Asianet Suvarna News Asianet Suvarna News

ಮುಖಾಮುಖಿ ಸಂದರ್ಶನ: ಎಚ್‌ಡಿಕೆ ಕಾಲದ ವರ್ಗಾವಣೆ ಮಾಹಿತಿ ಹೊರಬರಲಿ - ಚಲುವರಾಯಸ್ವಾಮಿ

ಮುಖಾಮುಖಿ

  • ಅಧಿಕಾರದ ವೇಳೆ ಎಚ್ಡಿಕೆ ಯಾರಿಗೂ ಬೆಲೆ ನೀಡಲ್ಲ
  •  ನಾವು ಕುಮಾರಸ್ವಾಮಿ, ದೇವೇಗೌಡ ಅಂದರೆ ನಾವು ಗೌರವ ಕೊಡುತ್ತೇವೆ. ಪ್ರೀತಿ ಮಾಡುತ್ತೇವೆ
  • ಸಂದರ್ಶನ- ಚಲುವರಾಯಸ್ವಾಮಿ, ಕೃಷಿ ಸಚಿವ
Face to face interview with agriculuture minister chaluvarayaswamy bengaluru rav
Author
First Published Jul 13, 2023, 6:49 AM IST

ಸಿದ್ದು ಚಿಕ್ಕಬಳ್ಳಕೆರೆ

ಜೆಡಿಎಸ್‌ ಭದ್ರ ಕೋಟೆ ಎಂದೇ ಕರೆಯುತ್ತಿದ್ದ ಮಂಡ್ಯದಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸುವಲ್ಲಿ ಕಾಣಿಕೆ ನೀಡಿರುವ ಚಲುವರಾಯಸ್ವಾಮಿ ಅವರು ಇದೀಗ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ. ಜತೆಗೆ ಮಹತ್ವದ ಕೃಷಿ ಖಾತೆಯ ಚುಕ್ಕಾಣಿಯನ್ನೂ ಹಿಡಿದಿದ್ದಾರೆ. ಒಂದು ಕಾಲದಲ್ಲಿ ಜನತಾ ಪರಿವಾರದ ಸದಸ್ಯನಾಗಿ, ಕುಮಾರಸ್ವಾಮಿ ಟೀಂನ ಅವಿಭಾಜ್ಯ ಅಂಗವಾಗಿದ್ದ ಚಲುವರಾಯಸ್ವಾಮಿ ಅವರು ಇದೀಗ ಜೆಡಿಎಸ್‌ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿರುವ ರಾಜಕಾರಣಿ. ಈ ಸ್ಥಿತ್ಯಂತರದ ಬಗ್ಗೆ ಚಲುವರಾಯಸ್ವಾಮಿ ಅಭಿಪ್ರಾಯವೇನು? ಮಂಡ್ಯದ ಜನತೆ ಈ ಬಾರಿ ಜೆಡಿಎಸ್‌ ಬದಲಾಗಿ ಕಾಂಗ್ರೆಸ್‌ ಪರ ಒಲವು ತೋರಿದ್ದು ಏಕೆ? ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದವರು ಕಾಂಗ್ರೆಸ್‌ಗೆ ಒಲವು ತೋರಿದ್ದು ಏಕೆ? ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಗಳ ಭವಿಷ್ಯವೇನು? ಸುಮಲತಾ ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆಯೇ? ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪ್ಲಾನ್‌ ಏನು? ಎಂಬ ರಾಜಕಾರಣದ ಪ್ರಶ್ನೆಗಳಲ್ಲದೆ ಮುಂಗಾರು ಮಳೆ ಕೊರತೆಯಿಂದ ರಾಜ್ಯದ ಕೃಷಿ ಕ್ಷೇತ್ರದ ಮೇಲಾಗಿರುವ ಪರಿಣಾಮವೇನು? ಗೊಬ್ಬರ, ಬೀಜದ ಕೊರತೆಯಿದೆಯೇ? ರಾಜ್ಯ ಕೃಷಿಕರು ಚಲುವರಾಯಸ್ವಾಮಿ ಅವರಿಂದ ಏನು ನಿರೀಕ್ಷಿಸಬಹುದು ಎಂಬಿತ್ಯಾದಿ ಪ್ರಶ್ನೆಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಕೃಷಿ ಸಚಿವ ಚಲುವರಾಯಸ್ವಾಮಿ.

ಜೆಡಿಎಸ್‌ ಕಳೆದ ಬಾರಿ ಏಳಕ್ಕೆ ಏಳರಲ್ಲೂ ಗೆದ್ದಿದ್ದ ಮಂಡ್ಯದಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಿದ್ದಿರಿ? ಅದು ಹೇಗೆ ಸಾಧ್ಯವಾಯ್ತು?

ಇದಕ್ಕೆ ಮುಖ್ಯ ಕಾರಣ ಜೆಡಿಎಸ್‌ನ ವೈಫಲ್ಯ. ಕಳೆದ ಬಾರಿ ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು, ಮೂರು ಜನ ಎಂಎಲ್ಸಿಗಳನ್ನು ಜೆಡಿಎಸ್‌ನವರು ಹೆ*ೂಂದಿದ್ದರು. ಆದರೆ, ಜನರಿಗೆ ನೀಡಿದ್ದ ಭರವಸೆ ಈಡೇರಿಸಲಿಲ್ಲ. ಅಭಿವೃದ್ಧಿ ಬಗ್ಗೆ ಗಮನ ಕೊಡಲಿಲ್ಲ. ಮೈಸೂರು -ಬೆಂಗಳೂರು ರಸ್ತೆ ಹಾಳಾಗಿದ್ದರೂ ಅದನ್ನು ಸರಿಪಡಿಸಲು ಕನಿಷ್ಠ ಗಮನ ಕೊಡಲಿಲ್ಲ. ಈಗ ಯಾರೇ ಮಂಡ್ಯಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿದರೆ ಗೊತ್ತಾಗತ್ತೆ, ಜನ ಏಕೆ ಜೆಡಿಎಸ್‌ಗೆ ಮತ ಹಾಕಲಿಲ್ಲ ಅಂತ.

'ನಾಚಿಕೆ ಆಗುವಂಥದ್ದು ನಾನೇನ್‌ ಮಾಡಿದ್ದೇನೆ..ಸುಮ್ನೆ ಕುಂತ್ಕೋ' ಚಲುವರಾಯಸ್ವಾಮಿಗೆ ಎಚ್‌ಡಿಕೆ ಸಿಟ್ಟು

ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ನತ್ತ ಶಿಫ್‌್ಟಆದಂತಿದೆ?

ಒಕ್ಕಲಿಗ ಸಮುದಾಯ ಜೆಡಿಎಸ್‌ಗೆ ಎರಡು ಬಾರಿ ಅವಕಾಶ ನೀಡಿತ್ತು. ಈಗ ನಮ್ಮಲ್ಲಿ ಡಿ.ಕೆ. ಶಿವಕುಮಾರ್‌ ಒಕ್ಕಲಿಗ ಲೀಡರ್‌ ಇದ್ದಾರೆ. ಅವರಿಗೆ ನೀಡೋಣ ಅಂತ. ಅಲ್ಲದೆ, ಕಾಂಗ್ರೆಸ್‌ಗೆ ಮತ ಹಾಕಿದರೆ ಒಂದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಜೆಡಿಎಸ್‌ಗೆ ಅಧಿಕಾರ ಕೊಟ್ಟರೆ ಹೆಚ್ಚೆಚ್ಚು ಅಂದರೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಸಮ್ಮಿಶ್ರ ಸರ್ಕಾರಗಳು ಸುಭದ್ರವಾಗಿರಲ್ಲ. ಅಭಿವೃದ್ಧಿ ಬೇಡ. ಕಡೆ ಪಕ್ಷ ಒಳ್ಳೆ ಆಡಳಿತವನ್ನು ಕೊಟ್ಟಉದಾಹರಣೆ ಇತಿಹಾಸದಲ್ಲಿ ಇಲ್ಲ. ಹೀಗಾಗಿ ಜನ ಸಮ್ಮಿಶ್ರ ಸರ್ಕಾರ ಬೇಡ ಅಂತ ತೀರ್ಮಾನಿಸಿದ್ದರು. ನನ್ನ ಪ್ರಕಾರ ಕರ್ನಾಟಕದಲ್ಲಿ ಭವಿಷ್ಯದಲ್ಲಿ ಇನ್ನೆಂದೂ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ.

ಕುಮಾರಸ್ವಾಮಿ ಅವರಿಗೆ ನಿಮ್ಮ ಮೇಲೆ ‘ಪ್ರೀತಿ’ ಶುರುವಾಗಿದೆಯಲ್ಲ?

ಕುಮಾರಸ್ವಾಮಿ ಅವರ ಇಂತಹ ಧೋರಣೆಗೆ ಯಾರೂ ಏನೂ ಮಾಡಲು ಆಗೋದಿಲ್ಲ. ನಾವು ಕುಮಾರಸ್ವಾಮಿ, ದೇವೇಗೌಡ ಅಂದರೆ ನಾವು ಗೌರವ ಕೊಡುತ್ತೇವೆ. ಪ್ರೀತಿ ಮಾಡುತ್ತೇವೆ. ಆದರೆ, ಅವರೂ ನಮಗೆ ಗೌರವ ಕೊಡಬೇಕು ಮತ್ತು ಪ್ರೀತಿ ಮಾಡಬೇಕು ಅಂತ ಡಿಮ್ಯಾಂಡ್‌ ಮಾಡಲು ಆಗುತ್ತಾ? ಅವರು ದ್ವೇಷ ಮಾಡುತ್ತಾರೋ, ತಪ್ಪು ಹುಡುಕುತ್ತಾರೋ, ಅನಾವಶ್ಯಕವಾದ ವಿಚಾರಗಳನ್ನು ಎತ್ತಿ ನಮ್ಮ ವಿರುದ್ಧ ಚರ್ಚೆ ಮಾಡುತ್ತಾರೋ ಮಾಡಲಿ... ವಿಚಿತ್ರವೆಂದರೆ, ಕುಮಾರಸ್ವಾಮಿ ಅವರಿಗೆ ಅಧಿಕಾರ ಸಿಕ್ಕಾಗ ಎಲ್ಲರನ್ನೂ ಒಟ್ಟಿಗೆ ಇಟ್ಟುಕೊಂಡು ಹೋಗುವ ರಾಜಕಾರಣ ಮಾಡಲ್ಲ. ಅಧಿಕಾರದಿಂದ ಹೊರಗೆ ಬಂದಾಗ ನಾವು ಸರಿ, ಬೇರೆಯವರು ತಪ್ಪು ಅಂತ ಮಾತನಾಡುತ್ತಾರೆ.

ಯಾಕೆ ಹೀಗೆ?

ರಾಜಕೀಯದಲ್ಲಿ ಮಾರ್ಗದರ್ಶನ ಮಾಡಲು ದೇವೇಗೌಡರಿಗಿಂತ ದೊಡ್ಡವರು ರಾಜ್ಯದಲ್ಲಿ ಯಾರಿದ್ದಾರೆ? ಇಂತಹ ದೇವೇಗೌಡರಿಂದಲೇ ಮಾರ್ಗದರ್ಶನ ತೆಗೆದುಕೊಳ್ಳಲು ಕುಮಾರಸ್ವಾಮಿ ತಯಾರಿಲ್ಲ ಅಂದರೆ ಯಾರು ಏನು ಮಾಡಲು ಸಾಧ್ಯ? ನೋಡಿ, ದೇವೇಗೌಡರ ರಾಜಕೀಯ ಇತಿಹಾಸದಲ್ಲಿ ಭ್ರಷ್ಟಾಚಾರ ಹಾಗೂ ವರ್ಗಾವಣೆ ಕುರಿತು ಅಸೆಂಬ್ಲಿಯಲ್ಲಿ ಚರ್ಚೆ ಮಾಡಿದ್ದು ಇದೆಯೇ? ಇಂತಹ ವಿಚಾರಗಳ ಬಗ್ಗೆ ಚರ್ಚೆ ಸರಿಯಲ್ಲ ಎಂದು ದೇವೇಗೌಡರು ನಾವು ಅವರೊಂದಿಗೆ ಇದ್ದಾಗ ಹಲವು ಬಾರಿ ಹೇಳಿದ್ದರು. ಇಂತಹ ದೇವೇಗೌಡರ ಮಗನಾಗಿ ಕುಮಾರಸ್ವಾಮಿ ಈ ರೀತಿ ನಡೆದುಕೊಳ್ಳುತ್ತಾರೆ ಎಂದರೆ ಏನು ಹೇಳೋದು? ಇಷ್ಟಕ್ಕೂ ಕುಮಾರಸ್ವಾಮಿ ಅವರು ಸಿಎಂ ಆಗಿದ್ದ 14 ತಿಂಗಳಲ್ಲಿ ಎಷ್ಟುವರ್ಗಾವಣೆಯಾಗಿದೆ ಎಂಬ ಮಾಹಿತಿ ತೆಗೆಯಲಿ ಆಗ ಸತ್ಯ ಗೊತ್ತಾಗತ್ತೆ. ಇತ್ತೀಚೆಗೆ ನನ್ನನ್ನು ಮಂಡ್ಯದ ಚಂದ್ರೇಗೌಡ ಅಂತ ಸೀನಿಯರ್‌ ಕೆಎಎಸ್‌ ಆಫೀಸರ್‌ ಭೇಟಿಯಾಗಿದ್ದರು. ಈಗ ಅವರು ರಿಟೈರ್‌ ಆಗಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಚಂದ್ರೇಗೌಡರನ್ನು ಒಂದೇ ವರ್ಷದಲ್ಲಿ ಏಳು ಬಾರಿ ವರ್ಗಾವಣೆ ಮಾಡಿದ್ದರು.

ಪೆನ್‌ಡ್ರೈವ್‌ ಇದೆ ಅಂತಾರೆ?

ಅದರ ಬಗ್ಗೆ ಚರ್ಚೆ ಮಾಡೋದೆ ಬೇಡ ಅನಿಸತ್ತೆ. ಪೆನ್‌ಡ್ರೈವ್‌ ಇದ್ದರೆ ಸ್ಪೀಕರ್‌ಗೆ ಕೊಡಲಿ ಕ್ರಮ ಕೈಗೊಳ್ಳುತ್ತಾರೆ.

ಓಕೆ, ವಿಧಾನಸಭೆಯಲ್ಲಿನ ನಾಗಾಲೋಟ ಲೋಕಸಭೆ ಚುನಾವಣೆಯಲ್ಲೂ ಮಂಡ್ಯದಲ್ಲಿ ಮುಂದುವರೆಯತ್ತಾ?

ಶೇ. 100ಕ್ಕೆ ನೂರರಷ್ಟುಲೋಕಸಭೆ ಚುನಾವಣೆಯಲ್ಲಿ ಮಂಡ್ಯವನ್ನು ಕಾಂಗ್ರೆಸ್‌ ಪಕ್ಷವೇ ಗೆಲ್ಲಲಿದೆ.

ಯಾರಾಗುತ್ತಾರೆ ಕ್ಯಾಂಡಿಡೇಟ್‌? ಜೆಡಿಎಸ್‌ನಿಂದ ಯಾರಾದರೂ ಬರುತ್ತಾರ?

ಹಾಗೇನೂ ಇಲ್ಲ. ನಮ್ಮಲ್ಲೇ ಹಲವಾರು ಆಕಾಂಕ್ಷಿಗಳಿದ್ದಾರೆ. ಚಿಂತನೆ ನಡೆದಿದೆ.

ಸುಮಲತಾ ಅವರನ್ನು ಕರೆತರುವ ಸಾಧ್ಯತೆಯಿದೆಯೆ?

ಸುಮಲತಾ ಅವರು ಬಿಜೆಪಿಯಲ್ಲಿದ್ದಾರೆ. ಅದು ಅವರ ವೈಯಕ್ತಿಕ ತೀರ್ಮಾನ. ಅದರ ಬಗ್ಗೆ ಗೌರವವಿದೆ. ಒಂದು ಬಾರಿ ಬಿಜೆಪಿ ಹಾಗೂ ಇನ್ನೊಂದು ಬಾರಿ ಕಾಂಗ್ರೆಸ್‌ ಅಂತ ಪಾಪ ಅವರು ಹೇಗೆ ಮಾಡೋಕೆ ಆಗುತ್ತೆ?

ಲೋಕಸಭೆಗೆ ಪಕ್ಷದ ತಯಾರಿ ಹೇಗೆ ನಡೆದಿದೆ?

ವಿಧಾನಸಭೆಯಲ್ಲಿ ಮಾಡಿದಂತೆ ಲೋಕಸಭೆಗೂ ಬೇಗ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ಬಹುತೇಕ ಡಿಸೆಂಬರ್‌ ವೇಳೆಗೆ ಅಭ್ಯರ್ಥಿ ಆಯ್ಕೆ ಪೂರ್ಣಗೊಳಿಸಿ ಚುನಾವಣೆಗೆ ತಯಾರಿ ಆರಂಭಿಸುತ್ತೇವೆ. ಅಭ್ಯರ್ಥಿಗಳ ಪಟ್ಟಿಅಧಿಕೃತ ಪ್ರಕಟಣೆ ತಡವಾದರೂ ಇಂತವರೆ ಅಭ್ಯರ್ಥಿ ಎಂಬುದು ಎರಡು ಮೂರು ತಿಂಗಳಲ್ಲಿ ಆಗಲಿದೆ. ದೆಹಲಿಯಲ್ಲಿ ರಾಹುಲ್‌ ಗಾಂಧಿ, ಮಲ್ಲಿಕಾರ್ಜು ಖರ್ಗೆ ಹಾಗೂ ವೇಣುಗೋಪಾಲ್‌ ಹಾಗೂ ರಾಜ್ಯ ಮಟ್ಟದಲ್ಲಿ ಸಿದ್ದರಾಮಯ್ಯ, ಡಿಕೆಶಿ ಹಾಗೂ ಸುರ್ಜೇವಾಲ ಇಂತಹ ತೀರ್ಮಾನ ಕೈಗೊಳ್ಳುತ್ತಾರೆ. ಎರಡು ಮೂರು ತಿಂಗಳಲ್ಲಿ ಅಭ್ಯರ್ಥಿಯನ್ನು ಡಿಸೈಡ್‌ ಮಾಡಿ ಪಾರ್ಲಿಮೆಂಟ್‌ನಲ್ಲಿ 20 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ.

ನಿಮ್ಮ ಇಲಾಖೆ ಬಗ್ಗೆ ಹೇಳಿ. ಮುಂಗಾರು ವಿಳಂಬವಾಗಿದೆ. ಬಿತ್ತನೆ ಹೇಗಿದೆ?

ಮುಂಗಾರು ವಿಳಂಬವಾಗಿದ್ದರಿಂದ ಶೇ.50 ರಿಂದ 60 ರಷ್ಟುಮಳೆ ಕೊರತೆ ಉಂಟಾಗಿದ್ದು ಇದೀಗ ಶೇ.25 ಕ್ಕೆ ಬಂದಿದೆ. ಈಗಾಗಲೇ ಶೇ.50 ರಷ್ಟುಬಿತ್ತನೆಯಾಗಿದ್ದು ನಾಲ್ಕೈದು ದಿನಗಳಿಂದ ಕೆಲ ಜಿಲ್ಲೆಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಸೈಕ್ಲೋನ್‌ ಪ್ರಾರಂಭವಾಗಿದ್ದು ತಿಂಗಳಾಂತ್ಯದವೆರೆಗೂ ಬಿತ್ತನೆಗೆ ಅವಕಾಶ ಇರುವುದರಿಂದ ಎಲ್ಲವೂ ಸರಿ ಹೋಗಬಹುದು ಎಂಬ ಆಶಾಭಾವನೆಯಿದೆ.

ಬಿತ್ತನೆ ಬೀಜ, ರಸಗೊಬ್ಬರದ ಅಗತ್ಯ ದಾಸ್ತಾನಿದೆಯೇ ?

ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಪ್ರಾಮುಖ್ಯತೆ ನೀಡಿದ್ದು ಯಾವುದೇ ಸಮಸ್ಯೆ ಉಂಟಾಗಿಲ್ಲ. ಅಗತ್ಯ ದಾಸ್ತಾನಿದ್ದು ರಾಜ್ಯಾದ್ಯಂತ ಜಿಲ್ಲಾ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿ ಸಮನ್ವಯದಿಂದ ಕಾರ್ಯ ನಿರ್ವಹಿಸಲಾಗಿದೆ. ಕಳೆಪೆ ಬಿತ್ತನೆ ಬೀಜ, ರಸಗೊಬ್ಬರದದ ಬಗ್ಗೆ ನಿಗಾ ವಹಿಸಿದ್ದೇವೆ.

ಆಹಾರ ಉತ್ಪಾದನೆ ಕುಂಠಿತವಾಗುವ ಆತಂಕವಿದೆಯಾ ?

ಸಧ್ಯ ಉತ್ತಮ ಮಳೆ ಆಗುತ್ತಿರುವುದರಿಂದ ಬಿತ್ತನೆ ಚುರುಕಾಗುವ ವಿಶ್ವಾಸವಿದ್ದು ಆಹಾರ ಉತ್ಪಾದನೆ ಕುಂಠಿತವಾಗುವುದಿಲ್ಲ. ಮೋಡ ಬಿತ್ತನೆ ಬಗ್ಗೆ ಸಧ್ಯಕ್ಕೆ ಚಿಂತನೆ ನಡೆಸಿಲ್ಲ.

ಕೊಬ್ಬರಿ, ತೆಂಗು ಬೆಲೆ ಕಡಿಮಯಾಗಿದ್ದು ಮಾರುಕಟ್ಟೆಮಧ್ಯಪ್ರವೇಶದ ಉದ್ದೇಶವಿದೆಯೇ ?

ರೈತರ ಬೆಳೆಗಳಿಗೆ ಮೂರ್ನಾಲ್ಕು ತಿಂಗಳು ಮಾತ್ರ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡುವುದು, ಬಳಿಕ ಸುಮ್ಮನಾಗುವುದರಿಂದ ಸಮಸ್ಯೆ ಉಂಟಾಗುತ್ತದೆ. ಕೊಬ್ಬರಿ, ತೆಂಗು ಬೆಳೆಗಾರರ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಸಧ್ಯದಲ್ಲೇ ಈ ಬಗ್ಗೆ ಸಭೆ ಕರೆಯಲಾಗುವುದು.

ರೈತರ ಪಂಪ್‌ಸೆಟ್‌ಗೆ ಹಗಲು ಹೊತ್ತು ತ್ರೀ ಫೇಸ್‌ ವಿದ್ಯುತ್‌ ನೀಡುವಿರಾ ?

ಹಗಲು ಹೊತ್ತಿನಲ್ಲಿ ದಿನಕ್ಕೆ ಏಳೆಂಟು ಗಂಟೆ ರೈತರಿಗೆ ತ್ರೀ ಫೇಸ್‌ ವಿದ್ಯುತ್‌ ನೀಡುವುದಾಗಿ ನಮ್ಮ ಪ್ರಣಾಳಿಕೆಯಲ್ಲೇ ಭರವಸೆ ನೀಡಿದ್ದೆವು. ಅದನ್ನು ಖಂಡಿತವಾಗಿಯೂ ಜಾರಿಗೊಳಿಸುತ್ತೇವೆ. ಇಂಧನ ಇಲಾಖೆ ಜೊತೆ ಚರ್ಚಿಸಿ ಅನಂತರ ಯಾವಾಗಿನಿಂದ ಜಾರಿ ಎಂಬುದನ್ನು ನಿರ್ಧರಿಸುತ್ತೇವೆ.

5 ಗ್ಯಾರೆಂಟಿ ಯೋಜನೆಗಳು ಇಲಾಖೆ ಮೇಲೆ ಪರಿಣಾಮ ಬೀರಿವೆಯೇ ?

ಗ್ಯಾರೆಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೊಢೀಕರಿಸಲಾಗುವುದು. ಇಲಾಖೆ ಯೋಜನೆಗಳಿಗೆ ಯಾವುದೇ ಹೊಡೆತ ಬೀಳುವುದಿಲ್ಲ.

ಆದರೆ, ಬಜೆಟ್‌ನಲ್ಲಿ ಹಿಂದಿನ ಸರ್ಕಾರದ ಕೆಲ ಯೋಜನೆಗಳಿಗೆ ಕೊಕ್‌ ನೀಡಲಾಗಿದೆ ?

ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ನೀಡುತ್ತಿದ್ದ 4 ಸಾವಿರ ರು. ನಿಲ್ಲಿಸಲಾಗಿದೆ. ಇದಕ್ಕೆ 2 ಸಾವಿರ ಕೋಟಿ ರು. ಬೇಕಾಗಿತ್ತು. ಆದರೆ ನಾವು ಮಹಿಳೆಯರಿಗೆ ತಲಾ 2 ಸಾವಿರ ರು. ಮಾಸಿಕವಾಗಿ ನೀಡುವ ‘ಗೃಹಲಕ್ಷ್ಮೇ’ ಯೋಜನೆಗೆ ವಾರ್ಷಿಕ 20 ಸಾವಿರ ಕೋಟಿ ರು. ವೆಚ್ಚವಾಗಲಿದೆ. ಕೃಷಿ ಹೊಂಡ, ಭೂ ಸಿರಿ ಯೋಜನೆಗಳೂ ಕಾಲಮಿತಿಯಲ್ಲಿ ಜಾರಿಯಾಗಲಿವೆ.

ಸಹಕಾರ ಸಂಘಗಳಲ್ಲಿ ಬಲಾಢ್ಯರಿಗೇ ಸಾಲ ಸಿಗುತ್ತದೆ ಎಂಬ ಆಪವಾದವಿದೆ ?

ಇದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದ್ದರಿಂದ ಹೊಸದಾಗಿ ಸಾಲ ಪಡೆಯಲು ಬರುವವರಿಗೆ ಆದ್ಯತೆ ನೀಡಬೇಕು ಎಂದು ಸಹಕಾರ ಸಚಿವರಿಗೆ ಮನವಿ ಮಾಡಲು ನಿರ್ಧರಿಸಿದ್ದೇನೆ.

ಬೆಳೆ ವಿಮೆ ಮಾಡಿಸುವ ಅವಧಿ ವಿಸ್ತರಣೆ ಆಗಲಿದೆಯಾ ?

ಕೆಲ ಬೆಳೆಗಳಿಗೆ ವಿಮೆ ಮಾಡಿಸುವ ಅವಧಿ ಮುಗಿದಿದ್ದು ವಿಸ್ತರಿಸಬೇಕು ಎಂಬ ಒತ್ತಾಯ ರೈತರಿಂದ ಕೇಳಿಬಂದಿದೆ. ಕಾಲಾವಕಾಶ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು.

ಭೂ ಸುಧಾರಣಾ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನೂ ರದ್ದು ಮಾಡಲಾಗುವುದೇ ?

ರೈತರ ಬೇಡಿಕಗಳೇನು, ಸಾರ್ವಜನಿಕರಿಂದ ಯಾವ ವಿಷಯಕ್ಕೆ ವಿರೋಧ ವ್ಯಕ್ತವಾಗಿತ್ತು ಎಂಬ ಬಗ್ಗೆ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು.

'ಸೆಕ್ಯುಲರ್ ಅಂತಾ ಹೇಳಿ ದೇವೇಗೌಡರ ಕುತ್ತಿಗೆ ಕುಯ್ದವರು ನೀವು..' ಸಿದ್ಧುಗೆ ಎಚ್‌ಡಿಕೆ ವಾಗ್ಭಾಣ!

ಸಿಬ್ಬಂದಿ ಕೊರತೆ ಇಲಾಖೆ ಕಾರ್ಯವೈಖರಿಗೆ ಹಿನ್ನಡೆ ಉಂಟು ಮಾಡಿಲ್ಲವೇ ?

ಇಲಾಖೆಯಲ್ಲಿ ಶೇ.57ಕ್ಕೂ ಅಧಿಕ ಸಿಬ್ಬಂದಿ ಕೊರತೆ ಇದ್ದು, ಸುಮಾರು 5 ಸಾವಿರ ಹುದ್ದೆ ಖಾಲಿ ಇವೆ. ಇದರಲ್ಲಿ ಪ್ರಮುಖವಾಗಿ 2 ಸಾವಿರ ಕೃಷಿ ಸಹಾಯಕರ ಹುದ್ದೆ ಭರ್ತಿ ಮಾಡಬೇಕಿದೆ. ಹಣಕಾಸು ಇಲಾಖೆ ಜೊತೆ ಚರ್ಚಿಸಿ ಎಷ್ಟುಸಾಧ್ಯವೋ ಅಷ್ಟುಹುದ್ದೆಯನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು.

Follow Us:
Download App:
  • android
  • ios