ಬೆಂಗಳೂರು(ಆ.15): ನಗರದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆಗೆ ವ್ಯವಸ್ಥಿತ ಸಂಚು ರೂಪಿಸಿ ಎಸ್‌ಡಿಪಿಐ ತೋಡಿದ ಖೆಡ್ಡಾಕ್ಕೆ ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಸೋದರ ಸಂಬಂಧಿ ನವೀನ್‌ ಸುಲಭವಾಗಿ ಬಿದ್ದಿದ್ದಾನೆ ಎಂದು ಪೊಲೀಸ್‌ ತನಿಖೆ ಬೆಳಕಿಗೆ ಬಂದಿದೆ.

ಅಲ್ಪಸಂಖ್ಯಾತರ ಪ್ರಾಬಲ್ಯದ ಕ್ಷೇತ್ರದಲ್ಲಿ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರ ಸತತ ಎರಡು ಬಾರಿ ಭರ್ಜರಿಯಾಗಿ ಗೆದ್ದಿದ್ದು, ಎಸ್‌ಡಿಪಿಐ ಮುಖಂಡರಲ್ಲಿ ಅಸಹನೆ ಮೂಡಿಸಿತ್ತು. ಶಾಸಕರ ರಾಜಕೀಯ ಏಳಿಗೆಗೆ ತಡೆ ಒಡ್ಡಲು ಯೋಜಿಸಿದ್ದ ಆರೋಪಿಗಳಿಗೆ, ಶಾಸಕರ ಅಕ್ಕನ ಮಗ ನವೀನ್‌ ದಾಳವಾಗಿ ಸಿಕ್ಕಿದ್ದಾನೆ ಎನ್ನಲಾಗಿದೆ.

ನವೀನ್‌ ತಲೆಗೆ 51 ಲಕ್ಷ ಬಹುಮಾನ ಘೋಷಿಸಿದ್ದವನ ಬಂಧನ

ಕಡು ಬಲಪಂಥೀಯವಾದಿ ಅಲ್ಲದ ನವೀನ್‌, ಕಾಂಗ್ರೆಸ್‌ ಶಾಸಕರಾಗಿದ್ದ ತನ್ನ ಸೋದರ ಮಾವನ ಜತೆ ಗುರುತಿಸಿಕೊಂಡಿದ್ದ. ಕೊರೋನಾ ವೇಳೆ ಪಾದರಾಯನಪುರದಲ್ಲಿ ನಡೆದ ಗಲಾಟೆ ಹಾಗೂ ದೆಹಲಿಯ ತಬ್ಲಿಘಿ ಪ್ರಕರಣಗಳನ್ನು ಫೇಸ್‌ಬುಕ್‌ನಲ್ಲಿ ನವೀನ್‌ ಟೀಕಿಸಿ ಪೋಸ್ಟ್‌ ಹಾಕಿದ್ದ. ಅಲ್ಲಿಂದ ಎಸ್‌ಡಿಪಿಐ ಜತೆ ಆತನ ಪೋಸ್ಟ್‌ ವಾರ್‌ ಶುರುವಾಗಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಫೇಸ್‌ಬುಕ್‌ನಲ್ಲಿ ಐದು ಸಾವಿರ ಸ್ನೇಹಿತರು ಹಾಗೂ 2,500 ಫಾಲೋವ​ರ್ಸ್‌ ನವೀನ್‌ ಹೊಂದಿದ್ದು, ಆರ್‌.ಟಿ.ನಗರದ ಎಸ್‌ಡಿಪಿಐ ಮುಖಂಡ ಫೈರೋಜ್‌ ಪಾಷ ಸಹ ಸ್ನೇಹಿತನಾಗಿದ್ದ. ಪಾದರಾಯನಪುರ ಗಲಾಟೆ ವಿಚಾರದಲ್ಲಿ ನವೀನ್‌ ಪೋಸ್ಟ್‌ ಗಮನಿಸಿದ ಫೈರೋಜ್‌, ನವೀನ್‌ನನ್ನು ಪ್ರಚೋದಿಸುವಂತೆ ಪ್ರತಿಯಾಗಿ ಆತನ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸುತ್ತಿದ್ದ. ಹೀಗೆ ಫೇಸ್‌ಬುಕ್‌ನಲ್ಲಿ ನಿರಂತರವಾಗಿ ಒಂದೊಂದೇ ವಿಚಾರಕ್ಕೆ ಆತನನ್ನು ಪ್ರಚೋದಿಸುತ್ತಲೇ ತಮ್ಮ ಖೆಡ್ಕಾಕ್ಕೆ ಬೀಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ಗಲಭೆ: ಪೊಲೀಸ್‌ ಸ್ನೇಹಿತನಾಗಿದ್ದ ಫೈರೋಜ್‌ ಪಾಷ!

ಅಯೋಧ್ಯೆಯಲ್ಲಿ ಆ.5 ರಂದು ರಾಮಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ನಿಮಿತ್ತ ನವೀನ್‌, ಕಾವಲ್‌ ಬೈರಸಂದ್ರದಲ್ಲಿ ಜನರಿಗೆ ಅನ್ನ ಸಂತರ್ಪಣೆ ಆಯೋಜಿಸಿದ್ದ. ಫೇಸ್‌ಬುಕ್‌ನಲ್ಲಿ ಕೂಡಾ ರಾಮಮಂದಿರ ಸ್ಥಾಪನೆಗೆ ಶುಭಕೋರಿ ಪೋಸ್ಟ್‌ ಹಾಕಿದ್ದ. ಆಗಲೂ ‘ದೇವರ’ ವಿಷಯಕ್ಕೆ ನವೀನ್‌ ಮತ್ತು ಫೈರೋಜ್‌ ಪಾಷಾ ನಡುವೆ ಪೋಸ್ಟ್‌ ವಾರ್‌ ನಡೆದಿದೆ.

ಗೂಗಲ್‌ ಇಮೇಜ್‌ ಪೋಸ್ಟ್‌:

ಅಂತೆಯೇ ಅ.11 ರಂದು ಮಧ್ಯಾಹ್ನ 1.46 ನಿಮಿಷಕ್ಕೆ ಫೇಸ್‌ಬುಕ್‌ನಲ್ಲಿ ರಾಮನ ಕುರಿತ ಮಾಜಿ ಸಚಿವರೊಬ್ಬರ ಅವಹೇಳನಕಾರಿ ಹೇಳಿಕೆಯ ಮಾಧ್ಯಮ ಪ್ರಸಾರದ ಸುದ್ದಿಯನ್ನು ನವೀನ್‌ಗೆ ಫೈರೋಜ್‌ ಟ್ಯಾಗ್‌ ಮಾಡಿ ಟಾಂಟ್‌ ಕೊಟ್ಟಿದ್ದ. ಫೈರೋಜ್‌ ಪೋಸ್ಟ್‌ ಅನ್ನು ಸಂಜೆ 5.46 ನಿಮಿಷಕ್ಕೆ ನೋಡಿ ಕೆರಳಿದ ನವೀನ್‌, ಫೈರೋಜ್‌ಗೆ ಪ್ರತ್ಯುತ್ತರ ನೀಡಲು ಮುಂದಾಗಿದ್ದಾನೆ. ಆಗ ಗೂಗಲ್‌ನಲ್ಲಿ ಇಸ್ಲಾಂ ಧರ್ಮಗುರು ಪೈಗಂಬರ್‌ ಕುರಿತ ಆಕ್ಷೇಪಾರ್ಹ ಬರಹದ ಇಮೇಜ್‌ ಅನ್ನು ಸ್ಕ್ರೀನ್‌ ಶಾಟ್‌ ಮಾಡಿ ಫೈರೋಜ್‌ಗೆ ಟ್ಯಾಗ್‌ ಮಾಡಿದ್ದಾನೆ. ನವೀನ್‌ ಹಾಕಿದ ವಿವಾದಾತ್ಮಕ ಪೋಸ್ಟ್‌ ಅನ್ನು ಸ್ಕ್ರೀನ್‌ ಶಾಟ್‌ ಹೊಡೆದು ಫೈರೋಜ್‌, ಎಸ್‌ಡಿಪಿಐ ಗುಂಪಿನಲ್ಲಿ ವೈರಲ್‌ ಮಾಡಿದ್ದಾನೆ.

ಸಂಜೆ 8.30 ಗಂಟೆಗೆ ನವೀನ್‌ಗೆ ಕರೆ ಮಾಡಿದ ಕುಟುಂಬದ ಸದಸ್ಯರು, ‘ನಿನಗೆ ಹುಚ್ಚು ಹಿಡಿದಿದ್ದೀಯಾ. ನೀನು ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮಗುರು ಕುರಿತು ಪೋಸ್ಟ್‌ನಿಂದ ದೊಡ್ಡ ಗಲಾಟೆಯಾಗುತ್ತಿದೆ. ಮೊದಲು ಪೋಸ್ಟ್‌ ಡಿಲೀಟ್‌ ಮಾಡು’ ಎಂದು ಬೈದಿದ್ದಾರೆ. ತಕ್ಷಣವೇ ನವೀನ್‌, ಫೇಸ್‌ಬುಕ್‌ನಲ್ಲಿ ಆ ವಿವಾದಾತ್ಮಕ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿ ಮೊಬೈಲ್‌ ಅನ್ನು ಸ್ನೇಹಿತರ ಬಳಿ ಕೊಟ್ಟಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.