ಇತ್ತೀಚೆಗೆ ಶಿವಾಜಿನಗರದ ಅಜಂ ಮಸೀದಿಗೆ ಹುಸಿ ಬಾಂಬ್‌ ಕರೆ ಪ್ರಕರಣ ಸಂಬಂಧ ಕಿಡಿಗೇಡಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಜು.11):  ಇತ್ತೀಚೆಗೆ ಶಿವಾಜಿನಗರದ ಅಜಂ ಮಸೀದಿಗೆ ಹುಸಿ ಬಾಂಬ್‌ ಕರೆ ಪ್ರಕರಣ ಸಂಬಂಧ ಕಿಡಿಗೇಡಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಉಸ್ಮಾನಿಯಾ ಜಿಲ್ಲೆಯ ಸೈಯದ್‌ ಖಾಜಿ ಮಹಮ್ಮದ್‌ ಅನ್ವರ್‌ ಉಲ್ಲಾ (37) ಬಂಧಿತನಾಗಿದ್ದು, ಜು.5ರಂದು ಮಸೀದಿಯಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಕರೆ ಮಾಡಿ ಆರೋಪಿ ತಪ್ಪಿಸಿಕೊಂಡಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ತೆಲಂಗಾಣ ರಾಜ್ಯದ ಮೆಹಬೂಬ ನಗರದಲ್ಲಿ ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹುಸಿ ಬಾಂಬ್‌ ಬೆದರಿಕೆ: ಗೋವಾ- ಮಾಸ್ಕೋ ವಿಮಾನ ಗುಜರಾತ್‌ನಲ್ಲಿ ತುರ್ತು ಭೂಸ್ಪರ್ಶ

ಮಸೀದಿಗೆ ಮಲಗು ಬಿಡದಕ್ಕೆ ಹುಸಿ ಕರೆ:

ಕೆಲಸವಿಲ್ಲದೆ ಅಲೆಯುತ್ತಿದ್ದ ಸೈಯದ್‌ ಖಾಜಿ, ತನ್ನೂರಿನ ಮಸೀದಿ ನಿರ್ಮಾಣದ ಹೆಸರಿನಲ್ಲಿ ಸಾರ್ವಜನಿಕರಿಂದ ಆತ ಚಂದ ವಸೂಲಿ ಮಾಡುತ್ತಿದ್ದ. ಹೀಗೆ ಗಳಿಸಿದ ಹಣದಲ್ಲಿ ಆತ ಮೋಜಿನ ಜೀವನ ಸಾಗಿಸುತ್ತಿದ್ದ. ಅಂತೆಯೇ ಜು.5ರಂದು ಬೆಂಗಳೂರಿಗೆ ಬಂದಿದ್ದ ಸೈಯದ್‌, ಅಂದು ರಾತ್ರಿ ಶಿವಾಜಿನಗರದ ಅಜಂ ಮಸೀದಿ ಬಳಿ ಮಲಗಲು ತೆರಳಿದ್ದ. ಆದರೆ ಅಲ್ಲಿ ವಿಶ್ರಾಂತಿ ಮಾಡಲು ಅವಕಾಶ ನೀಡದೆ ಸೈಯದ್‌ನಿಗೆ ಬೈದು ಮಸೀದಿ ಭದ್ರತಾ ಸಿಬ್ಬಂದಿ ಕಳುಹಿಸಿದ್ದರು. ಇದರಿಂದ ಕೋಪಗೊಂಡ ಸೈಯದ್‌, ಅದೇ ರಾತ್ರಿ ಆಂಧ್ರಪ್ರದೇಶದ ಕರ್ನೂಲ್‌ಗೆ ಪ್ರಯಣಿಸಲು ಬಸ್ಸೇರಿದ ಬಳಿಕ ನಗರ ಪೊಲೀಸ್‌ ನಿಯಂತ್ರಣ ಕೊಠಡಿಗೆ (ನಮ್ಮ 112) ಕರೆ ಮಾಡಿ ಶಿವಾಜಿನಗರದ ಅಜಂ ಮಸೀದಿಯಲ್ಲಿ ಮಹಾರಾಷ್ಟ್ರದ ಉಸ್ಮಾನಿಯಾ ನಗರದ ವ್ಯಕ್ತಿಗಳು ಬಾಂಬ್‌ ಸ್ಫೋಟಿಸಲು ಮಾತನಾಡುತ್ತಿದ್ದರು ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ. ತಕ್ಷಣವೇ ಈ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೆ ನಿಯಂತ್ರಣ ಸಿಬ್ಬಂದಿ ರವಾನಿಸಿದ್ದರು. ಕೂಡಲೇ ಮಸೀದಿಗೆ ತೆರಳಿ ಪೊಲೀಸರು ಪರಿಶೀಲಿಸಿದಾಗ ಇದೊಂದು ಹುಸಿ ಕರೆ ಎಂಬುದು ಗೊತ್ತಾಗಿತ್ತು.

ಬೆಂಗಳೂರಿನ ಐಟಿ ಕಂಪನಿಗೆ ಬಾಂಬ್ ಬೆದರಿಕೆ ಸತ್ಯ ಬಾಯ್ಬಿಟ್ಟ ಮಾಜಿ ಉದ್ಯೋಗಿ

ಈ ಕರೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಮೊಬೈಲ್‌ ಟವರ್‌ ಲೋಕೇಷನ್‌ ಆಧರಿಸಿ ಶಿವಾಜಿನಗರ ಪೊಲೀಸರು ಬೆನ್ನಹತ್ತಿದ್ದರು. ಆಂಧ್ರಪ್ರದೇಶದ ಕರ್ನೂಲ್‌ ಹಾಗೂ ಕಡಪ ಸುತ್ತಾಡಿ ಕೊನೆಗೆ ಮೆಹಬೂಬ ನಗರದಲ್ಲಿದ್ದಾಗ ಆರೋಪಿಯನ್ನು ಬಂಧಿಸಲಾಯಿತು. ಬಳಿಕ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತನಗೆ ಮಸೀದಿಯಲ್ಲಿ ಮಲಗು ಅವಕಾಶ ನೀಡದ ಕಾರಣಕ್ಕೆ ಈ ಕೃತ್ಯ ಎಸಗಿದ್ದಾಗಿ ಸೈಯದ್‌ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.