ಪುನೀತ್ ಸಾವಿನ ಸುದ್ದಿ ಕೇಳಿ ಒಡೆದು ಹೋಯ್ತು ಅಭಿಮಾನಿಯ ಹೃದಯ
* ಪುನೀತ್ ರಾಜಕುಮಾರ್ ನಿಧನ ವಿಷಯ ಕೇಳಿ ಅಭಿಮಾನಿಗೆ ಹೃದಯಾಘಾತ
* ಚಾಮರಾಜನಗರ ಜಿಲ್ಲೆ ಹನೂರು ತಾಲೋಕು ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದಲ್ಲಿ ಘಟನೆ
* ಮುನಿಯಪ್ಪ(29) ಹೃದಯಾಘಾತದಿಂದ ಮೃತಪಟ್ಟ ಅಭಿಮಾನಿ
ಚಾಮರಾಜನಗರ, (ಅ.29):ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Puneeth Rajkumar) ನಿಧನದ ಸುದ್ದಿ ಕೇಳಿ ಅಭಿಮಾನಿಯೋರ್ವ (Fan) ಹೃದಯಾಘಾತದಿಂದ (Heart Attack) ಮೃತಪಟ್ಟಿರುವ ಘಟನೆ ಚಾಮರಾಜನಗರ (chamarajanagar) ಹನೂರು ತಾಲೂಕಿನ ಮರೂರು ಗ್ರಾಮದಲ್ಲಿ ಸಂಭವಿಸಿದೆ.
ತಾಲೂಕಿನ ಪೊನ್ನಾಚಿ ಸಮೀಪದ ಮರೂರು ಗ್ರಾಮದ ಮುನಿಯಪ್ಪ (30) ಮೃತ ಅಭಿಮಾನಿ. ಇಂದು (ಅ.29) ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಪುನೀತ್ ರಾಜ್‍ಕುಮಾರ್ ನಿಧನದ ಸುದ್ದಿ ತಿಳಿದು ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾನೆ.
ಪುನೀತ್ ನಿಧನ: ನಾಳೆ (ಅ.30) ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ
ಕೂಡಲೇ ಗ್ರಾಮಸ್ಥರು ಚಿಕಿತ್ಸೆಗಾಗಿ ಮರೂರು ಗ್ರಾಮದಿಂದ ಪೊನ್ನಾಚಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರುವ ಮಾರ್ಗಮಧ್ಯೆದಲ್ಲಿಯೇ ಮೃತಪಟ್ಟಿದ್ದಾನೆ.
ಮುನಿಯಪ್ಪ ಬಾಲ್ಯದಿಂದಲೂ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ. ಪುನೀತ್ ರಾಜ್ ಕುಮಾರ್ ಅವರ ಎಲ್ಲಾ ಚಿತ್ರಗಳನ್ನು ವೀಕ್ಷಿಸುತ್ತಿದ್ದನು.
ಮೃತ ಮುನಿಯಪ್ಪ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾನೆ. ಮುನಿಯಪ್ಪನ ಅಗಲಿಕೆಗೆ ಆತನ ಸ್ನೇಹಿತರು, ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
ಜಿಮ್ ಮಾಡುವ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ನಟ ಪುನೀತ್ ರಾಜಕುಮಾರ್ರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಅಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಇದರಿಂದ ಕನ್ನಡ ಚಿತ್ರರಂಗ, ಕನ್ನಡ ನಾಡು ಅಪಾರ ನಷ್ಟಕ್ಕೊಳಗಾಗಿದ್ದು, ಅಭಿಮಾನಿಗಳು ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ತಂದೆಯ ಹಾದಿಯಲ್ಲೇ ಸಾಗಿರುವ ಪುನೀತ್, ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಪುನೀತ್ ನಿಧನಕ್ಕೆ ನಾಡು ಅಪಾರ ಶೋಕದಲ್ಲಿ ಮುಳುಗಿದ್ದು, ಸಂತಾಪ ಸೂಚಿಸುತ್ತಿದೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳು ಶಾಂತರೀತಿಯಿಂದ ಪುನೀತ್ ಅವರನ್ನು ಕಳುಹಿಸಿಕೊಡಬೇಕು ಎಂದು ರಾಘವೇಂದ್ರ ರಾಜಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ವಿನಂತಿ ಮಾಡಿದ್ದಾರೆ. ಆದ್ರೆ, ಅಂತ್ಯಸಂಸ್ಕಾರ ಯಾವಾಗ? ಎಲ್ಲಿ ಎನ್ನುವುದು ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಸರ್ಕಾರ ಹಾಗೂ ಕುಟುಂಬಸ್ಥರು ಚರ್ಚಿಸಿ ಕೆಲವೇ ಕ್ಷಣಗಳಲ್ಲಿ ನಿರ್ಧಾರಕೈಗೊಳ್ಳುವ ಸಾಧ್ಯತೆಗಳಿವೆ.
ಖಾಸಗಿ ಶಾಲೆಗಳಿಗೆ ರಜೆ ಘೋಷಣೆ
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth rajkumar) ನಿಧನ ಹಿನ್ನೆಲೆಯಲ್ಲಿ ನಾಳೆ (ಅ.30) ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಈ ಕುರಿತು ಖಾಸಗಿ ಶಾಲೆಗಳ (Private School) ಒಕ್ಕೂಟ ರೂಪ್ಸಾ (Rupsa) ಇಂದು (ಅ.29) ಪ್ರಕಟಣೆ ಹೊರಡಿಸಿದ್ದು, ಪುನೀತ್ ರಾಜ್‌ಕುಮಾರ್ ಅಗಲಿಕ ಹಿನ್ನೆಲೆಯಲ್ಲಿ ಶೋಕಾಚರಣೆ ನಿಮಿತ್ತ ಖಾಸಗಿ ಶಾಲೆಗಳಿಗೆ ನಾಳೆ (ಶನಿವಾರ) ರಜೆ ಘೋಷಿಸಲಾಗಿದೆ ಎಂದು ರುಪ್ಸಾ ಒಕ್ಕೂಟ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಮಾಹಿತಿ ನೀಡಿದ್ದಾರೆ. ಆದ್ರೆ, ಸರ್ಕಾರಿ ಶಾಲೆ ರಜೆ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ.
ಎಂಬಿಎ ಪರೀಕ್ಷೆಗೆ ಮುಂದೂಡಿಕೆ
ಇನ್ನು ನಾಳೆ (ಅ.30) ನಡೆಯಬೇಕಿದ್ದ ಬೆಂಗಳೂರು ಸಿಟಿ ವಿಶ್ವವಿದ್ಯಾಲದ ಎಂಬಿಎ ಪರೀಕ್ಷೆಗಳನ್ನು ಕೂಡ ಮುಂದೂಡಲಾಗಿದೆ. ಪರೀಕ್ಷೆ ಮುಂದೂಡಿಕೆ ಕುರಿತು ಬೆಂಗಳೂರು ಸಿಟಿ ವಿಶ್ವವಿದ್ಯಾಲಯ ಸುತ್ತೋಲೆ ಹೊರಡಿಸಿದೆ.
ಎಂಬಿಎ ಅಂತಿಮ ವರ್ಷದ ಪರೀಕ್ಷೆಗಳನ್ನು ಮಂಗಳವಾರಕ್ಕೆ ಮುಂಡೂಡಲಾಗಿದೆ ಎಂದು ಬೆಂಗಳೂರು ಸಿಟಿ ವಿವಿ ಕುಲಪತಿ ಲಿಂಗರಾಜು ತಿಳಿಸಿದ್ದಾರೆ.
ಬೆಂಗ್ಳೂರಲ್ಲಿ ಮದ್ಯ ಮಾರಾಟ ನಿಷೇಧ
ಬೆಂಗಳೂರು ನಗರದಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಅ.31ರ ಮಧ್ಯರಾತ್ರಿ ವರೆಗೆ ಸಂಪೂರ್ಣವಾಗಿ ಮದ್ಯ ಮಾರಾಟ (Liquor Sale Ban) ನಿಷೇಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (Kamal Pant) ಆದೇಶ ಹೊರಡಿಸಿದ್ದು, ತತಕ್ಷಣವೇ ಜಾರಿಗೆ ಬರಲಿದೆ.
ನಗರಾದ್ಯಂತ ಫುಲ್ ಸೆಕ್ಯೂರಿಟಿ
ನಗರಾದ್ಯಂತ 6 ಸಾವಿರ ಪೊಲೀಸರು, ಕೆಎಸ್ಆರ್‌ಪಿ KSRP ಪ್ಲಟೂನ್ ನಿಯೋಜನೆ ಮಾಡಲಾಗಿದ್ದು, ಭಾನುವಾರ ಮಧ್ಯ ರಾತ್ರಿ ವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಎಷ್ಟೇ ಜನ ಬಂದ್ರೂ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗುತ್ತೆ. ಈ ಸಂದರ್ಭದಲ್ಲಿ ಕುಚೇಷ್ಟೇ ಮಾಡಿದ್ರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕಮಿಷನರ್ ಕಮಲ್ ಪಂಥ್ ಎಚ್ಚರಿಕೆ ಕೊಟ್ಟಿದ್ದಾರೆ.