಬಹುತೇಕ ಎಲ್ಲ ಚಿತ್ರಮಂದಿರಗಳ ಮುಂದೆಯೂ ಡಾ.ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರನ್ನೊಳಗೊಂಡ ಕಟೌಟ್‌ಗಳು ರಾರಾಜಿಸಿದವು.

ಕರ್ನಾಟಕದೆಲ್ಲೆಡೆ ‘ಗಂಧದಗುಡಿ’ ಸಂಭ್ರಮ: ಅಭಿಮಾನಿಗಳಿಂದ ಪುನೀತ್‌ ಕಟೌಟ್‌ಗೆ ಹಾಲಿನ ಅಭಿಷೇಕ

ಮೊದಲ ದಿನ ಬೆಳಗ್ಗೆ 6 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭವಾಗಿದ್ದು, ಮಲ್ಟಿಪ್ಲೆಕ್ಸ್‌ ಸೇರಿದಂತೆ ಪ್ರತಿ ಚಿತ್ರಮಂದಿರದಲ್ಲೂ 6ರಿಂದ 7 ಪ್ರದರ್ಶನಗಳನ್ನು ಕಂಡಿದೆ. ಮೊದಲ ದಿನ ರಾಜ್ಯದ 175ಕ್ಕೂ ಹೆಚ್ಚು ಚಿತ್ರಮಂದಿರಗಳು ಹೌಸ್‌ ಫುಲ್‌ ಆಗಿದ್ದವು. ಬೆಂಗಳೂರು ನಗರದಲ್ಲಿ ಮೊದಲ ದಿನವೇ 300 ಶೋ ಸೇರಿ ರಾಜ್ಯಾದ್ಯಂತ 1800 ಶೋಗಳನ್ನು ಕಾಣುವ ಮೂಲಕ ‘ಗಂಧದಗುಡಿ’ ಹೊಸ ದಾಖಲೆ ಬರೆದಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಕುಟುಂಬ ಸಮೇತರಾಗಿ ಆಗಮಿಸಿದ್ದ ರಾಘವೇಂದ್ರ ರಾಜ್‌ಕುಮಾರ್‌ ಅವರು ಸಿನಿಮಾ ವೀಕ್ಷಣೆಯ ನಂತರ ಅಭಿಮಾನಿಗಳ ಜತೆ ಸೇರಿ ಚಿತ್ರಮಂದಿರದ ಮುಂದೆ ಡ್ಯಾನ್ಸ್‌ ಮಾಡಿ ಸಂಭ್ರಮಿಸಿದರು.

Gandhada Gudi ಸಿನಿಮಾ ಬಗ್ಗೆ ಪುನೀತ್ ಪತ್ನಿ ಮಾತು: ಮೊದಲ ಬಾರಿಗೆ ಅಪ್ಪು ಬಗ್ಗೆ ಸಂದರ್ಶನ ನೀಡಿದ ಅಶ್ವಿನಿ

ಇಂದು ಪುನೀತ್‌ ಮೊದಲ ವರ್ಷದ ಪುಣ್ಯಸ್ಮರಣೆ: ನಟ ಪುನೀತ್‌ರಾಜ್‌ಕುಮಾರ್‌ ಅವರು ಅಗಲಿ ಅ.29ಕ್ಕೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಅ.29ರಂದು ಪುನೀತ್‌ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ನಡೆಯಲಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ಸಾರಥ್ಯದಲ್ಲಿ 24 ಗಂಟೆಗಳ ಕಾಲ ಗೀತ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಟರಾದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಅವರು ಈ ಗೀತ ನಮನ ಕಾರ್ಯಕ್ರಮದಲ್ಲಿ ಹಾಡಲಿದ್ದಾರೆ. ಪುಣ್ಯ ಸ್ಮರಣೆಯ ಅಂಗವಾಗಿ ಕಂಠೀರವ ಸ್ಟುಡಿಯೋವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ.