ವಿದ್ಯುತ್‌ ಬಳಕೆ ಸಂಬಂಧ ಸ್ಮಾರ್ಟ್‌ ಮೀಟರ್‌ಗಳ ಅಳವಡಿಕೆ ಕಡ್ಡಾಯಗೊಳಿಸಿದ ಮತ್ತು ರಾಜಶ್ರೀ ಎಲೆಕ್ಟ್ರಿಕಲ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಟೆಂಡರ್‌ ನೀಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರು (ಜೂ.18): ವಿದ್ಯುತ್‌ ಬಳಕೆ ಸಂಬಂಧ ಸ್ಮಾರ್ಟ್‌ ಮೀಟರ್‌ಗಳ ಅಳವಡಿಕೆ ಕಡ್ಡಾಯಗೊಳಿಸಿದ ಮತ್ತು ರಾಜಶ್ರೀ ಎಲೆಕ್ಟ್ರಿಕಲ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಟೆಂಡರ್‌ ನೀಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಈ ಕುರಿತಂತೆ ಕರ್ನಾಟಕ ವಿದ್ಯುತ್‌ ಸೇನೆ, ರಾಮಚಂದ್ರ ಅನವೇರಿ ಮತ್ತು ಜಯಪಾಲ ಮತ್ತಿತರರು ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್‌ ಅವರ ನೇತೃತ್ವದ ವಿಭಾಗೀಯ ಪೀಠ, ಸರ್ಕಾರ ಹಾಗೂ ಇತರೆ ಪ್ರತಿವಾದಿಗಳಾಗಿರುವ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ), ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಸಂಸ್ಥೆ ಹಾಗೂ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಮಂಗಳವಾರ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಒಂದು ತಿಂಗಳು ಮುಂದೂಡಿತು.

ಎಲ್ಲ ಸಂಪರ್ಕಕ್ಕೆ ಸ್ಮಾರ್ಟ್‌ ಮೀಟರ್‌ ಕಡ್ಡಾಯ?: ರಾಜ್ಯದಲ್ಲಿರುವ ಎಲ್ಲಾ ವಿದ್ಯುತ್‌ ಸಂಪರ್ಕಗಳಿಗೂ ಕಡ್ಡಾಯವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಸಲು ಇಂಧನ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆಸ್ತಿಗಳಿಗೆ ಶೇಕಡ 2ರಷ್ಟು ಸೆಸ್‌ ವಿಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರವು ರಾಜ್ಯದಲ್ಲಿ ಕೇವಲ ನೂತನ ಸಂಪರ್ಕ, ತಾತ್ಕಾಲಿಕ ಸಂಪರ್ಕ ಅಲ್ಲದೆ ಎಲ್ಲಾ ವಿದ್ಯುತ್‌ ಸಂಪರ್ಕಗಳಿಗೂ ಕಡ್ಡಾಯವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಸುವಂತೆ ಸೂಚಿಸಿದೆ.

ಇದಕ್ಕಾಗಿ ಆರ್‌ಡಿಎಸ್‌ಎಸ್‌ ಯೋಜನೆಯಡಿ ಕೇಂದ್ರ ಸರ್ಕಾರದ ಸಹಾಯಧನ ಪಡೆಯಲು ಸ್ಥಳೀಯ ಸಂಸ್ಥೆಗಳಿಂದ ಎಸ್ಕಾಂಗಳಿಗೆ ಇರುವ ವಿದ್ಯುತ್‌ ಬಿಲ್‌ ಬಾಕಿ ಸಂಪೂರ್ಣ ಪಾವತಿಸಿರಬೇಕು. ಆದರೆ, ರಾಜ್ಯದಲ್ಲಿ ವಿವಿಧ ಎಸ್ಕಾಂಗಳು ಹಾಗೂ ಕೆಪಿಟಿಸಿಎಲ್‌ಗೆ ಸ್ಥಳೀಯ ಸಂಸ್ಥೆಗಳಿಂದ ಬರೋಬ್ಬರಿ 15,000 ಕೋಟಿ ರು. ಬಾಕಿ ಹಣ ಪಾವತಿಸಬೇಕು. ಇಷ್ಟು ಹಣ ಪಾವತಿಸಲು ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳಿಗೆ ಶೇ.2 ರಷ್ಟು ಸೆಸ್‌ ವಿಧಿಸಿ ಅದನ್ನು ಪ್ರತ್ಯೇಕವಾಗಿಟ್ಟು ಎಸ್ಕಾಂಗಳಿಗೆ ಪಾವತಿಸಬೇಕು.

ಬಳಿಕ ಕೇಂದ್ರ ಸರ್ಕಾರವು ಡಿಸೆಂಬರ್‌ಗೆ ಮುಗಿಯಲಿರುವ ಆರ್‌ಡಿಎಸ್‌ಎಸ್‌ ಯೋಜನೆಯ ಅವಧಿ ವಿಸ್ತರಿಸಿದರೆ ರಾಜ್ಯದಲ್ಲೂ ಎಲ್ಲಾ ಸಂಪರ್ಕಗಳಿಗೂ ಸ್ಮಾರ್ಟ್‌ ಮೀಟರ್‌ ಕಡ್ಡಾಯ ಮಾಡಬಹುದು ಎಂದು ಇಂಧನ ಇಲಾಖೆ ಪ್ರಸ್ತಾವನೆಯಲ್ಲಿ ತಿಳಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಇತ್ತೀಚೆಗೆ ದಕ್ಷಿಣ ರಾಜ್ಯಗಳ ಇಂಧನ ಸಚಿವರ ಸಭೆಯಲ್ಲಿ ಕೇಂದ್ರ ಇಂಧನ ಸಚಿವರು ರಾಜ್ಯದಲ್ಲಿ ಎಲ್ಲಾ ಸಂಪರ್ಕಗಳಿಗೂ ಸ್ಮಾರ್ಟ್‌ ಮೀಟರ್‌ ಕಡ್ಡಾಯಗೊಳಿಸಲು ಸೂಚಿಸಿದ್ದಾರೆ.