ಬೆಂಗಳೂರು (ನ. 07): ಚಳಿಗಾಲದಲ್ಲಿ ಸಹಜವಾಗಿಯೇ ವಾಯುಮಾಲಿನ್ಯದಿಂದ ಉಸಿರಾಟ ಸಂಬಂಧಿ ಕಾಯಿಲೆಗಳು ತೀವ್ರಗೊಳ್ಳುತ್ತವೆ. ಇದೀಗ ಕೊರೋನಾ ಕಾಲದಲ್ಲಿ ದೀಪಾವಳಿಗೆ ಪಟಾಕಿ ಹೊಡೆಯುವುದರಿಂದ ವಾಯುಮಾಲಿನ್ಯ ಹೆಚ್ಚಾಗಿ ಕೊರೋನಾ ಸೋಂಕಿತರಲ್ಲಿ ತೀವ್ರ ಅಪಾಯ ಸೃಷ್ಟಿಸಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರು ಹಾಗೂ ಕೊರೋನಾ ಟಾಸ್ಕ್‌ಫೋರ್ಸ್‌ ಸದಸ್ಯರಾದ ಡಾ.ಸಿ.ಎನ್‌. ಮಂಜುನಾಥ್‌, ಪಟಾಕಿ ಹೊಡೆಯುವುದರಿಂದ ನೇರವಾಗಿ ಕೊರೋನಾ ಹೆಚ್ಚಾಗಲ್ಲ. ಚಳಿಗಾಲದಲ್ಲಿ ಸಹಜವಾಗಿಯೇ ವೈರಸ್‌ ಸಂಬಂಧಿಸಿದ ಸೋಂಕು ಹೆಚ್ಚಾಗುತ್ತದೆ. ಪಟಾಕಿಯಿಂದ ವಾಯುಮಾಲಿನ್ಯ ಜಾಸ್ತಿ ಆಗುವುದರಿಂದ ಈಗಾಗಲೇ ಶ್ವಾಸಕೋಶ ಸಮಸ್ಯೆ, ಉಸಿರಾಟ ಹಾಗೂ ಅಲರ್ಜಿ ಸಮಸ್ಯೆ ಹೊಂದಿರುವವರಲ್ಲಿ ಇದು ಉಲ್ಬಣಗೊಳ್ಳುತ್ತದೆ.

ಇದರ ನಡುವೆ ಕೊರೋನಾ ಸೋಂಕು ಇರುವುದರಿಂದ ಶ್ವಾಸಕೋಶದ ರೋಗನಿರೋಧಕ ಶಕ್ತಿ ಕುಗ್ಗಿ ಸೋಂಕಿತರಾದವರಿಗೆ ಸೋಂಕಿನ ತೀವ್ರತೆ ಹೆಚ್ಚಾಗುತ್ತದೆ. ವಾಯುಮಾಲಿನ್ಯ ಜಾಸ್ತಿ ಆದಾಗ ಕೊರೋನಾ ಸೋಂಕು ತಗುಲಿದರೆ ಉಸಿರಾಟ ಸಮಸ್ಯೆ, ನ್ಯುಮೋನಿಯಾ ಸೇರಿದಂತೆ ಕಾಯಿಲೆಯ ತೀವ್ರತೆ ಜಾಸ್ತಿ ಆಗುತ್ತದೆ. ಇದರಿಂದ ಪ್ರಾಣಹಾನಿ ಹೆಚ್ಚಾಗಬಹುದು. ಹೀಗಾಗಿಯೇ ಹಲವು ರಾಜ್ಯಗಳಲ್ಲಿ ಪಟಾಕಿ ನಿಷೇಧಿಸಲಾಗಿದೆ ಎಂದು ಹೇಳಿದರು.

ಚೀನಾ ಪಟಾಕಿ ಬಳಕೆ, ಮಾರಾಟ ಮಾಡಿದ್ರೆ 2 ವರ್ಷ ಜೈಲು, ಸರ್ಕಾರದ ಆದೇಶ

ವಾಯುಮಾಲಿನ್ಯದಿಂದ ಹೃದಯಾಘಾತ:

ಭಾರತದಲ್ಲಿ ವಾಯುಮಾಲಿನ್ಯದಿಂದಲೇ ವಾರ್ಷಿಕ 13 ಲಕ್ಷ ಜನ, ವಿಶ್ವದಲ್ಲಿ 1.80 ಕೋಟಿ ಜನ ಸಾಯುತ್ತಿದ್ದಾರೆ. ಉಸಿರಾಟ, ಶ್ವಾಸಕೋಶ ಸಮಸ್ಯೆಯೇ ಅಲ್ಲದೇ ಗಾಳಿಯಲ್ಲಿ ಸಲ್ಫರ್‌ ಡೈಯಾಕ್ಸೈಡ್‌, ಹೈಡ್ರೋಜನ್‌ ಸಲ್‌ಫೈಡ್‌ನಂತಹ ಕಣಗಳು ಹೆಚ್ಚಾಗಿ ಶ್ವಾಸಕೋಶದ ಮೂಲಕ ರಕ್ತನಾಳಗಳಿಗೆ ಸೇರಿ ರಕ್ತ ಹೆಪ್ಪುಗಟ್ಟುತ್ತದೆ. ಇದರಿಂದ ಹೃದಯಾಘಾತಗಳೂ ಸಹ ಉಂಟಾಗಲಿದೆ ಎಂದು ಎಚ್ಚರಿಸಿದರು.

ಕೊರೋನಾ ತೀವ್ರತೆ ಶೇ.20 ರಿಂದ 30 ರಷ್ಟುಹೆಚ್ಚಳ:

ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ನಾಗರಾಜ್‌ ಪ್ರಕಾರ, ಪಟಾಕಿಯಿಂದ ಅಸ್ತಮಾ ರೋಗಿಗಳು ಹಾಗೂ ಮಕ್ಕಳಲ್ಲಿನ ಅಸ್ತಮಾ ತೀವ್ರವಾಗಿ ಬಾಧಿಸುತ್ತದೆ. ಶ್ವಾಸಕೋಶದ ಕ್ಯಾನ್ಸರ್‌, ಹೃದಯಾಘಾತ, ಮನೋವೈಜ್ಞಾನಿಕ ಸಮಸ್ಯೆಗಳು ಉಂಟಾಗಲಿವೆ. ಇನ್ನು ಕೊರೋನಾದ ತೀವ್ರತೆ ಶೇ.20ರಿಂದ 30ರಷ್ಟುಹೆಚ್ಚಾಗಲಿದೆ ಎಂದು ಹೇಳಿದರು.

ಹೀಗಾಗಿ ಅಸ್ತಮಾ ರೋಗಿಗಳು, ಬಾಣಂತಿಯರು, ಮಕ್ಕಳು, ಶ್ವಾಸಕೋಶ ಅಥವಾ ಹೃದಯ ಸಂಬಂಧಿ ಕಾಯಿಲೆಗಳು ಇರುವವರು ಪಟಾಕಿ ಸಿಡಿಸುವಾಗ ಮನೆಯಲ್ಲೇ ಇರುವುದು ಉತ್ತಮ. ಹಸಿರು ಪಟಾಕಿಗಳಿಂದ ರಾಸಾಯನಿಕ ದುಷ್ಪರಿಣಾಮ ಕಡಿಮೆ ಇದ್ದರೂ, ಪಟಾಕಿ ಪಟಾಕಿಯೇ. ಹೀಗಾಗಿ ದೀಪಗಳ ಮೂಲಕ ದೀಪಾವಳಿ ಆಚರಿಸುವುದೇ ಉತ್ತಮ ಎಂದರು.